ಗಣೇಶ ಮಂಟಪಗಳಲ್ಲಿ ವಿನೂತನ ಅಭಿಯಾನ…!

bkt-10-11
ಬಾಗಲಕೋಟೆ ನಗರದ ವಿವಿಧ ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪನೆ ಸ್ಥಳದಲ್ಲಿ ಬಸವೇಶ್ವರ ಹಾಗೂ ಶಿವಾಜಿ ಮಹಾರಾಜರ ಮೂರ್ತಿಗಳ ಅವಕಾಶ ಕಲ್ಪಿಸುವಂತೆ ರಾಜ್ಯಪಾಲರು, ಮುಖ್ಯಮಂತ್ರಿಗಳು ಹಾಗೂ ಜಿಲ್ಲಾಡಳಿತಕ್ಕೆ ಹಿಂದು ಸಮಾಜದ ವತಿಯಿಂದ ವಿನಂತಿ ಮಾಡಿಕೊಂಡಿರುವ ಪೋಸ್ಟರ್ ಹಾಕಿರುವುದು.
Published on

ಬಾಗಲಕೋಟೆ: ನಗರದಲ್ಲಿ ವಿವಿಧೆಡೆ ಪ್ರತಿಷ್ಠಾಪನೆ ಮಾಡಿರುವ ಗಣೇಶ ಮಂಟಪಗಳಲ್ಲಿ ಸಂಘಟನೆಗಳು ವಿನೂತನ ಅಭಿಯಾನ ಆರಂಭಿಸಿದ್ದು, ಎಲ್ಲರ ಗಮನ ಸೆಳೆಯುತ್ತಿದೆ...!


ಬಾಗಲಕೋಟೆ ನಗರದಲ್ಲಿ ಜಗಜ್ಯೋತಿ ಬಸವೇಶ್ವರ ಹಾಗೂ ಛತ್ರಪತಿ ಶಿವಾಜಿ ಮಾಹಾರಾಜರ ಮೂರ್ತಿಗಳನ್ನು ಪ್ರತಿಷ್ಠಾಪಿಸಲು ಅವಕಾಶ ನೀಡಬೇಕು ಎನ್ನುವ ಪೋಸ್ಟರ್ ಗಳನ್ನು ಹಾಕುವ ಮೂಲಕ ಈ ವರ್ಷದ ಗಣೇಶೋತ್ಸವದಲ್ಲಿ ಹಿಂದು ಸಮಾಜದಿಂದ ಹೊಸ ಅಭಿಯಾನ ಕೈಗೊಂಡಿದ್ದಾರೆ.

ಬಾಗಲಕೋಟೆಯಲ್ಲಿ ಈ ಇಬ್ಬರು ಮಹನೀಯರ ಮೂರ್ತಿಗಳು ಸಿದ್ದಪಡಿಸಲಾಗಿದ್ದು, ಪ್ರತಿಷ್ಠಾಪನೆಗೆ ಅವಕಾಶ ಸಿಗುತ್ತಿಲ್ಲ. ಕಳೆದ ವರ್ಷ ಶಿವಾಜಿ ಮೂರ್ತಿ ಪ್ರತಿಷ್ಠಾಪನೆ ದೊಡ್ಡಮಟ್ಟದ ವಿವಾದಕ್ಕೆ ಕಾರಣವಾಗಿತ್ತು. ಅಲ್ಲಿಂದ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕು ಎನ್ನುವ ಕೂಗು ಕೇಳಿ ಬರುತ್ತಲೇ ಇವೆ. ಆದರೆ, ಈ ವರೆಗೂ ಅದಕ್ಕೆ ಅವಕಾಶ ಸಿಕ್ಕಿಲ್ಲ.

ಈ ಹಿನ್ನಲೆಯಲ್ಲಿ ಇದೀಗ ಗಣೇಶ ಉತ್ಸವದ ಸಂದರ್ಭವನ್ನು ಬಳಕೆ ಮಾಡಿಕೊಂಡು ಬಾಗಲಕೋಟೆ, ವಿದ್ಯಾಗಿರಿ, ನವನಗರದಲ್ಲಿ ಇನ್ನೂರಕ್ಕೂ ಅಽಕ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಇಲ್ಲಿ ಪ್ರತಿ ದಿನ ಸಾವಿರಾರು ಜನರು ಗಣೇಶ ಮೂರ್ತಿ ವೀಕ್ಷಣೆಗೆ ಅಗಮಿಸುತ್ತಿದ್ದಾರೆ. ಇದೇ ವೇಳೆ ಜನರಲ್ಲಿ ಬಸವೇಶ್ವರ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿಗಳ ಪ್ರತಿಷ್ಠಾಪನೆ ಬಗ್ಗೆ ಹೆಚ್ಚೆಚ್ಚು ಜಾಗೃತಿ ಮೂಡಿಸಲು ಹಿಂದು ಸಮಾಜದ ವತಿಯಿಂದ ಈ ಅಭಿಯಾನವನ್ನು ಕೈಗೊಂಡಿದ್ದಾರೆ.

ನಗರದಲ್ಲಿ ಈ ಎರಡು ಮೂರ್ತಿಗಳನ್ನು ಅನಾವರಣ ಮಾಡಲು ಸಿದ್ದವಾಗಿವೆ. ಕೂಡಲೇ ಇದಕ್ಕೆ ಅವಕಾಶ ಕೊಡಬೇಕು. ಈ ನಿಟ್ಟಿನಲ್ಲಿ ರಾಜ್ಯಾಪಾಲರು, ಮುಖ್ಯಮಂತ್ರಿಗಳು ಹಾಗೂ ಜಿಲ್ಲಾಡಳಿಕ್ಕೆ ಬಾಗಲಕೋಟೆಯ ಸಮಸ್ತ ಹಿಂದು ಸಮಾಜದಿಂದ ವಿನಂತಿಸಿಕೊಳ್ಳುತ್ತೇವೆ ಎಂದು ನೂರಕ್ಕೂ ಅಧಿಕ ಗಣೇಶ ಮೂರ್ತಿ ಪ್ರತಿಷ್ಠಾಪನೆ ಸ್ಥಳಗಳಲ್ಲಿ ಪೋಸ್ಟರ್ ಗಳನ್ನು ಹಾಕಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net