ಗಣೇಶ, ಈದ್ ಹಬ್ಬದಲ್ಲಿ ಸೌಹಾರ್ದತೆ ಕಾಪಾಡಿ

19 NMG 01 (3)
Published on

ನಾಗಮಂಗಲ: ಗಣೇಶ ಹಾಗೂ ಈದ್ ಮಿಲಾದ್ ಹಬ್ಬಗಳಲ್ಲಿ ಎರಡು ಸಮುದಾಯದವರು ಯಾವುದೇ ಅಹಿತಕರ ಘಟನೆಯಾಗದಂತೆ ಸಾಮರಸ್ಯದಿಂದ ಹಬ್ಬ ಆಚರಿಸಬೇಕು. ಕಾನೂನು ಉಲ್ಲಂಘಿಸಿದರೆ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಎಚ್ಚರಿಸಿದರು.

ಪಟ್ಟಣದ ಖಾಸಗಿ ಸಮುದಾಯ ಭವನದಲ್ಲಿ ಮಂಗಳವಾರ ಪುರಸಭೆ ವ್ಯಾಪ್ತಿಯ ಹಿಂದು ಮತ್ತು ಮುಸ್ಲಿಂ ಮುಖಂಡರ ಜತೆ ಗೌರಿ-ಗಣೇಶ ಹಾಗೂ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಏರ್ಪಡಿಸಿದ್ದ ಸಾಮರಸ್ಯ ಸಭೆಯಲ್ಲಿ ಮಾತನಾಡಿದರು.

ಯಾವುದೇ ಅಹಿತಕರ ಘಟನೆ ನಡೆಯದಂತೆ ಪ್ರತಿಯೊಬ್ಬರೂ ಜವಾಬ್ದಾರಿ ವಹಿಸಬೇಕು. ಅಧಿಕಾರಿಗಳು ಇವತ್ತು ಇರುತ್ತಾರೆ, ನಾಳೆ ಹೋಗುತ್ತಾರೆ. ಆದರೆ ನೀವು ಇಲ್ಲಿಯೇ ಜೀವನ ನಡೆಸಬೇಕಿದ್ದು, ಎರಡು ಸಮುದಾಯದವರು ಒಬ್ಬರಿಗೊಬ್ಬರು ಸಾಮರಸ್ಯದಿಂದ ತಮ್ಮ ತಮ್ಮ ಸಂಪ್ರದಾಯದಂತೆ ಹಬ್ಬಗಳ ಆಚರಣೆ ಮಾಡಿದರೆ ನಮ್ಮದೇನು ತಕರಾರಿಲ್ಲ. ಆದರೆ ಗಣೇಶಮೂರ್ತಿ ವಿಸರ್ಜನೆಯ ದಿನಾಂಕ, ಮೆರವಣಿಗೆಯ ಮಾರ್ಗಗಳನ್ನು ಪೊಲೀಸ್ ಇಲಾಖೆಯ ಅನುಮತಿ ಪಡೆದು ಅದರಂತೆಯೇ ನಡೆಸಬೇಕು. ಇದರಲ್ಲಿ ಯಾವುದೇ ಬದಲಾವಣೆಗಳಾದರೂ ಕಾನೂನು ರೀತಿ ಕ್ರಮ ಜರುಗಿಸಲಾಗುತ್ತದೆ. ಅನುಮತಿ ಪಡೆದ ನಿಗದಿತ ದಿನಾಂಕ ಹಾಗೂ ನಿಗದಿತ ಮಾರ್ಗದಲ್ಲಿಯೇ ವಿಸರ್ಜನೆ ಮೆರವಣಿಗೆ ಸಾಗಿದರೆ ಪೊಲೀಸ್ ಇಲಾಖೆ ಅದಕ್ಕೆ ತಕ್ಕಂತೆ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಒದಗಿಸಲಿದೆ.

ಡಿಜೆ ಬಳಕೆಗೆ ಕೆಲವು ನಿಯಮಗಳಿವೆ. ಜನವಸತಿ ಪ್ರದೇಶವಾಗಿರುವುದರಿಂದ ನಿಗದಿತ ಪ್ರಮಾಣದಲ್ಲಿ ಸೌಂಡ್ ಹಾಕಬೇಕು. ಅದನ್ನು ಮೀರಿದರೆ ಕಾನೂನು ಕ್ರಮ ಜರುಗಿಸುತ್ತೇವೆ. ಎರಡು ಅಥವಾ ಮೂರು ಬಾಕ್ಸ್ ಇರಿಸಿ ಹೆಚ್ಚು ಎಂದರೆ 4 ಸೌಂಡ್ ಬಾಕ್ಸ್‌ಗಳಲ್ಲಿ ಡಿಜೆ ಹಾಕಿಕೊಳ್ಳಬಹುದು. ಈದ್ ಮಿಲಾದ್ ಹಬ್ಬದಂದು ಅನ್ನದಾನ ಹಾಗೂ ಪ್ರಾರ್ಥನೆ ಮಾತ್ರ ಇರಲಿದ್ದು ಯಾವುದೇ ಮೆರವಣಿಗೆಗೆ ಅವಕಾಶವಿರುವುದಿಲ್ಲ. ಪೊಲೀಸ್ ಇಲಾಖೆ ಜತೆ ಎರಡು ಸಮುದಾಯದವರು ಸಹಕರಿಸಿ ಹಬ್ಬಗಳನ್ನು ಯಶಸ್ವಿಗೊಳಿಸುವ ಮೂಲಕ ರಾಜ್ಯಕ್ಕೆ ಮಾದರಿಯಾಗಿ ಎಂದರು.

ಕೋಟೆ ಗಣಪತಿಗೆ ಮಾತ್ರ ಮೈಸೂರು ರಸ್ತೆ ಪ್ರವೇಶ:

ಕಳೆದ ವರ್ಷ ವಿವಾದ ಉಂಟಾಗಿದ್ದ ಮೈಸೂರು ರಸ್ತೆಯ ಯಾ-ಅಲ್ಲಾ ಮಸೀದಿ ಮುಂಭಾಗ ಪ್ರತೀತಿಯಂತೆ 48 ದಿನಕ್ಕೆ ವಿಸರ್ಜನೆ ಮಾಡಲಾಗುವ ಕೋಟೆ ಗಣಪತಿಗೆ ಮಾತ್ರ ಮೆರವಣಿಗೆಗೆ ಅನುಮತಿ ನೀಡಲಾಗಿದೆ. ಈ ಹಿಂದಿನಿಂದಲೂ ನಡೆದು ಬಂದಿರುವಂತೆ ಕೋಟೆ ಗಣಪತಿ ಮೈಸೂರು ರಸ್ತೆಯ ಯಾ-ಅಲ್ಲಾ ಮಸೀದಿ ಮುಂಭಾಗ ಮೆರವಣಿಗೆ ಸಾಗುತ್ತಿತ್ತು. ಅದರಂತೆ ಈ ಬಾರಿಯೂ ಆ ಒಂದು ಗಣಪತಿಯ ಮೆರವಣಿಗೆಗೆ ಮಾತ್ರ ಅನುಮತಿ ನೀಡಲಾಗುತ್ತಿದ್ದು, ಉಳಿದೆಲ್ಲ ಗಣಪತಿಗಳ ಮೆರವಣಿಗೆ ಮಂಡ್ಯ ಸರ್ಕಲ್‌ವರೆಗೆ ಮಾತ್ರ ಸಾಗಿ ನಂತರ ಮಾರ್ಕೆಟ್ ರಸ್ತೆಯಲ್ಲಿ ಕೊಳಕ್ಕೆ ಸಾಗಲಿವೆ. ಈ ಸಂದರ್ಭ ಎರಡು ಸಮುದಾಯವರ ಯಾವುದೇ ಭಾವನೆಗಳಿಗೆ ಧಕ್ಕೆಯಾಗದಂತೆ ಅಗತ್ಯ ಕ್ರಮವಹಿಸಲಾಗುವುದು ಎಂದು ಎಸ್ಪಿ ತಿಳಿಸಿದರು.

ಸಾಮೂಹಿಕ ಗಣೇಶ ವಿಸರ್ಜನೆ:

ಕಳೆದ ವರ್ಷ ಪಟ್ಟಣದಲ್ಲಿ ನಡೆದ ಅಹಿತಕರ ಘಟನೆಯಿಂದ ಈ ಬಾರಿ ಹಿಂದು ಸಂಘಟನೆಗಳ ಮುಖಂಡರ ಮುಂದಾಳತ್ವದಲ್ಲಿ ಪಟ್ಟಣದ ಸುಮಾರು 12ಕ್ಕೂ ಹೆಚ್ಚು ಗಣಪತಿ ಮೂರ್ತಿಗಳನ್ನು ಸಾಮೂಹಿಕವಾಗಿ 9ನೇ ದಿನಕ್ಕೆ ಮೆರವಣಿಗೆ ಮೂಲಕ ವಿಸರ್ಜಿಸಲಾಗುತ್ತಿದೆ. ಈ ಸಂದರ್ಭ ಪಟ್ಟಣ ಹಾಗೂ ಕೆ.ಮಲ್ಲೇನಹಳ್ಳಿಯ ಗಣಪತಿ ಮೂರ್ತಿಗಳೆಲ್ಲವೂ ಟಿಬಿ ಬಡಾವಣೆಯ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ಪಟ್ಟಣದವರೆಗೆ ವಿವಿಧ ಕಲಾತಂಡಗಳ ಮೂಲಕ ಮೆರವಣಿಗೆಯಲ್ಲಿ ಸಾಗಿ ಮಂಡ್ಯ ವೃತ್ತದಿಂದ ಬಲಕ್ಕೆ ತಿರುಗಿ ಮಾರ್ಕೆಟ್ ರಸ್ತೆಯಲ್ಲಿ ಸಾಗಿ ಕೊಳದಲ್ಲಿ ವಿಸರ್ಜನೆ ಮಾಡಲಾಗುವುದು ಎಂದು ಹಿಂದು ಸಂಘಟನೆಗಳ ಮುಖಂಡರು ಸಭೆಯಲ್ಲಿ ತಿಳಿಸಿದರು. ಈ ನಡೆಗೆ ಪೊಲೀಸ್ ಇಲಾಖೆ ವತಿಯಿಂದ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಎಸ್ಪಿ ಶ್ಲಾಘಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net