ಗಣರಾಜ್ಯೋತ್ಸವದಲ್ಲಿ ಹಾಲಕ್ಕಿ ಸುಗ್ಗಿ ಮೆರಗು-ತುಳಸಿ ಗೌಡರ ಸೊಬಗು

24KWR1
Published on

ವಿಜಯವಾಣಿ ಸುದ್ದಿಜಾಲ ಕಾರವಾರ
ದೆಹಲಿಯ ಕೆಂಪುಕೋಟೆಯಲ್ಲಿ ಜ.26 ರಂದು ನಡೆಯಲಿರುವ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಜಿಲ್ಲೆಯ ಜಾನಪದ ಕಲಾವಿದರಿಗೆ ಹಾಗೂ ಸಾಧಕಿಗೆ ಇದೇ ಮೊದಲ ಬಾರಿಗೆ ಅವಕಾಶ ಸಿಕ್ಕಿದೆ.
ಪರೇಡ್‌ನಲ್ಲಿ ಕರ್ನಾಟಕದಿಂದ `ನಾರಿ ಶಕ್ತಿ' ಹೆಸರಿನ ಟ್ಲಾಬ್ಲೊ ಭಾಗವಹಿಸುತ್ತಿದೆ. ಅದರಲ್ಲಿ ಮಗು ಹೊತ್ತ ಸೂಲಗಿತ್ತಿ ನರಸಮ್ಮ, ವೃಕ್ಷಮಾತೆ ತುಳಸಿ ಗೌಡ, ಸಾಲು ಮರದ ತಿಮ್ಮಕ್ಕ ಅವರ ಸ್ತಬ್ದ ಚಿತ್ರಗಳಿರಲಿವೆ. ಅದರ ಪಕ್ಕದಲ್ಲಿ ಜಿಲ್ಲೆಯ ಹಾಲಕ್ಕಿ ಸುಗ್ಗಿ ಕುಣಿತ ತಂಡ ನೃತ್ಯ ಮಾಡುತ್ತ ಸಾಗಲಿದೆ.
ತಳ ಸಮುದಾಯದಿಂದ ಬಂದ ಈ ಮೂವರು ಹಿರಿಯ ಮಹಿಳೆಯರು ಉನ್ನತ ಸಾಧನೆ ಮಾಡಿದ್ದು, ರಾಷ್ಟçದ ಅತ್ಯುನ್ನತ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡವರಾಗಿದ್ದಾರೆ. ಹೋಳಿಯ ಹಬ್ಬದ ಸಮಯದಲ್ಲಿ ಉತ್ತರ ಕನ್ನಡ ಜಿಲ್ಲೆಯ ಬುಡಕಟ್ಟು ಹಾಲಕ್ಕಿ ಒಕ್ಕಲಿಗರು ತಲೆಗೆ ಬಣ್ಣದ ಬ್ಯಾಗಡೆ ಇರುವ ತುರಾಯಿ ಕಟ್ಟಿ, ಗುಮಟೆ ಪಾಂಗ್ ಎಂಬ ಚರ್ಮವಾದ್ಯ ಹಾಗೂ ಜಾಗಟೆಯ ಸದ್ದಿಗೆ ಮಾಡುವ ನೃತ್ಯವನ್ನು ಸುಗ್ಗಿ ಕುಣಿತ ಎನ್ನಲಾಗಿದೆ. ಕಾರವಾರದ ಅಮದಳ್ಳಿಯ ಪುರುಷೋತ್ತಮ ಗೌಡ ನೇತೃತ್ವದ ತಂಡ ಕಳೆದ ಎರಡು ದಶಕಗಳಿಂದ ದೇಶದ ವಿವಿಧೆಡೆ ಈ ಪ್ರದರ್ಶನ ನೀಡಿದೆ.
ತಾಲೀಮು:
ಗಣರಾಜ್ಯೋತ್ಸವ ಪರೇಡ್‌ನಲ್ಲಿ ಇದೇ ಮೊದಲ ಬಾರಿಗೆ ಉತ್ತರ ಕನ್ನಡ ಜಿಲ್ಲೆಗೆ ಅವಕಾಶ ಸಿಕ್ಕಿದೆ. ಪರೇಡ್‌ನಲ್ಲಿ ಕಾರವಾರ ಅಮದಳ್ಳಿಯ ಬಂಟದೇವ ಯುವಕ ಸಂಘದ ಪುರುಷೋತ್ತಮ ಪಾಂಡುರಂಗ ಗೌಡ ಅವರ ನೇತೃತ್ವದಲ್ಲಿ 12 ಹೆಣ್ಣು ಹಾಗೂ 13 ಗಂಡುಮಕ್ಕಳ ಸುಗ್ಗಿ ಕುಣಿತ ತಂಡವಿರಲಿದೆ. ತಂಡದಲ್ಲಿ ಜಿಲ್ಲೆಯ ಮಂಜುನಾಥ, ಸುದೀಪ, ನವೀನ, ಅಭಿಷೇಕ, ನಾಗೇಂದ್ರ, ವೈರಮುಡಿ, ಪ್ರಶಾಂತ, ಜಿತೇಶ, ಶೈಲೇಶ, ಬಸವರಾಜ,ಲೋಕೇಶ, ಶಿವರಾಜ, ಸವಿತಾ, ವಿನುತಾ, ನಾಗರತ್ನ, ನಾಗರತ್ನಾ, ಬೇಬಿ, ಸುಧಾ, ಚೇತನಾ, ಜಯಶ್ರೀ, ಚಿಂತನಾ, ಸಿಂಧುಜಾ, ಸೋನಿಯಾ, ಧನ್ಯಾ, ಪೂಜಾ ಭಾಗವಹಿಸಿದ್ದಾರೆ. ಜ.16 ರಂದು ತಂಡವು ನವದೆಹಲಿಗೆ ತಲುಪಿದ್ದು, ಕೊರೆಯುವ ಚಳಿಯ ನಡುವೆಯೂ ನಿರಂತರ ತಾಲೀಮು ನಡೆಸಲಾಗುತ್ತಿದೆ. ಜ.23 ರಂದು ಅಂತಿಮ ಹಂತದ ಅಭ್ಯಾಸ ಯಶಸ್ವಿಯಾಗಿ ನಡೆದಿದೆ. ಈ ನಡುವೆ ಭಾರತೀಯ ಸೇನೆ ಆರ್‌ಆರ್ ಕ್ಯಾಂಪ್‌ನ ಝೆಂಕಾರ ಸಭಾಂಗಣದಲ್ಲಿ ನಡೆದ ರಾಷ್ಟçಮಟ್ಟದ ಕಲಾ ಪ್ರದರ್ಶನದಲ್ಲೂ ಬಂಟದೇವ ಯುವಕ ಸಂಘ ಪ್ರದರ್ಶನ ನೀಡಿ ಮೆಚ್ಚುಗೆಗೆ ಪಾತ್ರವಾಯಿತು.


ಹಾಲಕ್ಕಿ ಒಕ್ಕಲಿಗ ಸಮುದಾಯದ ಸಾಂಪ್ರದಾಯಿಕ ನೃತ್ಯವನ್ನು ಗಣರಾಜ್ಯೋತ್ಸವ ಪರೇಡ್‌ನಲ್ಲಿ ಪ್ರದರ್ಶಿಸಲು ಇದೇ ಮೊದಲ ಬಾರಿಗೆ ಅವಕಾಶ ಸಿಕ್ಕಿದೆ ಅದಕ್ಕೆ ಅವಕಾಶ ಮಾಡಿಕೊಟ್ಟ ಮುಖ್ಯಮಂತ್ರಿ ಅವರಿಗೂ ಎಲ್ಲ ಅಽಕಾರಿಗಳಿಗೂ ಕಾರವಾರ ಶಾಸಕರಿಗೂ ಧನ್ಯವಾದಗಳು.
ಪುರುಷೋತ್ತಮ ಗೌಡ
ಕಲಾ ತಂಡದ ಮುಖ್ಯಸ್ಥ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net