

ಬಾಗಲಕೋಟೆ: ಜಿಲ್ಲಾಡಳಿತದ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಜ.೨೬ ರಂದು ಜರುಗಲಿರುವ ಗಣರಾಜ್ಯೋತ್ಸವವನ್ನು ಅರ್ಥಪೂರ್ಣ ಹಾಗೂ ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ ಹೇಳಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಬುಧವಾರ ಗಣರಾಜ್ಯೋತ್ಸವ ಆಚರಣೆ ಕುರಿತು ಜರುಗಿದ ಪೂರ್ವ ಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಂದು ಬೆಳಗ್ಗೆ ೮ ಗಂಟೆಗೆ ಜಿಲ್ಲಾಡಳಿತ ಭವನದ ಆವರಣದಲ್ಲಿ ಜಿಲ್ಲಾಽಕಾರಿಗಳಿಂದ ಧ್ವಜಾರೋಹಣ, ೯ ಗಂಟೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಧ್ವಜಾರೋಜಹಣ ಹಾಗೂ ಸಚಿವರಿಂದ ಗಣರಾಜ್ಯೋತ್ಸವದ ಸಂದೇಶದ ನಂತರ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಗಣರಾಜ್ಯೋತ್ಸವವನ್ನು ಈ ಬಾರಿ ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಕಾರ್ಯಕ್ರಮಗಳ ಸಿದ್ದತೆಗೆ ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು, ಪೂರ್ವ ತಯಾರಿಗಾರಿ ಉಪ ಸಮಿತಿಗಳ ಸಭೆ ಕರೆದು ಬೇಕಾಗುವ ಎಲ್ಲ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳಲು ಸೂಚಿಸಿದರು. ಪಥಸಂಚಲನ ಕಾರ್ಯಕ್ರಮದಲ್ಲಿ ಪೊಲೀಸ್, ಗೃಹರಕ್ಷಕ ದಳ, ಸೇವಾದಳ, ಸ್ಕೌಟ್ ಆ್ಯಂಡ್ ಗೈಡ್ಸ್, ಎನ್.ಸಿ.ಸಿ. ಕೆಡೆಟ್‌ಗಳನ್ನು ಆಹ್ವಾನಿಸಲು ತಿಳಿಸಿದರು.
ಧ್ವಜಾರೋಹಣ ವ್ಯವಸ್ಥೆಗೆ ಭಾರತ ಸೇವಾದಳ, ಪೊಲೀಸ್ ಇಲಾಖೆ, ತಹಸೀಲ್ದಾರ ಹಾಗೂ ಯುವಜನ ಸೇವಾ ಹಾಗೂ ಕ್ರೀಡಾ ಅಽಕಾರಿಗಳಿಗೆ ವಹಿಸಲಾಯಿತು. ಕ್ರೀಡಾಂಗಣದಲ್ಲಿ ವೇದಿಕೆ ನಿರ್ಮಾಣ, ಗಣ್ಯರಿಗೆ, ಶಾಸಕರಿಗೆ, ಸಂಸದರುಗಳಿಗೆ ಹಾಗೂ ಪತ್ರಕರ್ತರಿಗೆ ಸೂಕ್ತ ಆಸನಗಳ ವ್ಯವಸ್ಥೆ, ಧ್ವನಿವರ್ಧಕ ಹಾಗೂ ಜನರೇಟರ್ ವ್ಯವಸ್ಥೆಯನ್ನು ಕೈಗೊಳ್ಳಲು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಡಳಿತ ಭವನ ಹಾಗೂ ತಾಲೂಕ ಭವನಕ್ಕೆ ವಿದ್ಯುತ್ ಅಲಂಕಾರ ಮಾಡುವಂತೆ ತಿಳಿಸಲಾಯಿತು. ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ವ್ಯಕ್ತಿಗಳಿಗೆ ಸನ್ಮಾನಿಸಲು ನಿರ್ಧರಿಸಲಾಯಿತು.
ರಾಷ್ಟ್ರಕವಿ ಕುವೆಂಪುರವರ ವಿರಚಿತ ನೇಗಿಲಯೋಗಿ ಹಾಡನ್ನು ರಾಷ್ಟ್ರಗೀತೆ ನಂತರ ಪರಿಣಿತ ಕಲಾವಿದರಿಂದ ಹಾಡಿಸುವುದು. ಶಾಲಾ ಮಕ್ಕಳಿಗೆ ಸಿಹಿ ತಿಂಡಿ ವಿತರಣೆ ಮಾಡುವುದು, ಗಣರಾಜ್ಯೋತ್ಸವ ದಿನದಂದು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ರಿಯರ್ಸಲ್ ದಿನದಂದು ಕ್ರೀಡಾಂಗಣಕ್ಕೆ ಹೋಗಿ ಬರಲು ರಿಯಾಯಿತಿ ದರದಲ್ಲಿ ವಾಹನ ವ್ಯವಸ್ಥೆಯನ್ನು ಮಾಡುವಂತೆ ವಾ.ಕ.ರ.ಸಾರಿಗೆ ಸಂಸ್ಥೆಗೆ ಸೂಚನೆ ನೀಡಿದರು. ಸದರಿ ದಿನದಂದು ಪೊಲೀಸ್ ಬಂದೋ ಬಸ್ತ ವ್ಯವಸ್ಥೆ ಕಲ್ಪಿಸಬೇಕು. ಜಿಲ್ಲಾ ಮಟ್ಟದ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಕಡ್ಡಾಯವಾಗಿ ಹಾಜರಿರಬೇಕು ಎಂದು ನಿರ್ದೇಶನ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಸಂಕಿನಮಠ, ಆಹಾರ ಇಲಾಖೆಯ ಜಂಟಿ ನಿರ್ದೇಶಕ ಚನಬಸಪ್ಪ ಕೊಡ್ಲಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಡಿಗೇರ ಸೇರಿದಂತೆ ಇತರರು ಉಪಸ್ಥಿತರಿದ್ದರು.