

ಚನ್ನರಾಯಪಟ್ಟಣ: ಪಟ್ಟಣದ ಗಣಪತಿ ಪೆಂಡಾಲ್‌ನ ದುರಸ್ತಿಗೆ ಪುರಸಭೆ ವತಿಯಿಂದ ಅನುದಾನ ನೀಡಲಾಗುವುದು ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಭರವಸೆ ನೀಡಿದರು.
72 ವರ್ಷಗಳ ಇತಿಹಾಸ ಹೊಂದಿರುವ ಚನ್ನರಾಯಪಟ್ಟಣದ ಪ್ರಸನ್ನ ಗಣಪತಿಯನ್ನು ಮಂಗಳವಾರ ಮಧ್ಯಾಹ್ನ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯೊಂದಿಗೆ ಪ್ರತಿಷ್ಠಾಪಿಸಲಾಗಿದ್ದು, 48 ದಿನಗಳ ಕಾಲ ಪ್ರತಿನಿತ್ಯ ವಿಘ್ನ ನಿವಾರಕನಿಗೆ ತ್ರಿಕಾಲ ಪೂಜೆ ನಡೆಯಲಿದೆ.
ಶ್ರೀಪ್ರಸನ್ನ ಗಣಪತಿ ಸೇವಾ ಸಮಿತಿ ವತಿಯಿಂದ ಶಿಲ್ಪಿ ಸಿ.ವಿ.ಪ್ರಸನ್ನ ಅವರು ನಿರ್ಮಿಸಿರುವ ದರ್ಬಾರ್ ಭಂಗಿಯ ಒಂಬತ್ತು ಅಡಿ ಎತ್ತರದ ಬೃಹತ್ ದರ್ಬಾರ್ ಗಣಪತಿಯನ್ನು ಶೃಂಗರಿಸಿ ಆಸ್ಥಾನ ಮಂಟಪದಲ್ಲಿ ಅರ್ಚಕ ಬಾಲಕೃಷ್ಣಭಟ್ ಅವರ ನೇತೃತ್ವದಲ್ಲಿ ವಿಧಿ ವಿಧಾನಗಳೊಂದಿಗೆ ವೇದ ಮಂತ್ರ ಮಂಗಳವಾದ್ಯಗಳೊಂದಿಗೆ ಮಂಗಳಾರತಿ ಬೆಳಗಿ ಪ್ರತಿಷ್ಠಾಪಿಸಿದರು.
ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, ತಾಲೂಕು ಬರಪೀಡಿತ ತಾಲೂಕು ಎಂದು ಘೋಷಣೆಯಾಗಿದ್ದು, ವಿನಾಯಕನ ದಯೆಯಿಂದ ವರುಣನ ಕೃಪೆಯಾಗಿ ತಾಲೂಕಿನಾದ್ಯಂತ ಕೆರೆ-ಕಟ್ಟೆಗಳು ತುಂಬಿ ಉತ್ತಮವಾದ ಬೆಳೆ ಬರಲಿ, ರೈತರು, ಜಾನುವಾರುಗಳು ಹಾಗೂ ತಾಲೂಕಿನ ಜನತೆ ಸುಭಿಕ್ಷವಾಗಿರಲಿ ಎಂದು ಪ್ರಾರ್ಥಿಸಿದರು.
48 ದಿನಗಳ ಕಾಲ ಭಕ್ತರಿಗೆ ದರ್ಬಾರ್ ಗಣಪತಿ ದರ್ಶನ ನೀಡಲಿದ್ದು, ಪ್ರತಿದಿನ ತೀರ್ಥ ಪ್ರಸಾದದೊಂದಿಗೆ ಅನ್ನದಾನ ರಾತ್ರಿ ಗಣಪತಿ ಪೆಂಡಾಲಿನಲ್ಲಿ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಗಣಪತಿ ಪ್ರತಿಷ್ಠಾಪನೆ ನಿಮಿತ್ತ ಗಣಪತಿ ಪೆಂಡಾಲಿನಲ್ಲಿ ಮಾಡಿರುವ ಅಲಂಕಾರ, ವಿದ್ಯುತ್ ದೀಪಾಲಂಕಾರ ಸಾರ್ವಜನಿಕರ ಗಮನ ಸೆಳೆಯಲಿದ್ದು, ಅದನ್ನು ನೋಡಲು ತಾಲೂಕಿನ ನಾನಾ ಊರುಗಳಿಂದ ಭಕ್ತರು ಆಗಮಿಸುತ್ತಾರೆ. ಪಟ್ಟಣದ ವಿವಿಧ ಸಂಘ, ಸಂಸ್ಥೆಗಳು 48 ದಿನಗಳ ಕಾಲ ಅನ್ನದಾನ ಮಾಡುವುದು ಇಲ್ಲಿನ ವಿಶೇಷ.
ಗಣಪತಿ ಪ್ರತಿಷ್ಠಾಪನ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಚ್.ಎಸ್.ವಿಜಯಕುಮಾರ್, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಣತಿ ಆನಂದ, ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಹಡೇನಹಳ್ಳಿ ಲೋಕೇಶ್, ನವೋದಯ ವಿದ್ಯಾಸಂಸ್ಥೆ ಅಧ್ಯಕ್ಷ ಆದಿಶೇಷಕುಮಾರ್, ಪುರಸಭಾ ಸದಸ್ಯರು, ಶ್ರೀಪ್ರಸನ್ನ ಗಣಪತಿ ಸೇವಾ ಸಮಿತಿಯ ಗೌರವಾಧ್ಯಕ್ಷ ಸಿ.ಕೆ.ಕೃಷ್ಣ, ಅಧ್ಯಕ್ಷ ಸಿ.ಎನ್.ಅಶೋಕ್, ಉಪಾಧ್ಯಕ್ಷ ನಂಜುಂಡ ಮೈಮ್, ಕಾರ್ಯದರ್ಶಿ ಸಿ.ವೈ.ಸತ್ಯನಾರಾಯಣ, ಖಜಾಂಚಿ ಸಿ.ಎಸ್.ಮನೋಹರ್, ಸಹ ಕಾರ್ಯದರ್ಶಿ ಮಹದೇವ್, ಸಹ ಖಜಾಂಚಿ ಲಕ್ಷ್ಮೀನಾರಾಯಣ ಗುಪ್ತ, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಮತ್ತಿತರರು ಹಾಜರಿದ್ದರು.
ಗಣಪತಿ ಪೆಂಡಾಲಿನಲ್ಲಿ ಸಂಜೆ ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಸಿ.ಎನ್.ವೆಂಕಟೇಶ್, ಕಲಾವಿದ ಸೋಮಶೇಖರ್ ಅವರಿಂದ ಭಕ್ತಿಗೀತೆ ಹಾಗೂ ಭಾವಗೀತೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಭಕ್ತರು ಗೌರಿ ಹಾಗೂ ದರ್ಬಾರ್ ಗಣಪತಿ ದರ್ಶನ ಪಡೆದು ಶ್ರದ್ಧಾಭಕ್ತಿಯಿಂದ ನಮಿಸಿದರು.