

ಶಿರಸಿ: ತಾಲೂಕಿನ ವಿವಿಧೆಡೆ ದನ ಕಳ್ಳತನ ಮಾಡಿ ಸಾಗಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಇಲ್ಲಿನ ಗ್ರಾಮೀಣ ಪೊಲೀಸರು ಬಂಧಿಸಿದ್ದಾರೆ.
ಗಡಿಹಳ್ಳಿ ಬಳಿಯ ಕೆರೆಕೊಪ್ಪದ ಅನೀಸ್ ಅಹಮ್ಮದ್ ಸಲೀಂ, ಅಲ್ತಾಫ್ ಮಹಮ್ಮದ್ ಸಲೀಂ, ಅಶ್ಪಾಕ್ ಅಹಮ್ಮದ್ ಸಲೀಂ ಹಾಗೂ ಮಹಮ್ಮದ್ ಹಜರತ್ ಸಾಬ್ ಬಂಧಿತ ಆರೋಪಿಗಳು.ಬನವಾಸಿ ರಸ್ತೆ ಕೆರೆಕೊಪ್ಪ ಕ್ರಾಸ್ ಬಳಿ ರಸ್ತೆಯ ಅಂಚಿನಲ್ಲಿದ್ದ ದನಗಳನ್ನು ಕಳ್ಳತನಮಾಡಿ ಸಾಗಾಟ ಮಾಡುತ್ತಿದ್ದ ವೇಳೆ ಕಾರ್ಯಾಚರಣೆ ನಡೆಸಿರುವ ಪೊಲೀಸರು ಆರೋಪಿಗಳ ಜತೆ ದನಗಳ ಸಾಗಾಟಕ್ಕೆ ಬಳಸುತ್ತಿದ್ದ ಬೊಲೇರೋ ಪಿಕಪ್ ಹಾಗೂ ಮ್ಯಾಕ್ಸ್ ಪಿಕಪ್ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ಘಟನೆಯಲ್ಲಿ 7 ಜಾನುವಾರುಗಳನ್ನು ರಕ್ಷಿಸಿದ್ದಾರೆ.
ಗುಂಡು ಹಾರಿಸಲು ಸೂಚನೆ: ರಾತ್ರಿ ಸಮಯದಲ್ಲಿ ದನ ಕಳ್ಳತನ ಹಾಗೂ ಅಕ್ರಮ ಸಾಗಾಣಿಕಾ ಕೃತ್ಯಗಳನ್ನು ನಿಯಂತ್ರಿಸುವ ಉದ್ದೇಶದಿಂದ ರಾತ್ರಿ ಕರ್ತವ್ಯದ ಪೊಲೀಸ್ ಸಿಬ್ಬಂದಿಗೆ ಅತ್ಯಾಧುನಿಕ ಬಂದೂಕುಗಳನ್ನು ನೀಡಲಾಗಿದೆ. ಇಂತಹ ಅಕ್ರಮ ಚಟುವಟಿಕೆಗಳನ್ನು ಹತ್ತಿಕ್ಕಲು ಅವಶ್ಯಕತೆ ಕಂಡುಬಂದಲ್ಲಿ ಗುಂಡು ಹಾರಿಸಲು ಸಿಬ್ಬಂದಿಗೆ ಸೂಚಿಸಿದ್ದಾಗಿ ಡಿಎಸ್ಪಿ ಹಾಗೂ ಸಿಪಿಐ ತಿಳಿಸಿದ್ದಾರೆ.