ಗಜನಿ ಭೂಮಿ ಪುನರುಜ್ಜೀವನಕ್ಕೆ 32 ಕೋಟಿ ರೂ.

13KMT1_CR Naik
Published on

ಕುಮಟಾ: ಅಪರೂಪದ ಕಗ್ಗ ಬೇಸಾಯ ಉಳಿಸುವ ನಿಟ್ಟಿನಲ್ಲಿ ತಾಲೂಕಿನ ಮಾಣಿಕಟ್ಟಾ ಗಜನಿ ಬಂಡು ಹಾಗೂ ಗೇಟುಗಳ ಪುನರುಜ್ಜೀವನ ಕಾರ್ಯಕ್ಕೆ ರಾಷ್ಟ್ರೀಯ ಚಂಡಮಾರುತ ಅಪಾಯ ಉಪಶಮನ ಯೋಜನೆಯಡಿ 32 ಕೋಟಿ ರೂ. ಗಳ ಬೃಹತ್ ಅನುದಾನ ದೊರೆತಿದೆ. ರೈತರ ಬಹುಕಾಲದ ಬೇಡಿಕೆ ಈಡೇರುವ ಹಂತ ತಲುಪಿದೆ ಎಂದು ಮಾಣಿಕಟ್ಟಾ ರೈತ ಒಕ್ಕೂಟದ ಅಧ್ಯಕ್ಷ ಸಿ.ಆರ್. ನಾಯ್ಕ ತಿಳಿಸಿದರು.

ಗುರುವಾರ ಮಾಣಿಕಟ್ಟಾ ಗಜನಿ ಕ್ಷೇತ್ರದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾಹಿತಿ ನೀಡಿದರು. ಹಿಂದೆ 1973-74 ನೇ ಸಾಲಿನಲ್ಲಿ ದಿ. ರಾಮಕೃಷ್ಣ ಹೆಗಡೆಯವರು ಕಟ್ಟಿಸಿದ ಸುಮಾರು 8 ಕಿಮೀ ಗಳಷ್ಟು ಗಜನಿ ಬಂಡು ಹಾಗೂ ಗೇಟುಗಳು ಈಗ ಸಂಪೂರ್ಣ ಶಿಥಿಲಗೊಂಡು ಮಾಣಿಕಟ್ಟಾ, ಹೊರೆಹೋಳಿ, ತುಂಬ್ಳೆಕಟ್ಟಾ, ಕಲ್ಕಟ್ಟಾ, ಕಾಗಾಲ ಗಜನಿಯ ನಾಲ್ಕೈದು ಸಾವಿರ ರೈತರು ತಾವು ಬೆಳೆಯುತ್ತಿದ್ದ ವಿಶಿಷ್ಟ ತಳಿಯ ಕಗ್ಗ ಭತ್ತ ಬೇಸಾಯದಿಂದ ಹಿಂದೆ ಸರಿಯತೊಡಗಿದ್ದರು. ಗಜನಿ ವ್ಯವಸ್ಥೆ ಹಾಳಾಗಿದ್ದರಿಂದ ಹಿಂಗಾರು ಸಿಗಡಿ ಬೇಸಾಯ ಮಾತ್ರ ನಡೆಯುತ್ತಿದ್ದು ಸ್ವಾಮಿನಾಥನ್ ಫೌಂಡೇಶನ್ ನೆರವಿನೊಂದಿಗೆ ಬೆರಳೆಣಿಕೆಯ ರೈತರು ಮಾತ್ರ ಕಗ್ಗ ಬೇಸಾಯವನ್ನು ಶತಾಯಗತಾಯ ಉಳಿಸಿಕೊಂಡಿದ್ದಾರೆ. ಈಗ ಗಜನಿ ಕಗ್ಗ ಬೇಸಾಯಕ್ಕೆ ಪೂರಕವಾಗಿ ಕಾಮಗಾರಿಯೊಂದು ಮಂಜೂರಾಗಿರುವುದು ನಮ್ಮೆಲ್ಲ ರೈತರಿಗೆ ಸಂತಸತಂದಿದೆ.

ಮಂಜೂರಾದ ಯೋಜನೆಯಿಂದ 7.8 ಕಿಮೀ ಗಜನಿ ಬಂಡು ಹಾಗೂ 8 ಗೇಟುಗಳ ದುರಸ್ತಿ ಮಾಡಬೇಕಾಗಿದೆ. ಕಾಮಗಾರಿಯ ಟೆಂಡರ್ ಪ್ರಕ್ರಿಯೆಗಳೆಲ್ಲಾ ಮುಗಿದಿದ್ದು ಕೆಲಸ ಆರಂಭವಾಗಲು ವಿಳಂಬವಾಗಿದೆ. ಕಾಮಗಾರಿ ಸಂದರ್ಭದಲ್ಲಿ ಕಗ್ಗ ಬೇಸಾಯ ಉಳಿವಿಗಾಗಿ ರೈತರು ಸ್ವಖುಷಿಯಿಂದ ಎಲ್ಲ ಸಹಕಾರ ನೀಡಲಿದ್ದು ಮಳೆಗಾಲ ಮುಗಿಯುತ್ತಿದ್ದಂತೆ ಕೂಡಲೇ ಕಾಮಗಾರಿ ಆರಂಭಿಸಬೇಕು ಎಂಬುದು ರೈತರ ಬೇಡಿಕೆಯಾಗಿದೆ ಎಂದು ತಿಳಿಸಿದರು. ಈ ವೇಳೆ ಗಜನಿ ರೈತರು ಉಪಸ್ಥಿತದ್ದರು.</

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net