

ಜಗದೀಶ ಹೊಂಬಳಿ ಬೆಳಗಾವಿ
ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಿಂದ ನಮ್ಮ ಗ್ರಾಮಗಳಿಗೆ ನಿರಂತರ ನೀರು ಪೂರೈಕೆಯಾಗುತ್ತದೆ ಎಂದು ಚಾತಕ ಪಕ್ಷಿಯಂತೆ ಕಾಯುತ್ತಿರುವ ಗೋಕಾಕ ಹಾಗೂ ಮೂಡಲಗಿ ತಾಲೂಕಿನ 40 ಹಳ್ಳಿಗಳಿಗೆ ನೀರು ಪೂರೈಸುವ ಮೆಳವಂಕಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿ ಗಡುವು ಮುಗಿದರೂ ಪೂರ್ಣಗೊಂಡಿಲ್ಲ. ಇದು ಆ ಗ್ರಾಮಗಳ ಜನರ ಅಸಮಾಧಾನಕ್ಕೆ ಕಾರಣವಾಗಿದೆ.
2023ರ ಮಾರ್ಚ್ 29ರಂದು ಕಾಮಗಾರಿ ಆರಂಭಿಸಿ, 2024ರ ಸೆಪ್ಟೆಂಬರ್ ಅಂತ್ಯಕ್ಕೆ ಪೂರ್ಣಗೊಳಿಸುವುದಕ್ಕೆ ಗಡುವು ನೀಡಲಾಗಿತ್ತು. ಗಡುವು ಮುಗಿದು ಆರು ತಿಂಗಳಾದರೂ ಶೇ.50ರಷ್ಟು ಮಾತ್ರ ಕಾಮಗಾರಿಯಾಗಿದೆ. ಯೋಜನೆ ಅನುಷ್ಠಾನಕ್ಕೆ ಅಗತ್ಯವಿರುವ ನೀರು ಶುದ್ಧೀಕರಣ ಘಟಕ ನಿರ್ಮಾಣಕ್ಕೆ ಅರಣ್ಯ ಇಲಾಖೆ ಜಾಗ ಈವರೆಗೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗೆ ಹಸ್ತಾಂತರವೇ ಆಗಿಲ್ಲ. ಅರಣ್ಯ ಇಲಾಖೆಗೆ ಪರ್ಯಾಯ ಜಾಗ ನೀಡಿದರೂ ಅರಣ್ಯ ಇಲಾಖೆಯಿಂದ ಜಾಗ ಹಸ್ತಾಂತರಕ್ಕೆ ನೂರೆಂಟು ಪ್ರಕ್ರಿಯೆ ಹೇಳುತ್ತಿರುವುದರಿಂದ ಜಾಗ ಹಸ್ತಾಂತರ ಆಗುವುದು ವಿಳಂಬವಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.
ಯಾವ ಕಾಮಗಾರಿ ಬಾಕಿ ಇದೆ?: ಅಂದಾಜು 475 ಕೋಟಿ ರೂ. ವೆಚ್ಚದ ಯೋಜನೆ ಇದಾಗಿದೆ. 286 ಕಿ.ಮೀ ವರೆಗೆ ಪೈಪ್‌ಲೈನ್ ಅಳವಡಿಸುವ ಕಾಮಗಾರಿ ಯೋಜನೆಯಲ್ಲಿದೆ. ಈಗಾಗಲೇ 182 ಕೋಟಿ ರೂ. ಖರ್ಚಾಗಿದೆ. ಆದರೆ, ಈವರೆಗೆ ಶೇ.50ರಷ್ಟು
ಪೈಪ್‌ಲೈನ್ ಅಳವಡಿಸಲಾಗಿದೆ. ದಿನಕ್ಕೆ 1 ಅಥವಾ 2 ಕಿ.ಮೀ. ಮಾತ್ರ ಪೈಪ್‌ಲೈನ್ ಕಾಮಗಾರಿ ಸಾಗುತ್ತಿದೆ. ಪ್ರಮುಖವಾಗಿ ಗೋಕಾಕ ತಾಲೂಕಿನ ಮೆಲಮಟ್ಟಿಯಲ್ಲಿ ನೀರು ಶುದ್ಧೀಕರಣ ಘಟಕ ನಿರ್ಮಿಸುವ ಕಾರ್ಯವೇ ಬಾಕಿ ಇದೆ. ಆರು ನೀರಿನ ಟ್ಯಾಂಕ್ ನಿರ್ಮಿಸುವ ಕಾರ್ಯ ಶೇ.50ರಷ್ಟು ಆಗಿದೆ. ಶಿವಾಪುರದ ಬಳಿಕ ನಿರ್ಮಾಣ ಹಂತದಲ್ಲಿರುವ ಜಾಕ್‌ವೆಲ್‌ಗೆ ಮೋಟಾರ್ ಅಳವಡಿಸುವುದು ಬಾಕಿ ಇದೆ. ಜಿಎಲ್‌ಎಸ್‌ಆರ್ ಟ್ಯಾಂಕ್ ನಿರ್ಮಿಸುವ ಕಾರ್ಯವೂ ಪೂರ್ಣಗೊಂಡಿಲ್ಲ.
ಪ್ರತಿ ವ್ಯಕ್ತಿಗೆ 150 ಲೀಟರ್ ನೀರು: ಯೋಜನೆ ಅನುಷ್ಠಾನವಾದರೆ ಯೋಜನೆ ವ್ಯಾಪ್ತಿಯ ಗ್ರಾಮಗಳ ಪ್ರತಿ ವ್ಯಕ್ತಿಗೆ ಪ್ರತಿದಿನ 56 ಲೀಟರ್ ನೀರು ಸರಬರಾಜು ಆಗಲಿದೆ. ಪಟ್ಟಣದ ಪ್ರತಿ ವ್ಯಕ್ತಿಗೆ 150 ಲೀಟರ್ ನೀರು ಪೂರೈಕೆಯಾಗಲಿದೆ. ಅಂತರ್ಜಲ ಬಿಟ್ಟು ಪರ್ಯಾಯ ನೀರಿನ ಮೂಲಗಳಿಂದ ನೀರು ಪೂರೈಸಬೇಕು ಎಂಬ ನಿಯಮವಿದೆ. ಹೀಗಾಗಿ ಹಿಡಕಲ್ ಜಲಾಶಯದ ನೀರನ್ನು ಗೋಕಾಕ ಬಳಿಯ ಬ್ಯಾರೇಜ್‌ನಲ್ಲಿ ಸಂಗ್ರಹಿಸಿ, ಅಲ್ಲಿಂದ ನೀರು ಶುದ್ಧೀಕರಣ ಘಟಕಕ್ಕೆ ಸರಬರಾಜಾಗಿ ಅಲ್ಲಿಂದ ಗ್ರಾಮಗಳಿಗೆ ನೀರು ಪೂರೈಕೆಯಾಗಲಿದೆ.
ಒಂದು ವರ್ಷದಿಂದ ನಡೆದಿದೆ ಜಾಗ ಹಸ್ತಾಂತರ ಪ್ರಕ್ರಿಯೆ: ನೀರು ಶುದ್ಧೀಕರಣ ಘಟಕ ನಿರ್ಮಾಣ ಮಾಡುವ ಜಾಗ ಅರಣ್ಯ ಇಲಾಖೆಗೆ ಸೇರಿದ್ದರಿಂದ ಹಸ್ತಾಂತರ ಮಾಡಿಕೊಳ್ಳುವುದಕ್ಕೆ ಒಂದು ವರ್ಷದಿಂದ ಪ್ರಕ್ರಿಯೆ ನಡೆದಿದೆ. ಅರಣ್ಯ ಇಲಾಖೆ ನಿಯಮಾವಳಿಯಂತೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳು ಪ್ರಕ್ರಿಯೆ ಮಾಡುತ್ತಿದ್ದಾರೆ. ಪರ್ಯಾಯ ಜಾಗವನ್ನು ನೀಡಿದ್ದಾರೆ. ಜಾಗ ಹಸ್ತಾಂತರ ಪ್ರಸ್ತಾವನೆ ಬಿಎಫ್‌ಒ ಅವರಿಂದ ರಾಜ್ಯದ ಅರಣ್ಯ ಇಲಾಖೆ ಕಾರ್ಯದರ್ಶಿ ತಲುಪಿದೆ.
ಕಾರ್ಯದರ್ಶಿ ಅವರು ಕೇಂದ್ರ ಅರಣ್ಯ ಇಲಾಖೆಗೆ ಅನುಮತಿಗೆ ಕಳುಹಿಸಿದ್ದಾರೆ. ಅರಣ್ಯ ಇಲಾಖೆಯು ವನ್ಯಜೀವಿ ಸಂರಕ್ಷಣೆ ಮಂಡಳಿಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಒಂದೆರಡು ತಿಂಗಳಲ್ಲಿ ಆನ್‌ಲೈನ್ ಮೂಲಕ ಒಪ್ಪಿಗೆ ದೊರೆಯಬಹುದು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಇನ್ನು ಮೂರು ತಿಂಗಳಲ್ಲಿ ಯೋಜನೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.
ನೀರು ಶುದ್ಧೀಕರಣ ಘಟಕಕ್ಕೆ ಅಗತ್ಯವಿರುವ ಜಾಗವು ಅರಣ್ಯ ಇಲಾಖೆಗೆ ಸೇರಿದೆ. ಜಾಗ ಹಸ್ತಾಂತರ ಮಾಡಿಕೊಳ್ಳುವ ಪ್ರಕ್ರಿಯೆ ಇನ್ನೇನು ಮುಗಿಯಲಿದೆ. ಹಸ್ತಾಂತರ ಬಳಿಕ ಮೂರು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳುವ ಅಂದಾಜಿದೆ. | ಪಾಂಡುರಂಗ ರಾವ್ ಇಇ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ