ಗಂಗಾ ಕಲ್ಯಾಣ ಯೋಜನೆ ಸದುಪಯೋಗಿಸಿಕೊಳ್ಳಿ

IMG-20231011-WA0274
Published on

ಆಲೂರು: ಗ್ರಾಮೀಣ ಪ್ರದೇಶದಲ್ಲಿ ನೀರಾವರಿ ವ್ಯವಸ್ಥೆ ಇಲ್ಲದ ಸ್ಥಳದಲ್ಲಿ ಕೊಳವೆಬಾವಿ ನೀರಾವರಿ ವ್ಯವಸ್ಥೆ ಕಲ್ಪಿಸುವ ಉದ್ದೇಶದೊಂದಿಗೆ ಡಿ.ದೇವರಾಜು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಗಂಗಾ ಕಲ್ಯಾಣ ಯೋಜನೆ ಜಾರಿಗೆ ತಂದಿದ್ದು, ಫಲಾನುಭವಿಗಳು ಸದುಪಯೋಗ ಪಡೆದುಕೊಳ್ಳುವಂತೆ ಶಾಸಕ ಸಿಮೆಂಟ್ ಮಂಜು ಸಲಹೆ ನೀಡಿದರು.


ತಾಲೂಕು ಪಂಚಾಯಿತಿ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ 2021-22ನೇ ಸಾಲಿನ ಮತ್ತು, 2022-23ನೇ ಸಾಲಿನಲ್ಲಿ ಸಕಲೇಶಪುರ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾದ ಫಲಾನುಭವಿಗಳಿಗೆ ಮಂಜೂರಾತಿ ಪತ್ರ ವಿತರಿಸಿ ಮಾತನಾಡಿದರು. ಕೃಷಿ ಭೂಮಿಯಲ್ಲಿ ತಜ್ಞ ಭೂವಿಜ್ಞಾನಿಗಳ ಮೂಲಕ ಗುರುತಿಸಲ್ಪಟ್ಟ ಜಲಬಿಂದು ವ್ಯಾಪ್ತಿಯೊಳಗೆ ಕೊಳವೆಬಾವಿ ಕೊರೆಯಿಸಿ ನಂತರ ನೀರು ಸಂಗ್ರಹಿಸಲು ಟ್ಯಾಂಕ್ ನಿರ್ಮಿಸಿ, ಪೈಪ್ ಮೂಲಕ ಕೃಷಿಭೂಮಿಗೆ ನೀರು ಒದಗಿಸಿಕೊಂಡು ಸಣ್ಣ ಹಾಗೂ ಅತೀ ಸಣ್ಣ ರೈತರು ಕೃಷಿ ಕ್ಷೇತ್ರದಲ್ಲಿ ಪ್ರಗತಿ ಸಾಧಿಸುವಂತೆ ತಿಳಿಸಿದರು.


ಆಯ್ಕೆಯಾದ ಫಲಾನುಭವಿಗಳಿಗೆ 2 ಲಕ್ಷ ರೂ.ಸಬ್ಸಿಡಿ ಹಾಗೂ 50 ಸಾವಿರ ರೂ.ಸಾಲ ನೀಡಲಾಗುವುದು. ಸುಮಾರು 70 ಜನ ರೈತರು ಈ ಯೋಜನೆಗೆ ಅರ್ಹರಾಗಿದ್ದಾರೆ. ಗಂಗಾಕಲ್ಯಾಣ, ಸ್ವಯಂ ಉದ್ಯೋಗ, ಟ್ಯಾಕ್ಸಿ ಖರೀದಿ, ಗೂಡ್ಸ್ ವಾಹನಗಳ ಖರೀದಿ ಸೇರಿದಂತೆ ಹಲವು ಯೋಜನೆಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಕರೆದಿದ್ದು, ಸೂಕ್ತ ದಾಖಲೆಗಳೊಂದಿಗೆ ನೋಂದಾಯಿಸಿಕೊಳ್ಳಬಹುದು ಎಂದು ತಿಳಿಸಿದರು.


ಡಿ.ದೇವರಾಜು ಅರಸು ನಿಗಮದ ಜಿಲ್ಲಾ ವ್ಯವಸ್ಥಾಪಕ ನಾಗೇಂದ್ರ ಮಾತನಾಡಿ, 2023-24ನೇ ಸಾಲಿನಲ್ಲಿ ಹಿಂದುಳಿದ ವರ್ಗಗಳ ಇಲಾಖೆಯಿಂದ ಸುಮಾರು 10 ನಿಗಮಗಳಿಗೆ ಸಾಲಸೌಲಭ್ಯ ವ್ಯವಸ್ಥೆ ಕಲ್ಪಿಸಿದ್ದೇವೆ ಎಂದರು.


ಲೋಕೇಶ್ ಕಣಗಾಲು, ರವಿ ತುರುಗನಹಳ್ಳಿ, ಗಣೇಶ್ ಹಾಗೂ ಕಚೇರಿ ಸಿಬ್ಬಂದಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net