

ವಿಜಯವಾಣಿ ಸುದ್ದಿಜಾಲ ಕಾರವಾರ
ಯಕ್ಷಗಾನ ಎಂದರೆ ಗಂಡು ಕಲೆ ಎಂಬುದು ಸಾಮಾನ್ಯ ಕಲ್ಪನೆ. ಆದರೆ, ಅದನ್ನು ಸುಳ್ಳಾಗಿಸಿದವರು ಶಿರಸಿಯ ಭೈರುಂಬೆ ಗಡಿಗೆಹೊಳೆಯ ಯಕ್ಷ ಕಲಾ ಸಂಗಮ ಸಂಸ್ಥೆಯ ಕಲಾವಿದರು. ಇಲ್ಲಿ ಮಹಿಳೆ ಮತ್ತು ಮಕ್ಕಳ ತಂಡ ಯಕ್ಷಗಾನವನ್ನು ಪುರುಷ ವೃತ್ತಿಪರ ಕಲಾವಿದರಿಗೆ ಸರಿಸಮನಾಗಿ ನೀಡುತ್ತಿದೆ.
ಈ ತಂಡ ದೇಶದ ವಿವಿಧೆಡೆ 400 ಕ್ಕೂ ಅಧಿಕ ಯಕ್ಷಗಾನ ಪ್ರದರ್ಶನ ನೀಡಿ ಪ್ರಸಿದ್ಧವಾಗಿದೆ. ತಂಡವು ಭಾನುವಾರ ಮುಂಬೈನಲ್ಲಿ ಯಕ್ಷಗಾನ ಪ್ರದರ್ಶನ ನೀಡಿದೆ. ಅಲ್ಲಿನ ಹವ್ಯಕ ವೆಲ್ ಫೇರ್ ಟ್ರಸ್ಟ್ ಆಯೋಜಿಸಿರುವ ಕರ್ಕಿ ವೆಂಕಟ್ರಮಣ ಶಾಸ್ತ್ರಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಯಕ್ಷಕಲಾ ಸಂಗಮ ತಂಡವು ರಾವಣ ಅವಸಾನ' ಯಕ್ಷಗಾನ ಪ್ರದರ್ಶನ ನೀಡಿದೆ. ಮುಮ್ಮೇಳದಲ್ಲಿ ಸುಮಾ ಗಡಿಗೆಹೊಳೆ, ಸಹನಾ ಜೋಶಿ, ಪ್ರೇಮಾ ಭಟ್, ಶೈಲಾ ದೊಡ್ಡೂರು, ಜ್ಯೋತಿ ಹೆಗಡೆ, ಸುನಂದಾ ಹೆಗಡೆ, ತನ್ಮಯ ಹೆಗಡೆ ಭಾಗವಹಿಸಲಿದ್ದರೆ, ಭಾಗವತರಾಗಿ ಗಜಾನನ ಭಟ್ ತುಳಗೇರಿ, ಮೃದಂಗದಲ್ಲಿ ಕೃಷ್ಣ ಹೆಗಡೆ, ಚಂಡೆಯಲ್ಲಿ ಪ್ರಶಾಂತ ಕೈಗಡಿ ಪಾಲ್ಗೊಂಡಿದ್ದರು. ಯಕ್ಷಗಾನ ಕಲಾವಿದ ಸುಬ್ರಾಯ ಭಟ್ ಗಡಿಗೆಹೊಳೆ ಇಲ್ಲಿಯ ಮಹಿಳೆಯರಿಗೆ ಮೊದಲು ಯಕ್ಷಗಾನದ ತರಬೇತಿ ನೀಡಿ, ಆಸಕ್ತಿ ಹುಟ್ಟಿಸಿದರು. ಅವರ ಗರಡಿಯಲ್ಲಿ ಬೆಳೆದ ಸುಮಾ ಹೆಗಡೆ,ಯಕ್ಷಕಲಾಸಂಗಮ' ಮಹಿಳಾ ಮತ್ತು ಮಕ್ಕಳ ಯಕ್ಷಗಾನ ಕೇಂದ್ರ ಸ್ಥಾಪಿಸುವ ಮೂಲಕ ಯಕ್ಷಗಾನದಲ್ಲಿ ಇನ್ನಷ್ಟು ಮಹಿಳೆಯರು, ಮಕ್ಕಳು ಪಾಲ್ಗೊಳ್ಳಲು ಕಾರಣರಾದರು. ಸಂಸ್ಥೆಯ ಮೂಲಕ ಮಕ್ಕಳಿಗೆ ಉಚಿತವಾಗಿ ಬೇಸಿಗೆ ಶಿಬಿರವನ್ನು ನಡೆಸಲಾಯಿತು. ಆಸಕ್ತ ಮಹಿಳೆಯರಿಗೆ ಯಕ್ಷಗಾನ ತಾಳಮದ್ದಳೆ ಯ ತರಬೇತಿ ಪ್ರಾರಂಭವಾಯಿತು.
ಇವುಗಳ ಜೊತೆಗೆ ಶಿರಸಿಯ ಗಣೇಶ ನೇತ್ರಾಲಯದ ನರ್ಸ್ಗಳಿಗೆ ಯಕ್ಷಗಾನ ತರಬೇತಿ ನೀಡಿ ಕಾರ್ಯಕ್ರಮ ನೀಡಲಾಯಿತು. ಯಕ್ಷಗಾನ ಅಕಾಡೆಮಿ ಯವರ ಸಹಕಾರ ದಿಂದ "ಪ್ರೇರಣಾ' ಸಂಸ್ಥೆಯ ಮಕ್ಕಳಿಗೆ ಯಕ್ಷಗಾನ ತರಬೇತಿ ನೀಡಲಾಯಿತು. ಸಂಸ್ಥೆಯ ಕಾರ್ಯವನ್ನು ನೋಡಿದ ಹಲವಾರು ಸಂಘ ಸಂಸ್ಥೆಗಳು ಸನ್ಮಾನಿಸಿವೆ.
ಯಕ್ಷಗಾನ ನಮ್ಮ ನಾಡಿನ ಜೀವಂತಿಕೆಯ ಕಲೆ. ಜಾತಿ ಲಿಂಗ ಬೇಧವಿಲ್ಲದ ಈ ಕಲೆ ನಮಗೆ ನೆಮ್ಮದಿ ನೀಡುವ ಜೊತೆ ವ್ಯಕ್ತಿಯನ್ನು ಸುಸಂಸ್ಕೃತವಾಗಿಸುತ್ತದೆ.
ಸುಮಾ ಹೆಗಡೆ ಗಡಿಗೆಹೊಳೆ
ಯಕ್ಷಗಾನ ಕಲಾವಿದೆ