

ಸಂಬರಗಿ: ಪ್ರದೇಶಕ್ಕೆ ನೀರಾವರಿ ಸೌಕರ್ಯ ಕಲ್ಪಿಸುವ ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆ ಸಂಬಂಧ ನೀರಾವರಿ ಇಲಾಖೆಯ ಅಧಿಕಾರಿಗಳ ಜತೆ ಅನೇಕ ಬಾರಿ ಸಭೆ ಕರೆದು ಚರ್ಚೆ ಮಾಡಲಾಗಿದ್ದು, ಕಾಮಗಾರಿಗೆ ಶೀಘ್ರ ಅನುದಾನ ಬಿಡುಗಡೆಗೊಳಿಸಿ ಯೋಜನೆ ಕೈಗೆತ್ತಿಕೊಳ್ಳಲಾಗುವುದು ಎಂದು ಕಾಗವಾಡ ಶಾಸಕ ರಾಜು ಕಾಗೆ ಹೇಳಿದರು.
ಸಮೀಪದ ಜಂಬಗಿ ಗ್ರಾಮದ ಪಿಕೆಪಿಎಸ್‌ಗೆ ಗುರುವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷರಾಗಿ ರಾಜೇಂದ್ರ ಪಾಟೀಲ ಹಾಗೂ ಉಪಾಧ್ಯಕ್ಷೆಯಾಗಿ ಅಲ್ಕಾ ವಿಠ್ಠಲ ರಣದಿವೆ ಅವಿರೋಧ ಆಯ್ಕೆಯಾದ ಹಿನ್ನೆಲೆಯಲ್ಲಿ ಸತ್ಕರಿಸಿ ಮಾತನಾಡಿ, ಸಂಬರಗಿ ಭಾಗದ ರೈತರು ಸತತ ಬರಕ್ಕೆ ಸಿಲುಕಿ ಕಂಗಾಲಾಗಿದ್ದಾರೆ. ರೈತರ ಬೆನ್ನೆಲುಬಾಗಿ ನಿಂತು ಖಿಳೇಗಾಂವ ಬಸವೇಶ್ವರ ನೀರಾವರಿ ಯೋಜನೆ ಜಾರಿಗೊಳಿಸಲಾಗುವುದು ಎಂದರು.
ಸಂಘದ ಸದಸ್ಯರಾದ ಅರುಣ ಜಾಧವ, ಬಸಪ್ಪ ಮಾಳಿ, ಸುಖದೇವ ಸೋಂದಕರ, ಕೃಷ್ಣಾ ಮೋಹಿತೆ, ನೀತಾ ಬೋರಾಡೆ, ರಾಜು ಭಂಡಾರೆ, ಮುರಸಿದ್ದ ಕೋಳೆಕರ, ಮನೋಹರ ನಾಯಿಕ, ಪಾಂಡುರಂಗ ಮಂಡಲೆ, ಚುನಾವಣಾಧಿಕಾರಿ ಆಶಾ ಬಿರಾದಾರ, ಜಿಪಂ ಮಾಜಿ ಸದಸ್ಯ ವಿನಾಯಕ ಬಾಗಡಿ, ಸಂಜಯ ಅದಾಟೆ, ಯಶವಂತ ಪಾಟೀಲ, ಗ್ರಾಂಪಂ ಅಧ್ಯಕ್ಷ ರವಿ ವಾಘಮೋರೆ, ಕಾರ್ಯದರ್ಶಿ ಭಗವಾನ ಚವ್ಹಾಣ, ಜಿತೇಂದ್ರ ಸೂರ್ಯವಂಶಿ ಇತರರಿದ್ದರು.