ಖಾಸಗಿ ವಾಹನ ಸಂಚಾರ

7HLY-2
Published on

ಕಾರವಾರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೆಎಸ್​ಆರ್​ಟಿಸಿ ನೌಕರರು ಬುಧವಾರ ಕರ್ತವ್ಯದಿಂದ ದೂರ ಉಳಿದು ಮುಷ್ಕರ ಆರಂಭಿಸಿದ್ದು,ಪ್ರಯಾಣಿಕರು ಪರದಾಡಬೇಕಾಯಿತು.

ಖಾಸಗಿ ವಾಹನ ಓಡಾಟಕ್ಕೆ ವ್ಯವಸ್ಥ ಮಾಡುವಂತೆ ಸಾರಿಗೆ ಇಲಾಖೆ ಹಾಗೂ ಎನ್​ಡಬ್ಲ್ಯುಕೆಆರ್​ಟಿಸಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮಂಗಳವಾರವೇ ಸಭೆ ನಡೆಸಿ ಸೂಚನೆ ನೀಡಿದ್ದರು. ಆದರೆ, ಈ ಹಿಂದೆ ಓಡಾಡುತ್ತಿದ್ದ ಖಾಸಗಿ ಬಸ್​ಗಳು, ಟೆಂಪೊ ಹಾಗೂ ಕೆಲ ಖಾಸಗಿ ವಾಹನ ಬಿಟ್ಟರೆ ಅಧಿಕಾರಿಗಳು ಯಾವುದೇ ವಿಶೇಷ ವ್ಯವಸ್ಥೆ ಮಾಡಿದಂತೆ ಕಂಡುಬರಲಿಲ್ಲ. ಈ ಮೊದಲು ಬಸ್ ನಿಲ್ದಾಣಗಳ ಹೊರಗೆ ನಿಂತು ಪ್ರಯಾಣಿಕರನ್ನು ಸೆಳೆಯುತ್ತಿದ್ದ ಖಾಸಗಿ ವಾಹನ ಚಾಲಕರು ಬುಧವಾರ ಧೈರ್ಯದಿಂದ ನಿಲ್ದಾಣಗಳ ಒಳಗೇ ಬಂದು ಜನರನ್ನು ಹತ್ತಿಸಿಕೊಂಡು ಹೋಗುತ್ತಿರುವುದು ಕಂಡುಬಂತು.

ಗ್ರಾಮೀಣ ಭಾಗಕ್ಕೆ ತೊಂದರೆ: ಕಾರವಾರ-ಅಂಕೋಲಾ, ಮಡಗಾಂವ-ಕಾರವಾರ, ಕುಮಟಾ-ಹೊನ್ನಾವರ, ಬನವಾಸಿ-ಶಿರಸಿ, ಮುಂಡಗೋಡ-ಹುಬ್ಬಳ್ಳಿ, ಶಿರಸಿ-ಹಾನಗಲ್ ಭಟ್ಕಳ-ಕುಂದಾಪುರ, ಕುಮಟಾ-ಗೋಕರ್ಣ, ಸಿದ್ದಾಪುರ-ಕುಮಟಾ, ಸಿದ್ದಾಪುರ-ಸಾಗರ ಹೀಗೆ ಪ್ರಮುಖ ಮಾರ್ಗಗಳಲ್ಲಿ ಖಾಸಗಿ ಬಸ್​ಗಳು, ಮ್ಯಾಕ್ಸಿ ಕ್ಯಾಬ್​ಗಳು ಓಡಾಡುತ್ತಿದ್ದವು. ಆದರೆ ಜಿಲ್ಲೆಯ ನೂರಕ್ಕೂ ಅಧಿಕ ಗ್ರಾಮೀಣ ಭಾಗಗಳಿಗೆ ಯಾವುದೇ ಬಸ್ ಸಂಚಾರ ಇರಲಿಲ್ಲ. ಕೆಎಸ್​ಆರ್​ಟಿಸಿ ಕೆಲ ಹಾಲ್ಟಿಂಗ್ ಬಸ್​ಗಳು ಬೆಳಗ್ಗೆ ವಾಪಸಾಗಿದ್ದು ಬಿಟ್ಟರೆ, ಗ್ರಾಮೀಣ ಭಾಗದ ಜನ ಖಾಸಗಿ ವಾಹನಗಳನ್ನೇ ನೆಚ್ಚಿಕೊಳ್ಳಬೇಕಾಯಿತು.

ವಿದ್ಯಾರ್ಥಿಗಳಿಗೆ ತೊಂದರೆ: ಮುಷ್ಕರದ ಬಗ್ಗೆ ಮೊದಲೇ ಮಾಹಿತಿ ಇರುವುದರಿಂದ ಬಸ್ ನಿಲ್ದಾಣಗಳಲ್ಲಿ ಹೆಚ್ಚಿನ ಜನದಟ್ಟಣೆ ಇರಲಿಲ್ಲ. ಅಪ್ಪಿ, ತಪ್ಪಿ ಬಂದ ಕೆಲವರು ಬಸ್ ನಿಲ್ದಾಣದಲ್ಲಿ ಕೂರದೇ ರಸ್ತೆ ಪಕ್ಕ ನಿಂತು ಕಂಡ ಕಂಡ ಲಾರಿ, ಕಾರುಗಳಿಗೆ ಕೈ ತೋರಿಸುತ್ತಿರುವ ದೃಶ್ಯ ಕಂಡುಬಂತು.

ಆದರೆ, ಸರ್ಕಾರಿ ಸಾರಿಗೆ ಸಂಸ್ಥೆ ಬಸ್​ಗಳನ್ನು ನೆಚ್ಚಿಕೊಂಡಿದ್ದ ಪಾಸ್ ಇರುವ ಕಾಲೇಜ್ ವಿದ್ಯಾರ್ಥಿಗಳು, ಸರ್ಕಾರಿ ಉದ್ಯೋಗಿಗಳು ತೊಂದರೆ ಅನುಭವಿಸಬೇಕಾಯಿತು. ಕೆಲವೆಡೆ ತುಂಬಿ ತುಳುಕುತ್ತಿದ್ದ ಖಾಸಗಿ ವಾಹನಗಳಲ್ಲಿ ಹಣ ಕೊಟ್ಟು ತೆರಳುತ್ತಿರುವುದು ಕಂಡುಬಂತು. ಹಳಿಯಾಳ ಗ್ರಾಮೀಣ ಭಾಗದ ಶಾಲೆಗಳಿಗೆ ಶಿಕ್ಷಕರು ತೆರಳಲು ಸಾಧ್ಯವಾಗಿಲ್ಲ.

ಬಿಗಿ ಭದ್ರತೆ: ಸದಾ ಜನರಿಂದ ಜಿಗಿಗುಡುತ್ತಿದ್ದ ಎನ್​ಡಬ್ಲ್ಯುಕೆಆರ್​ಟಿಸಿ ಬಸ್ ನಿಲ್ದಾಣಗಳು ಬುಧವಾರ ಬಿಕೋ ಎನ್ನುತ್ತಿದ್ದವು. ಎಲ್ಲ ಬಸ್ ನಿಲ್ದಾಣ ಹಾಗೂ ಘಟಕಗಳಿಗೆ ಬಿಗಿ ಭದ್ರತೆ ಆಯೋಜಿಸಲಾಗಿತ್ತು. ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರಿಗಿಂತ ಹೆಚ್ಚು ಪೊಲೀಸರೇ ಇದ್ದರು. ಹೆದ್ದಾರಿಗಳಲ್ಲಿ ಅಲ್ಲಲ್ಲಿ ಪೊಲೀಸ್ ವಾಹನ ಗಸ್ತು ವ್ಯವಸ್ಥೆ ಮಾಡಲಾಗಿತ್ತು.

ಊರು ತಲುಪಿದ ನೌಕರರು: ಕೆಎಸ್​ಆರ್​ಟಿಸಿ ನೌಕರರು ಮುಷ್ಕರದ ಪೂರ್ವ ತಯಾರಿ ನಡೆಸಿದ್ದು, ಹೆಚ್ಚಿನವರು ತಮ್ಮ ಊರು ತಲುಪಿದ್ದಾರೆ. ದೂರದ ಊರುಗಳಿಗೆ ತೆರಳಿದ್ದ ಜಿಲ್ಲೆಯ ಡಿಪೋಗಳ ಬಸ್​ಗಳು ಮಂಗಳವಾರ ರಾತ್ರಿಯೇ ವಾಸಪಾಗಿದ್ದವು. ಜಿಲ್ಲೆಯಿಂದ ಹೊರ ಜಿಲ್ಲೆ, ರಾಜ್ಯಗಳಿಗೆ ತೆರಳಬೇಕಿದ್ದ ಬಸ್​ಗಳನ್ನು ನೌಕರರ ಅಸಹಕಾರದಿಂದ ಮಂಗಳವಾರವೇ ರದ್ದು ಮಾಡಲಾಗಿತ್ತು. ಇದರಿಂದ ಬಸ್ ನಿಲ್ದಾಣಗಳಲ್ಲಿ ಒಂದೇ ಒಂದು ಬಸ್​ಗಳು ನಿಂತಿದ್ದು ಕಾಣಲಿಲ್ಲ.

ಹೆಬ್ಬಾರ ಮನವಿ: ಮುಷ್ಕರ ಬಿಟ್ಟು ಕೆಲಸಕ್ಕೆ ಹಾಜರಾಗುವಂತೆ ಕಾರ್ವಿುಕ ಸಚಿವ ಶಿವರಾಮ ಹೆಬ್ಬಾರ ಕೆಎಸ್​ಆರ್​ಟಿಸಿ ನೌಕರರಲ್ಲಿ ಮನವಿ ಮಾಡಿದ್ದಾರೆ. ನಮ್ಮ ರಾಜ್ಯ ಕೋವಿಡ್​ನಿಂದಾಗಿ ಈಗಾಗಲೇ ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಿದೆ. ಸಾರಿಗೆ ಇಲಾಖೆ ನಾಲ್ಕು ಸಾವಿರ ಕೋಟಿಯಷ್ಟು ನಷ್ಟವನ್ನನುಭವಿಸಿದೆ. ಮತ್ತೊಮ್ಮೆ ಕೋವಿಡ್ ಎರಡನೇ ಅಲೆ ಆರಂಭವಾಗಿರುವಾಗ ಸಾರಿಗೆ ನೌಕರರು ಈ ರೀತಿ ಪ್ರತಿಭಟನೆ ಮಾಡುವುದು ಸೂಕ್ತವಲ್ಲ. ಸಧ್ಯ ಚುನಾವಣಾ ನೀತಿ ಸಂಹಿತೆ ಇರುವ ಕಾರಣ, ಅದು ಮುಗಿದ ತಕ್ಷಣ ಬೇಡಿಕೆ ಈಡೇರಿಸುವುದಾಗಿ ಸನ್ಮಾನ್ಯ ಮುಖ್ಯಮಂತ್ರಿಗಳು ಮತ್ತು ಸಾರಿಗೆ ಸಚಿವರು ಹೇಳಿದ್ದರೂ ಸಾರಿಗೆ ನೌಕರರು ಪ್ರತಿಭಟನೆ ಮಾಡುವುದು ಸೂಕ್ತವಲ್ಲ. ಸಾರಿಗೆ ನೌಕರರ ಈ ರೀತಿಯ ಮುಷ್ಕರದಿಂದಾಗಿ ಸಾರ್ವಜನಿಕರಿಗೂ ಹಾಗೂ ಸ್ವತಃ ಸಾರಿಗೆ ನೌಕರರಿಗೂ ತೊಂದರೆಯಾಗುತ್ತಿದೆ. ನೌಕರರ ಒಂಭತ್ತು ಬೇಡಿಕೆಗಳಲ್ಲಿ ಎಂಟನ್ನು ಸರ್ಕಾರ ಈಡೇರಿಸಿದ ಮೇಲೂ ಈ ರೀತಿ ಮುಷ್ಕರ ಮಾಡುವುದು ಸರಿಯಲ್ಲ, ಮುಷ್ಕರ ಕೈಬಿಟ್ಟು ಮತ್ತೆ ಕೆಲಸಕ್ಕೆ ಹಾಜರಾಗಿ. ನಿಮ್ಮ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಬದ್ಧವಾಗಿದೆ ಎಂದು ಪತ್ರಿಕಾ ಹೇಳಿಕೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net