ಖಾತೆ ಬದಲಾವಣೆ ಇಂದಿನ ರಾಜಕೀಯದಲ್ಲಿ ಸಾಮಾನ್ಯ

Shivaram Hebber
Published on

ಕಾರವಾರ: ಆಡಳಿತದ ದೃಷ್ಟಿಯಿಂದ ಪದೇ ಪದೆ ಸಚಿವರ ಖಾತೆಗಳ ಬದಲಾವಣೆ ಸೂಕ್ತವಲ್ಲ ಎಂಬುದೇನೋ ಸರಿ. ಆದರೆ, ಇಂದಿನ ರಾಜಕೀಯದಲ್ಲಿ ಅದೆಲ್ಲ ಸಾಮಾನ್ಯವಾಗಿಬಿಟ್ಟಿದೆ ಎಂದು ಕಾರ್ವಿುಕ ಸಚಿವ ಶಿವರಾಮ ಹೆಬ್ಬಾರ ಹೇಳಿದರು.

ಮಂತ್ರಿಮಂಡಲ ಪುನಾರಚನೆ ಗೊಂದಲದ ಸಂಬಂಧ ಮಂಗಳವಾರ ಸುದ್ದಿಗಾರರ ಪ್ರಶ್ನೆಗೆ ಮಂಗಳವಾರ ಅವರು ಉತ್ತರಿಸಿದರು. ಕೇವಲ ಯಡಿಯೂರಪ್ಪ ಅವರ ಸರ್ಕಾರ ಮಾತ್ರವಲ್ಲ. ಎಲ್ಲ ಸರ್ಕಾರಗಳ ಅವಧಿಯಲ್ಲೂ ಮಂತ್ರಿ ಮಂಡಲ ಪುನಾ ರಚನೆಯಾದಾಗ ಗೊಂದಲ ನಿರ್ವಣವಾಗಿದೆ. ಅದೇ ರೀತಿ ಈಗಲೂ ಖಾತೆ ಹಂಚಿಕೆಯಲ್ಲಿ ವ್ಯತ್ಯಾಸವಾಗಿದೆ ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದನ್ನು ಮುಚ್ಚಿಡಲು ಸಾಧ್ಯವಿಲ್ಲ. ಮುಖ್ಯಮಂತ್ರಿಗಳು ಖಾತೆಗಳ ಬದಲಾವಣೆ ಮಾಡಿ, ಕೆಲವರನ್ನು ಸಮಾಧಾನ ಮಾಡಲು ಯತ್ನಿಸಿದ್ದಾರೆ. ಸಮಾಧಾನ ಆಗಿದೆ ಎಂದುಕೊಂಡಿದ್ದೇನೆ. ನಾನು ಆನಂದ ಸಿಂಗ್ ಸೇರಿ ಎಲ್ಲ ಸಚಿವರ ಜತೆ ಇದ್ದೇನೆ. ನಾವೆಲ್ಲ ಒಟ್ಟಿಗೇ ಇದ್ದೇವೆ. ಸಾರ್ವಜನಿಕ ಜೀವನದಲ್ಲಿ ಎಲ್ಲ ಸಂದರ್ಭದಲ್ಲಿ ನಮಗೆ ಬೇಕಾದಂತೆ ಆಗುವುದಿಲ್ಲ. ನೋವು, ನಲಿವು, ಸೋಲು, ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು. ತಾಳ್ಮೆ ಕಳೆದುಕೊಳ್ಳಬೇಡ ಎಂದು ಕೆಲವು ಆಪ್ತರಿಗೆ ಹೇಳಿದ್ದೇನೆ. ನಾಳೆ ಬೆಂಗಳೂರಿಗೆ ಹೋಗಿ ಈ ಕುರಿತು ಮಾತನಾಡಲಿದ್ದೇನೆ ಎಂದರು. ನಾನು ನಿರ್ವಹಿಸುತ್ತಿದ್ದ ಸಕ್ಕರೆ ಖಾತೆಯನ್ನು ಹಿಂಪಡೆದ ಬಗ್ಗೆ ಯಾವುದೇ ಬೇಸರವಿಲ್ಲ. ಯಾವ ಖಾತೆ ಪಡೆಯುತ್ತೇವೆ ಎಂಬುದು ಮುಖ್ಯವಲ್ಲ. ಪಡೆದ ಖಾತೆಯನ್ನು ಹೇಗೆ ನಿಭಾಯಿಸುತ್ತೇವೆ ಎಂಬುದು ಮುಖ್ಯ ಎಂದರು.

ರೈತರ ಪ್ರತಿಭಟನೆ ದುರದೃಷ್ಟಕರ. ಅವರು ತಮ್ಮ ಬೇಡಿಕೆಗಳನ್ನು ಸರ್ಕಾರದ ಮುಂದೆ ಇಡಬೇಕಾಗಿತ್ತು. ಇದರಲ್ಲೇನೋ ರಾಜಕೀಯ ಅಡಗಿದೆ ಎಂಬ ಅನುಮಾನವಿದೆ. ತನಿಖೆ ಮಾಡಬೇಕು. ನಮ್ಮ ಸರ್ಕಾರ ರೈತರನ್ನು ಕಡೆಗಣಿಸುವ ಕೆಲಸ ಮಾಡಿಲ್ಲ. ಕಾಯ್ದೆಗಳಿಂದ ಯಾವುದೇ ತೊಂದರೆಯಾಗುವುದಿಲ್ಲ ಎಂದು ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ. ರೈತರಿಗೆ ನೀಡಬೇಕಾದ ಎಲ್ಲ ಸೌಲಭ್ಯಗಳನ್ನು ನಮ್ಮ ಸರ್ಕಾರದಿಂದ ನೀಡುತ್ತಿದ್ದೇವೆ. ರೈತರು ರಾಜಕೀಯಕ್ಕೆ ಒಳಗಾಗಬಾರದು.ಶಿವರಾಮ ಹೆಬ್ಬಾರ ಕಾರ್ವಿುಕ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net