ಖರೀದಿದಾರರಂತೆ ಬಂದು ಬಂಗಾರ ದೋಚಿದ್ದ ಖದೀಮರು ಅಂದರ್

IMG-20220803-WA01613.jpg
Published on

ವಿಜಯವಾಣಿ ಸುದ್ದಿಜಾಲ ಯಲ್ಲಾಪುರ ಖರೀದಿದಾರರಂತೆ ಆಭರಣದ ಅಂಗಡಿಗೆ ಬಂದು ಲಕ್ಷಾಂತರ ರೂ ಮೌಲ್ಯದ ಬಂಗಾರದ ಚೂರು ಕಳ್ಳತನ ಮಾಡಿದ್ದ ಇಬ್ಬರನ್ನು ತಾಲೂಕಿನ ಕಿರವತ್ತಿ ಚೆಕ್ ಪೋಸ್ಟ್ ಬಳಿ ಪೊಲೀಸರು ಬಂಧಿಸಿದ್ದಾರೆ.

ಗದಗದ ಮುಜಾಹಿದ್ ಸೈಯ್ಯದ್ ಬಾಬರ್ ಅಲಿ ಸೈಯ್ಯದ್ ಹಾಗೂ ವಿಜಯಪುರದ ಜಾಫರ್ ಹುಸೇನ ಇರಾನಿ ಬಾಗರ ಹುಸೇನ ಇರಾನಿ ಬಂಧಿತರು. ಇವರು ಕಳೆದ ಆ.1 ರಂದು ಪಟ್ಟಣದ ಕಾಳಮ್ಮನಗರದ ಪ್ರಸನ್ನ ಶೇಟ್ ಎಂಬವರಿಗೆ ಸೇರಿದ ಮಹಾಗಣಪತಿ ಜ್ಯುವೆಲರ್ಸ್ ಗೆ ಬಂದು ವಾಸ್ತು ಪೆಟ್ಟಿಗೆ ಖರೀದಿಸಿದ್ದಾರೆ. ನಂತರ ಬಂಗಾರದ ಚೂರು ಕೇಳಿದ್ದು, ಬಂಗಾರದ ಚೂರು ಇರುವ ಡಬ್ಬವನ್ನು ಅಂಗಡಿಯವರು ತೋರಿಸಲೆಂದು ಹೊರಗಡೆ ತೆಗೆದಾಗ ಅವರಿಗೆ ತಿಳಿಯದಂತೆ ಕದ್ದೊಯ್ದಿದ್ದಾರೆ. 

    ಈ ಕುರಿತು ಅಂಗಡಿಯ ಮಾಲೀಕರು ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಿರವತ್ತಿಯ ಚೆಕ್ ಪೋಸ್ಟ್ ಬಳಿ ಕಳ್ಳರನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ ಸ್ಕೂಟಿ ಹಾಗೂ ಕಳವು ಮಾಡಿದ 1.20 ಲಕ್ಷ ರೂ ಮೌಲ್ಯದ ಬಂಗಾರದ ಚೂರನ್ನು ವಶಪಡಿಸಿಕೊಳ್ಳಲಾಗಿದೆ.

    ಎಸ್.ಪಿ ಸುಮನ್ ಪೆನ್ನೆಕರ್, ಎಎಸ್‌ಪಿ ಬದರಿನಾಥ, ಡಿ.ವೈ.ಎಸ್.ಪಿ ರವಿ ನಾಯ್ಕ ಮಾರ್ಗದರ್ಶನದಲ್ಲಿ ಸಿಪಿಐ ಸುರೇಶ ಯಳ್ಳೂರ, ಪಿಎಸ್ಐಗಳಾದ ಅಮೀನಸಾಬ ಅತ್ತಾರ್, ನಸರೀನ್ ತಾಜ್, ಸಿಬ್ಬಂದಿ ಬಸವರಾಜ ಹಗರಿ, ಮಹಮ್ಮದ್ ಶಫಿ, ಗಜಾನನ, ಪ್ರವೀಣ, ನಂದೀಶ, ಶೋಭಾ ನಾಯ್ಕ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net