ಖಂಡಿತ ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದಾರೆ

Eshwarappa PC 1
ಕೆ.ಎಸ್.ಈಶ್ವರಪ್ಪ
Published on

ಬಾಗಲಕೋಟೆ: ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಈಗಲ್ಲ, ಮೊದಲಿನಿಂದಲೂ ಬಿಜೆಪಿ ಮತ್ತು ಕಾಂಗ್ರೆಸ್ ಮುಖಂಡರ ನಡುವಿನ ಹೊಂದಾಣಿಕೆ ರಾಜಕಾರಣದ ಬಗ್ಗೆ ಹೇಳುತ್ತಿದ್ದಾರೆ. ಅದನ್ನು ನಾನು ಒಪ್ಪಿಕೊಳ್ಳುತ್ತೇನೆ ಎಂದು ಕೆ.ಎಸ್.ಈಶ್ವರಪ್ಪ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ ಮಾತನ್ನು ಸಿ.ಟಿ.ರವಿ, ಪ್ರತಾಪಸಿಂಹ ಸಹ ಹೇಳಿದ್ದರು. ಬಿಜೆಪಿ ಮತ್ತು ಕಾಂಗ್ರೆಸ್ ಮುಖಂಡರ ನಡುವೆ ಹೊಂದಾಣಿಕೆ ರಾಜಕಾರಣ ನಡೆದಿದೆ ಎನ್ನುವುದರಲ್ಲಿ ಯಾವುದೇ ಅನುಮಾನಗಳೇ ಇಲ್ಲ. ಸಿದ್ದರಾಮಯ್ಯ ಪಟ್ಟಿ ಮಾಡಿರುವ ಬಿಜೆಪಿಯ ೨೨ ಹಗರಣ ಹಾಗೂ ಇವರ ಬಗ್ಗೆ ಅವರು ಮಾಡುತ್ತಿರುವ ಮುಡಾ, ವಾಲ್ಮೀಕಿ ನಿಮಗ, ಅಲ್ಪಸಂಖ್ಯಾತರ ಇಲಾಖೆ, ಅಪೆಕ್ಸ್ ಬ್ಯಾಂಕ್ ಹಗರಣಗಳನ್ನು ಸಿಬಿಐಗೆ ವಹಿಸಿದರೆ ಎಲ್ಲವೂ ಹೊರಗಡೆ ಬರುತ್ತದೆ. ಆದರೆ, ಇವರಿಬ್ಬರು ಒಬ್ಬರ ಮೇಲೆ ಮತ್ತೊಬ್ಬರು ಆರೋಪ ಮಾಡುತ್ತಿದ್ದಾರೆ ವಿನಃ ಇಬ್ಬರಿಗೂ ಸಿಬಿಐ ತನಿಖೆಗೆ ಒಪ್ಪಿಗೆ ಕೊಡುತ್ತಿಲ್ಲ. ತನಿಖೆ ನಡೆದರೆ ಸಿದ್ದರಾಮಯ್ಯ ಹಾಗೂ ಅವರ ಸಂಪುಟದ ಕೆಲ ಸಚಿವರು ಜೊತೆಗೆ ಅವರೊಂದಿಗೆ ರಾಜಕೀಯ ಹೊಂದಾಣಿಕೆ ಮಾಡಿಕೊಂಡಿರುವವರು ಎಲ್ಲರೂ ಒಳಗಡೆ ಹೋಗುತ್ತಾರೆ ಎಂದು ತಿಳಿಸಿದರು.

ಇದೇ ಸಿದ್ದರಾಮಯ್ಯ ಹಾಗೂ ಡಿಕೆಶಿ ಅವರು ಹಿಂದೆ ನನ್ನ ಮೇಲೆ ಆರೋಪ ಬಂದಾಗ ಮೆರವಣಿಗೆ ನಡೆಸಿದ್ದರು. ಆಗ ನಮ್ಮ ಹೈಕಮಾಂಡನವರು ರಾಜೀನಾಮೆ ಕೊಡಬೇಡಿ ಎಂದರೂ ನಾನು ಕಾಲಿಗೆ ಬಿದ್ದು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೆ. ತನಿಖೆಯಲ್ಲಿ ನಾನು ಪರಿಶುದ್ಧನಾಗಿ ಹೊರಬಂದೆ. ನೀವು ಕೇಳಿದಾಕ್ಷಣ ನಾನು ರಾಜೀನಾಮೆ ಕೊಟ್ಟಿರಲಿಲ್ಲವೇ? ಈಗ ನೀವು ಕೊಡಿ ಎಂದು ಸವಾಲ್ ಎಸೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net