

ಪಾಂಡವಪುರ: ಜನರ ಸಮಸ್ಯೆ, ಅಹವಾಲು ಆಲಿಸಲು ತಾಲೂಕು ಮತ್ತು ಜಿಲ್ಲಾ ಕೇಂದ್ರದಲ್ಲಿ ಶಾಸಕರ ಕಚೇರಿ ತೆರೆಯಲಾಗಿದೆ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ತಿಳಿಸಿದರು.
ಪಟ್ಟಣದ ತಾಲೂಕು ಆಡಳಿತ ಸೌಧದ ಕಟ್ಟಡದಲ್ಲಿ ತೆರೆಯಲಾಗಿರುವ ಶಾಸಕರ ಕಚೇರಿಯನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
ವಾರದಲ್ಲಿ ಸಾಧ್ಯವಾದಷ್ಟು ದಿನ ಕಚೇರಿಯಲ್ಲಿ ಕುಳಿತು ಜನರ ಸಮಸ್ಯೆಗಳನ್ನು ಆಲಿಸಿ ಅದಕ್ಕೆ ಪರಿಹಾರ ಒದಗಿಸುವ ಕೆಲಸ ಮಾಡಲಾಗುವುದು. ನನ್ನ ಅನುಪಸ್ಥಿತಿಯಲ್ಲಿ ಬೇರೆಯವವರು ಅಹವಾಲು ಸ್ವೀಕರಿಸಿಸುವ ಜವಾಬ್ದಾರಿ ನಿಭಾಯಿಸುತ್ತಾರೆ. ಒಟ್ಟಿನಲ್ಲಿ ಕ್ಷೇತ್ರದ ಮತದಾರರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ. ಯಾವುದೇ ಹಂತದಲ್ಲೂ ಜನರಿಗೆ ಸಮಸ್ಯೆ ಎದುರಾಗದಂತೆ ನಾವೆಲ್ಲರೂ ಒಗ್ಗೂಡಿ ಶ್ರಮಿಸಬೇಕಿದೆ ಎಂದು ಹೇಳಿದರು.
ಕ್ಷೇತ್ರದ ಜನ ಎದುರಿಸುತ್ತಿರುವ ಸಮಸ್ಯೆಗಳಿಗೆ ಒಂದೇ ದಿನ ಅಥವಾ ತಿಂಗಳಲ್ಲಿ ಪರಿಹಾರ ಒದಗಿಸಲು ಸಾಧ್ಯವಿಲ್ಲ. ಸಮಸ್ಯೆಗಳು ಉಲ್ಬಣಿಸದಂತೆ ಶಕ್ತಿಮೀರಿ ಪ್ರಯತ್ನಿಸುವ ಜತೆಗೆ ಅದಕ್ಕಾಗಿ ಯೋಜನೆಗಳನ್ನು ರೂಪಿಸಿಕೊಳ್ಳುತ್ತೇನೆ. ತಾಲೂಕು ಪಂಚಾಯಿತಿ, ಕಂದಾಯ, ಪಿಡಿಒ ಸೇರಿದಂತೆ ಎಲ್ಲ ಇಲಾಖೆಗಳ ಅಧಿಕಾರಿಗಳು ಜವಾಬ್ದಾರಿಯುತವಾಗಿ ನಡೆದುಕೊಂಡು ಜನರ ಕೆಲಸ ಕಾರ್ಯಗಳನ್ನು ಮಾಡಿಕೊಡುವಂತೆ ಸೂಚಿಸಲಾಗಿದೆ. ಸರ್ಕಾರದ ಸವಲತ್ತುಗಳನ್ನು ಪಡೆಯಲು ಅಗತ್ಯವಿರುವ ಆಧಾರ್ ಕಾರ್ಡ್‌ಗಳಲ್ಲಿನ ದೋಷ ಸರಿಪಡಿಸಲು ಜನ ಪರದಾಡುತ್ತಿದ್ದಾರೆ. ತಾಲೂಕು ಕಚೇರಿ ಹೊರಗೆ ಜನ ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಆಧಾರ್ ಕಾರ್ಡ್ ದೋಷದ ಪರಿಣಾಮ ಅನೇಕರಿಗೆ ವೃದ್ಧಾಪ್ಯ ವೇತನ, ವಿಧವಾ ವೇತನ ಸೇರಿದಂತೆ ಹಲವು ಪಿಂಚಣಿಗಳು ಸಿಗುತ್ತಿಲ್ಲ. ಕೆಲವೊಮ್ಮೆ ಸರ್ಕಾರ ರೂಪಿಸಿ ಜಾರಿಗೆ ತರುವ ನಿಯಮಗಳು ಜನರಿಗೆ ಅರ್ಥವಾಗದೆ ಗೊಂದಲಕ್ಕೀಡಾಗುತ್ತಾರೆ. ನಾವು ಜನರಿಗೆ ಅರ್ಥಮಾಡಿಸಿ ಸಮಸ್ಯೆ ಬಗೆಹರಿಸಬೇಕಾದ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
ತಾಲೂಕು ಆಡಳಿತ ಯಂತ್ರಕ್ಕೆ ಚುರುಕು:
ಜನರಿಗೆ ಅಗತ್ಯವಾಗಿರುವ ದಾಖಲೆಗಳನ್ನು ಪಡೆಯಲು ತಿಂಗಳುಗಟ್ಟಲೇ ಕಾಯುವ ಅಥವಾ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಯಾವ್ಯಾವ ರೀತಿ ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ಚರ್ಚಿಸಲು ತಾಲೂಕು ಮಟ್ಟದ ಎಲ್ಲ ಅಧಿಕಾರಿಗಳ ಸಭೆ ಕರೆಯಲಾಗುವುದು. ಅಲ್ಲಿ ಎಷ್ಟು ಕಡತಗಳು ಪೆಡಿಂಗ್ ಇದೆ. ಆ ಕಡತಗಳ ಶೀಘ್ರ ವಿಲೇವಾರಿಗೆ ಕೈಗೊಳ್ಳಬೇಕಾದ ಕ್ರಮ ಸೇರಿದಂತೆ ಇತರೆ ವಿಷಯಗಳನ್ನು ಚರ್ಚಿಸಿ ತಾಲೂಕು ಆಡಳಿತ ಯಂತ್ರವನ್ನು ಚುರುಕುಗೊಳಿಸಲಾಗುವುದು. ಅಗತ್ಯವಿದ್ದರೆ ತಾಲೂಕು ಕಚೇರಿಯ ಕೆಲಸ ಕಾರ್ಯಗಳ ವೇಗ ಹೆಚ್ಚಿಸಲು ಹೆಚ್ಚುವರಿ ಕೌಂಟರ್‌ಗಳನ್ನು ತೆರೆಯಲು ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಭರವಸೆ ನೀಡಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ತಾಲೂಕು ಅಧ್ಯಕ್ಷ ಕೆನ್ನಾಳು ನಾಗರಾಜು, ಮುಖಂಡರಾದ ಎಸ್.ದಯಾನಂದ್, ಎಣ್ಣೆಹೊಳೆಕೊಪ್ಪಲು ವೈ.ಪಿ.ಮಂಜು, ಹಿರೇಮರಳಿ ಲೋಹಿತ್, ಶಾಂತಿನಗರ ಹರೀಶ್, ಇಂಗಲಗುಪ್ಪೆ ಲೋಕೇಶ್ ಇದ್ದರು.