

ರಾಜೇಂದ್ರ ಶಿಂಗನಮನೆ ಶಿರಸಿ
ಚುನಾವಣೆ ಆಯೋಗದ ಸೂಚನೆಯನ್ವಯ ನಡೆದ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಕ್ಷೇತ್ರ ಪುನರ್ ವಿಂಗಡಣೆಯಲ್ಲಿ ಗೊಂದಲ ಸೃಷ್ಟಿಯಾಗಿದೆ. ಈ ಬಗ್ಗೆ ಜಿಲ್ಲಾಡಳಿತಕ್ಕೆ ಆಕ್ಷೇಪಣೆ ಸಲ್ಲಿಕೆಯಾಗಿದೆ.
ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಗಳಿಗೆ ಸಾರ್ವತ್ರಿಕ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಕ್ಷೇತ್ರಗಳ ಪುನರ್ ವಿಂಗಡಣೆ ಮಾಡುವಂತೆ ರಾಜ್ಯ ಚುನಾವಣೆ ಆಯೋಗ ಜಿಲ್ಲಾಡಳಿತಗಳಿಗೆ ಸೂಚಿಸಿತ್ತು. ಜಿಲ್ಲೆ ವ್ಯಾಪ್ತಿಯಲ್ಲಿ 40 ಜಿಲ್ಲಾ ಪಂಚಾಯಿತಿ ಕ್ಷೇತ್ರ ಹಾಗೂ 128 ತಾಲೂಕು ಪಂಚಾಯಿತಿ ಕ್ಷೇತ್ರಗಳಾಗಿ ವಿಂಗಡಿಸುವಂತೆ ಆದೇಶಿಸಿತ್ತು. ಅದರಂತೆ ಫೆ. 20ರೊಳಗೆ ಉತ್ತರ ಕನ್ನಡದ ಎಲ್ಲ ತಾಲೂಕುಗಳಿಂದ ಪುನರ್ ವಿಂಗಡಣೆ ವರದಿ ಕಂದಾಯ ಅಧಿಕಾರಿಗಳಿಂದ ಜಿಲ್ಲಾಡಳಿತಕ್ಕೆ ಸಲ್ಲಿಕೆಯಾಗಿದೆ. ಆದರೆ, ಆಯೋಗದ ಆದೇಶದಲ್ಲಿನ ಗೊಂದಲದಿಂದ ಜನಸಂಖ್ಯೆಗೆ ಅನುಗುಣವಾಗಿ ನಡೆಯಬೇಕಿದ್ದ ಜಿಲ್ಲಾ
ಹಾಗೂ ತಾಲೂಕು ಪಂಚಾಯಿತಿ ಕ್ಷೇತ್ರ ವಿಂಗಡಣೆ ಕಾರ್ಯ ಸಮರ್ಪಕವಾಗಿಲ್ಲ ಎಂಬ ಮಾತುಗಳು ಕೇಳಿ ಬಂದಿವೆ.
14 ಸಾವಿರಕ್ಕೆ 11 ಸ್ಥಾನ: ಒಂದು ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆ ಇರುವ ತಾಲೂಕುಗಳಿಗೆ ಜನಸಂಖ್ಯೆ ಆಧಾರಿತವಾಗಿ ಕ್ಷೇತ್ರ ಪುನರ್ ವಿಂಗಡಣೆ ಮಾಡುವಂತೆ, ಒಂದು ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಇರುವ ತಾಲೂಕುಗಳಿಗೆ ಕಡ್ಡಾಯವಾಗಿ ಕನಿಷ್ಠ 11 ಚುನಾಯಿತ ಸದಸ್ಯರಿಗೆ ಅವಕಾಶ ಸಿಗುವ ರೀತಿ ವಿಂಗಡಿಸಿ ನೀಡುವಂತೆ ಆಯೋಗವೇ ಸೂಚಿಸಿತ್ತು. ಅದರಂತೆ ವಿಂಗಡಣೆ ಮಾಡಿದ ಪರಿಣಾಮ ದೊಡ್ಡ ತಾಲೂಕುಗಳಾದ ಶಿರಸಿ, ಹೊನ್ನಾವರ ಹಾಗೂ ಭಟ್ಕಳ ತಾಲೂಕುಗಳಲ್ಲಿ ಹಾಲಿ ಇರುವ ಸ್ಥಾನಗಳಿಗಿಂತ ಕಡಿಮೆಯಾಗಿವೆ. ಉಳಿದಂತೆ ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಇರುವ ತಾಲೂಕುಗಳಲ್ಲಿ 11 ಸದಸ್ಯ ಸ್ಥಾನಕ್ಕೆ ಅವಕಾಶ ನೀಡಲಾಗಿದೆ. ವಿಶೇಷವಾಗಿ ಕಳೆದ ವರ್ಷ ತಾಲೂಕು ಕೇಂದ್ರವಾಗಿ ಘೊಷಿಸಿರುವ ದಾಂಡೇಲಿಯಲ್ಲಿ ಕೇವಲ 4 ಗ್ರಾಮ ಪಂಚಾಯಿತಿಗಳಿದ್ದು, ಅಂದಾಜು 14 ಸಾವಿರದಷ್ಟು ಜನಸಂಖ್ಯೆಯಿದೆ. ಅಲ್ಲಿ 11 ಸದಸ್ಯರಿಗೆ ಅವಕಾಶ ಕಲ್ಪಿಸಿ ವಿಂಗಡಣೆ ಮಾಡಿರುವುದು ಆಯೋಗದ ಆದೇಶದ ಗೊಂದಲಕ್ಕೆ ಪುಷ್ಠಿ ನೀಡಿದೆ. ಯಾವ ಕಾರಣಕ್ಕೆ ಜನಸಂಖ್ಯೆ ಕಡಿಮೆ ಇರುವ ತಾಲೂಕುಗಳಿಗೆ ಹೆಚ್ಚಿನ ಸದಸ್ಯರನ್ನು ನೀಡಿದ್ದಾರೆ? ಜನಸಂಖ್ಯೆ ಹೆಚ್ಚಿರುವ ಇತರ ತಾಲೂಕುಗಳಿಗೆ ಕಡಿತವೇಕೆ? ಎಂಬ ಪ್ರಶ್ನೆ ಹಾಲಿ ತಾಪಂ ಸದಸ್ಯರಿಂದಲೇ ಕೇಳಿಬರುತ್ತಿದೆ.
ಕಡಿಮೆಯಾಗದ ಜಿ.ಪಂ. ಸ್ಥಾನ: ತಾಲೂಕು ಪಂಚಾಯಿತಿ ಕ್ಷೇತ್ರಗಳ ಪುನರ್ ವಿಂಗಡಣೆ ಗೊಂದಲ ಒಂದೆಡೆಯಾದರೆ ಜಿಪಂ ಕ್ಷೇತ್ರ ಪುನರ್ ವಿಂಗಡಣೆ ಸಂಬಂಧ ಉತ್ತರ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಿಗೆ ಜನಸಂಖ್ಯೆ ಆಧಾರದಲ್ಲಿ ವಿನಾಯಿತಿ ನೀಡಿದ್ದು, 30 ಸಾವಿರ ಜನರಿಗೆ ಒಬ್ಬ ಸದಸ್ಯ ಇರಬೇಕೆಂಬ ನಿಯಮವಿದೆ. ಆದರೆ, ಹಾಲಿ ಇರುವ ಸದಸ್ಯ ಸ್ಥಾನಕ್ಕೆ ಹೋಲಿಕೆ ಮಾಡಿದರೆ ಜನಸಂಖ್ಯೆ
ಕಡಿಮೆಯಿದ್ದರೂ ಹಲವು ತಾಲೂಕುಗಳಲ್ಲಿ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಲ್ಲಿ ಇಳಿಕೆ ಮಾಡಿಲ್ಲ. ಇದು ಕೂಡ ಗೊಂದಲಕ್ಕೆ ಎಡೆಯಾಗಿದೆ. ಯಾವ ಕಾರಣಕ್ಕೆ ಜನಸಂಖ್ಯೆ ಆಧಾರ ಪರಿಗಣಿಸಿಲ್ಲ ಎಂಬ ಪ್ರಶ್ನೆಗಳು ಸಾರ್ವಜನಿಕರಿಂದ ಕೇಳಿ ಬಂದಿವೆ. ಈ ಬಗ್ಗೆ
ಆಕ್ಷೇಪಣೆ ವ್ಯಕ್ತವಾಗಿದ್ದು, ಜನಪ್ರತಿನಿಧಿಗಳು ಜಿಲ್ಲಾಡಳಿತಕ್ಕೆ ಆಕ್ಷೇಪಣೆ ಸಲ್ಲಿಸುತ್ತಿದ್ದಾರೆ.
ಆಯೋಗದ ಹಾಗೂ ಜಿಲ್ಲಾಡಳಿತದ ಸೂಚನೆಯಂತೆ ಕ್ಷೇತ್ರಗಳ ಪುನರ್ ವಿಂಗಡಣೆ ಮಾಡಿ ವರದಿ ಸಲ್ಲಿಸಲಾಗಿದೆ. ಈ ಬಗ್ಗೆ ಗೊಂದಲಗಳಿವೆ ಎಂದು ಜನಪ್ರತಿನಿಧಿಗಳು ಆಕ್ಷೇಪಣೆ ಸಲ್ಲಿಸುತ್ತಿದ್ದು, ಎಲ್ಲವನ್ನೂ ಸರ್ಕಾರಕ್ಕೆ ಸಲ್ಲಿಸಲಾಗುತ್ತಿದೆ. ಹಿರಿಯ ಅಧಿಕಾರಿಗಳ ನಿರ್ದೆಶನದಂತೆ ಮುಂದುವರಿಯಲಾಗುವುದು. | ಎಂ.ಆರ್. ಕುಲಕರ್ಣಿ ತಹಸೀಲ್ದಾರ್ ಶಿರಸಿ
ತಾಪಂ ಕ್ಷೇತ್ರ ಇಳಿಕೆ ಮಾಡಬಾರದು ಎಂದು ಈಗಾಗಲೆ ಆಕ್ಷೇಪಣೆ ಸಲ್ಲಿಸಲಾಗಿದೆ. ಹೊಸ ತಾಲೂಕುಗಳಿಗೆ ಮಾತ್ರ ಜನಸಂಖ್ಯೆ ಆಧಾರಿತ ಲೆಕ್ಕಾಚಾರ ಮಾಡಬೇಕೇ ಹೊರತು ಹಳೆಯ ತಾಲೂಕುಗಳಿಗೆ ಅದನ್ನು ಅನ್ವಯ ಮಾಡಬಾರದು. ಚುನಾವಣೆ ಆಯೋಗ ನೀಡಿದ ಆದೇಶದಲ್ಲಿಯೇ ಸಾಕಷ್ಟು ಗೊಂದಲವಿದೆ. ಅದನ್ನು ಬಗೆಹರಿಸಿಕೊಂಡು ಕ್ಷೇತ್ರ ಪುನರ್ ವಿಂಗಡಣೆ ಮಾಡಬೇಕು. | ನರಸಿಂಹ ಹೆಗಡೆ ತಾಪಂ ಸದಸ್ಯ