ದಕ್ಷಿಣ ಭಾರತದವರಿಗೂ ಪ್ರಾತಿನಿಧ್ಯ ಸಿಗಲಿ

2sirsi8- margrate alva
Published on

ಶಿರಸಿ: ರಾಜಕೀಯವಾಗಿ ದೇಶದ ಪ್ರಮುಖ ಹುದ್ದೆಗಳಲ್ಲಿ ದಕ್ಷಿಣ ಭಾರತದವರಿಗೂ ಪ್ರಾತಿನಿಧ್ಯ ಸಿಗಬೇಕು ಎಂಬ ಉದ್ದೇಶದಿಂದ ಉಪರಾಷ್ಟ್ರಪತಿ ಸ್ಥಾನದ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ ಎಂದು ಕಾಂಗ್ರೆಸ್ ಹಿರಿಯ ನಾಯಕಿ, ಪ್ರತಿಪಕ್ಷಗಳ ಉಪರಾಷ್ಟ್ರಪತಿ ಅಭ್ಯರ್ಥಿ ಮಾರ್ಗರೇಟ್ ಆಳ್ವ ಹೇಳಿದರು.

ನಗರದಲ್ಲಿ ಮಂಗಳವಾರ ವರ್ಚುವಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ, ರಾಷ್ಟ್ರಪತಿ, ಪ್ರಮುಖ ಹುದ್ದೆಗಳಲ್ಲಿ ಉತ್ತರ ಭಾರತದವರೇ ಇದ್ದಾರೆ. ದಕ್ಷಿಣ ಭಾರತದ ಧ್ವನಿಯಾಗುವ ಸಲುವಾಗಿ ಉಪರಾಷ್ಟ್ರಪತಿ ಹುದ್ದೆಗೆ ಸ್ಪರ್ಧಿಸಿದ್ದೇನೆ. ಈ ಚುನಾವಣೆಯಲ್ಲಿ ವಿಪ್ ಜಾರಿಯಾಗುವುದಿಲ್ಲ. ಗುಪ್ತ ಮತದಾನ ಇರುವ ಕಾರಣ ಬಿಜೆಪಿಯನ್ನೂ ಒಳಗೊಂಡಂತೆ ಹೆಚ್ಚಿನ ಸಂಖ್ಯೆಯಲ್ಲಿ ನನ್ನನ್ನು ಬೆಂಬಲಿಸುವ ವಿಶ್ವಾಸವಿದೆ ಎಂದರು.

ನಾನು ಕರ್ನಾಟಕದ ಮಗಳು. ನನಗೆ ಎಲ್ಲರ ಆಶೀರ್ವಾದ ಬೇಕು ಎಂದ ಅವರು, ಚುನಾವಣಾ ವಾತಾವರಣ ಉತ್ತಮವಾಗಿದೆ. ಪ್ರಚಾರ ಈಗ ಚಾಲೆಂಜ್ ಆಗಿದೆ. ಉಪರಾಷ್ಟ್ರಪತಿ ಅಭ್ಯರ್ಥಿ ಸ್ಥಾನವನ್ನು ನಾನು ಪಕ್ಷದಲ್ಲಿ ಕೇಳಿಲ್ಲ. ಎಂದಿನಂತೆ ಕೆಲಸ ಮುಗಿಸಿ ಶಿರಸಿಗೆ ಬರಲು ಸಿದ್ಧನಾಗಿದ್ದೆ. ಆದರೆ, ಎಲ್ಲರೂ ಸೇರಿ ನನ್ನನ್ನು ಕಣಕ್ಕಿಳಿಸಲು ತೀರ್ವನಿಸಿದ್ದಾರೆ. ವಿರೋಧ ಪಕ್ಷಗಳೂ ನಿಮ್ಮನ್ನು ಒಪ್ಪಿಕೊಳ್ಳುತ್ತವೆ ಎಂದು ನನ್ನನ್ನು ದೆಹಲಿಗೆ ಕರೆಸಿಕೊಂಡಿದ್ದಾರೆ. 20 ಪಕ್ಷಗಳು ಒಂದಾಗಿ ನನ್ನನ್ನು ಬೆಂಬಲಿಸಿವೆ. ಇನ್ನೊಂದೆರಡು ಪಕ್ಷ ತೀರ್ವನಿಸಬೇಕಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net