ಕ್ಷಯ ರೋಗ ಮುಕ್ತ ಜಿಲ್ಲೆಯನ್ನಾಗಿಸಲು ಎಲ್ಲರ ಸಹಕಾರ ಅಗತ್ಯ

bkt-18-2
ನವನಗರದ ಖಾಸಗಿ ಹೋಟೆಲ್‌ನಲ್ಲಿ ಚಿಕ್ಕ ಮಕ್ಕಳ ಕ್ಷಯರೋಗ ಪ್ರಕರಣಗಳನ್ನು ಸಮರ್ಪಕವಾಗಿ ಪತ್ತೆ ಹಚ್ಚಲು ಆಗುವ ತೊಂದರೆಗಳ ಕುರಿತು ಹಮ್ಮಿಕೊಂಡಿದ್ದ ಒಂದು ದಿನದ ಕಾರ್ಯಾಗಾರವನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಯಶ್ರೀ ಎಮ್ಮಿ ಉದ್ಘಾಟಿಸಿದರು. ಜಿಲ್ಲಾ ಕ್ಷಯರೋಗ ನಿರ್ಮೂಲಣಾಧಿಕಾರಿ ಸುವರ್ಣ ಕುಲಕರ್ಣಿ, ಮಕ್ಕಳ ತಜ್ಞ ಡಾ.ಸುಜಾತಾ ಪಾಟೀಲ, ಡಾ.ಅಶೋಕ ಬಡಕಲಿ, ಡಾ.ರಮೇಶ ಪೋಳ, ಡಾ.ರಾಘವೇಂದ್ರ ಒನಕಿ, ಜಿಲ್ಲಾ ಮಲೇರಿಯಾ ನಿರ್ಮೂಲಣಾಧಿಕಾರಿ ಡಾ.ಕುಸುಮಾ ಮಾಗಿ ಸೇರಿದಂತೆ ಇತರರು ಇದ್ದರು.
Published on

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯನ್ನು ಕ್ಷಯ ರೋಗ ಮುಕ್ತ ಜಿಲ್ಲೆಯನ್ನಾಗಿಸಲು ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಯಶ್ರೀ ಎಮ್ಮಿ ಹೇಳಿದರು.
ನವನಗರದ ಖಾಸಗಿ ಹೋಟೆಲ್‌ನಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯರೋಗ ನಿರ್ಮೂಲಣ ಅಧಿಕಾರಿಗಳ ಕಾರ್ಯಾಲಯದ ಸಹಯೋಗದಲ್ಲಿ ಎನ್‌ಟಿ.ಇ.ಪಿ ಕಾರ್ಯಕ್ರಮದಡಿ ಚಿಕ್ಕ ಮಕ್ಕಳ ಕ್ಷಯರೋಗ ಪ್ರಕರಣಗಳನ್ನು ಸಮರ್ಪಕವಾಗಿ ಪತ್ತೆ ಹಚ್ಚಲು ಇರುವ ಸವಾಲುಗಳು, ಶ್ವಾಸಕೋಶದ ಮತ್ತು ಹೆಚ್ಚುವರಿ ಶ್ವಾಸಕೋಶದ ಮಾದರಿಗಳ ಸಂಗ್ರಹಣೆಯಲ್ಲಿ ತೊಂದರೆಗಳ ಕುರಿತು ಹಮ್ಮಿಕೊಂಡಿದ್ದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳಲ್ಲಿ ಪೌಷ್ಠಿಕತೆ ಕೊರತೆಯಿಂದ ಕ್ಷಯರೋಗಕ್ಕೆ ತುತ್ತಾಗುತ್ತಿದ್ದಾರೆ. ಜಿಲ್ಲೆಯಲ್ಲಿ ಶೇ.೩೦ ರಷ್ಟು ಜನ ಕ್ಷಯರೋಗ ಪ್ರಕರಣಗಳು ಇದ್ದು, ಹೆಚ್ಚಾಗಿ ಮಕ್ಕಳಲ್ಲಿ ಕಂಡುಬರುತ್ತಿದೆ. ಕ್ಷಯರೋಗವನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ಶ್ವಾಸಕೋಶಗಳ ಮಾದರಿ ಸಂಗ್ರಹಿಸುವಲ್ಲಿ ಉಂಟಾಗುವ ತೊಂದರೆ ನಿವಾರಣಗೆ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಸರ್ಕಾರಿ ಹಾಗೂ ಖಾಸಗಿ ಚಿಕ್ಕಮಕ್ಕಳ ತಜ್ಞರು ತರಬೇತಿಯ ಸದುಪಯೋಗವನ್ನು ಪಡೆದುಕೊಂಡು ಮಾದರಿ ಸಂಗ್ರಹಿಸಿ ಪತ್ತೆ ಹಚ್ಚಿದಲ್ಲಿ ಈ ಕ್ಷಯ ರೋಗವನ್ನು ನಿರ್ಮೂಲನೆ ಮಾಡಲು ಸಾಧ್ಯವಾಗುತ್ತದೆ ಎಂದರು.
ಈ ದೇಶದ ಸಂಪತ್ತು ಮಕ್ಕಳಾಗಿದ್ದು, ಮಕ್ಕಳ ಆರೋಗ್ಯದ ಕಡೆ ಹೆಚ್ಚಿನ ಕಾಳಜಿ ವಹಿಸುವ ಕೆಲಸವಾಗಬೇಕು. ಪ್ರತಿದಿನ ಸ್ಯಾಂಪಲ್ ಸಂಗ್ರಹಣೆಗೆ ಗುರಿ ಇಟ್ಟುಕೊಳ್ಳಬೇಕು. ತೆಗೆದಂತಹ ಸ್ಯಾಂಪಲ್ ಪರೀಕ್ಷೆಯ ವರದಿಯನ್ನು ಕ್ರಾಸ್ ಚೆಕ್ ಮಾಡಲಾಗುತ್ತದೆ. ಆದ್ದರಿಂದ ತಮ್ಮ ಕೆಲಸದಲ್ಲಿ ಪ್ರಾಮಾಣಿಕತೆ ಇರಬೇಕು. ಅಂದಾಗ ಮಾತ್ರ ಈ ಯೋಜನೆ ಯಶಸ್ವಿಗೊಳಿಸಲು ಸಾಧ್ಯವಾಗುತ್ತದೆ. ಕ್ಷಯರೋಗ ಪತ್ತೆ ಕಾರ್ಯದಲ್ಲಿ ಪ್ರಾಮಾಣಿಕ ಕೆಲಸ ಮಾಡಿದಲ್ಲಿ ಒಂದು ಮಗುವಿನ ಜೀವನ ಉಳಿಸಿದಂತಾಗುತ್ತದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಎರಡು ಸಾವಿರದಷ್ಟು ಮಕ್ಕಳು ಕ್ಷಯರೋಗದಿಂದ ಬಳಲುತ್ತಿದ್ದು, ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿ ವರ್ಗದವರು ಮಕ್ಕಳನ್ನು ದತ್ತನ್ನು ಪಡೆದುಕೊಂಡು ೬ ತಿಂಗಳುಗಳ ಕಾಲ ಆ ಮಕ್ಕಳಿಗೆ ಪೌಷ್ಠಿಕ ಆಹಾರಗಳ ಕಿಟ್‌ಗಳನ್ನು ಒದಗಿಸುವ ಕಾರ್ಯ ಮಾಡುತ್ತಿದ್ದಾರೆ. ಮುಧೋಳ ಶಾಸಕರು ಆಗಿರುವ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ೧೧೪ ಮಕ್ಕಳನ್ನು ದತ್ತು ಪಡೆದರೆ, ಶಾಸಕ ವೀರಣ್ಣ ಚರಂತಿಮಠ ೬೫೦ ಮಕ್ಕಳನ್ನು, ಬೀಳಗಿ ಶಾಸಕರು ಆದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ೧೧೦ ಮಕ್ಕಳನ್ನು, ಜಿಲ್ಲಾಧುಕಾರಿಗಳು ೧೧, ಜಿ.ಪಂ ಸಿಇಇ ೧೦ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ೧೦ ಮಕ್ಕಳನ್ನು ದತ್ತು ಪಡೆದಿರುವುದಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕ್ಷಯರೋಗ ನಿರ್ಮೂಲಣಾಧಿಕಾರಿ ಸುವರ್ಣ ಕುಲಕರ್ಣಿ, ಮಕ್ಕಳ ತಜ್ಞ ಡಾ.ಸುಜಾತಾ ಪಾಟೀಲ, ಡಾ.ಅಶೋಕ ಬಡಕಲಿ, ಡಾ.ರಮೇಶ ಪೋಳ, ಡಾ.ರಾಘವೇಂದ್ರ ಒನಕಿ, ಜಿಲ್ಲಾ ಮಲೇರಿಯಾ ನಿರ್ಮೂಲಣಾಧಿಕಾರಿ ಡಾ.ಕುಸುಮಾ ಮಾಗಿ, ವಿಶ್ವ ಆರೋಗ್ಯ ಸಂಸ್ಥೆಯ ಸಲಹೆಗಾರ ಸತೀಶ ಗಾಟಗೆ, ಡಾ.ಸ್ವಾತಿ, ಟಿಪಾ ಪ್ರೊಜೆಕ್ಟ್ ಮ್ಯಾನೇಜರ್ ಮೊಹದ ಅನಾಸ್ ಸೇರಿದಂತೆ ಜಿಲ್ಲಾ ಕ್ಷಯರೋಗ ನಿರ್ಮೂಲಣ ಕಾರ್ಯಾಲಯದ ಸಿಬ್ಬಂದಿಗಳಾದ ಸಂತೋಷ ಹುನ್ನೂರ, ರಾಮಚಂದ್ರ ಕುಲಕರ್ಣಿ, ರಫೀಕ್ ಗಬ್ಬೂರ, ಶ್ರೀರಾಮ ಜಾಧವ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net