

ಬಾಗಲಕೋಟೆ: ೨೦೨೩-೨೪ ನೇ ಶೈಕ್ಷಣಿಕ ಸಾಲಿನಲ್ಲಿ ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ವಿವಿಧ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ವಿಜೇತರಾಗಿರುವುದು ಅತ್ಯಂತ ಹೆಮ್ಮೆಯ ವಿಷಯ. ವಿದ್ಯಾರ್ಥಿಗಳು ಅಧ್ಯಯನದ ಜೊತೆಗೆ ಕ್ರೀಡೆಗೂ ಮಹತ್ವ ನೀಡಬೇಕು ಎಂದು ಬಿವಿವಿ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಹೇಳಿದರು.
ನಗರದ ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಶುಕ್ರವಾರ ೨೦೨೩-೨೪ ನೇ ಶೈಕ್ಷಣಿಕ ವರ್ಷದ ವಿವಿಧ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳನ್ನು ಸನ್ಯಾನಿಸಿ ಅವರು ಮಾತನಾಡಿದರು.
ಆರೋಗ್ಯಕರ ದೇಹದಲ್ಲಿ ಆರೋಗ್ಯಕರ ಮನಸ್ಸು ಎಂದ ವಿವೇಕಾನಂದರ ಮಾತಿನಂತೆ ವಿದ್ಯಾರ್ಥಿ ಸಮೂಹ ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ಆರೋಗ್ಯವಂತರಾಗುವುದು ಅಗತ್ಯವಾಗಿದೆ. ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದಲ್ಲಿಓದಿನ ಜೊತೆಗೆ ಕ್ರೀಡೆಗೂ ಮಹತ್ವ ನೀಡಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಮತ್ತು ಅಧ್ಯಾಪಕರಿಗೆ ಅನುಕೂಲವಾಗಲು ಎಂದು ಸುಸಜ್ಜಿತ ಒಳಾಂಗಣ ಮತ್ತು ಹೊರಾಂಗಣ ಕ್ರೀಡಾ ಅಂಕಣಗಳನ್ನು ಹಾಗೂ ಈಜುಕೋಳ ಸ್ಥಾಪಿಸಲಾಗಿದೆ. ವಿದ್ಯಾರ್ಥಿಗಳು ಈ ಸೌಲಭ್ಯದ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಹೇಳಿದರು.
ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಅಡಿಯಲ್ಲಿ ಆಯೋಜಿಸಿದ್ದ ವಲಯ, ಅಂತರ್‌ವಲಯ ಮತ್ತು ಏಕವಲಯ ಮಟ್ಟದ ಹಾಕಿ, ವಾಲಿಬಾಲ್, ಬಾಸ್ಕೆಟ್ ಬಾಲ್, ಷಟಲ್ ಬ್ಯಾಡ್ಮಿಂಟನ್, ಕ್ರಾಸ್ ಕಂಟ್ರಿ, ಟೇಬಲ್ ಟೆನ್ನಿಸ್ ಕ್ರೀಡಾಕೂಟಗಳಲ್ಲಿ ವಿಜೇತ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು.
ಬಿವಿವಿ ಸಂಘದ ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಎಂ.ಸಜ್ಜನ (ಬೇವೂರ), ಕಟ್ಟಡ ವಿಭಾಗದ ಕಾರ್ಯಾಧ್ಯಕ್ಷ ಮಹೇಶ ಕಕರಡ್ಡಿ, ಮೆಡಿಕಲ್ ಕಾಲೇಜ್ ಪ್ರಾಚಾರ್ಯ ಡಾ.ಅಶೋಕ ಮಲ್ಲಾಪೂರ, ವೈದ್ಯಕೀಯ ಅಧೀಕ್ಷಕಿ ಡಾ.ಭುವನೇಶ್ವರಿ ಯಳಮಲಿ, ಡಾ. ಶೀವಕುಮಾರ ಸೊಲಬನ್ನವರ, ಡಾ.ದಿಲೀಪ ನಾಟೆಕರ, ಕಾಲೇಜಿನ ಕ್ರೀಡಾ ಕಾರ್ಯದರ್ಶಿ ಡಾ.ಸಂತೋಷ ಶೀಲವಂತ ಮತ್ತು ದೈಹಿಕ ನಿರ್ದೇಶಕ ಡಾ.ವಿಜಯಕುಮಾರ ಹಿರೇಮಠ ಇದ್ದರು.