

ಪಾಂಡವಪುರ: ಕ್ರೀಡೆಯಲ್ಲಿ ಗೆಲುವು-ಸೋಲಿಗಿಂತ ಭಾಗವಹಿಸುವುದು ಬಹಳ ಮುಖ್ಯವಾಗುತ್ತದೆ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.
ತಾಲೂಕಿನ ಜಯಂತಿ ನಗರದ ಶ್ರೀ ಶಂಭುಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪದವಿ ಪೂರ್ವ ಕಾಲೇಜು ವತಿಯಿಂದ ಆಯೋಜಿಸಿದ್ದ ರಾಜ್ಯ ಮಟ್ಟದ ಪದವಿ ಪೂರ್ವ ಕಾಲೇಜುಗಳ ಲಾನ್ ಟೆನಿಸ್ ಪಂದ್ಯಾವಳಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಕ್ರೀಡೆ ಮಕ್ಕಳನ್ನು ದೈಹಿಕ ಹಾಗೂ ಮಾನಸಿಕ ಸದೃಢಗೊಳಿಸಲು ಸಹಕಾರಿಯಾಗಿದೆ. ಆರೋಗ್ಯಕರ ಜೀವನಕ್ಕಾಗಿ ನಿತ್ಯ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕಾಗಿದೆ ಎಂದರು.
ಶಂಭುಲಿಂಗೇಶ್ವರ ಶಿಕ್ಷಣ ಸಂಸ್ಥೆ ಟೆನಿಸ್ ಕೋರ್ಟ್ ನಿರ್ಮಿಸಿ ರಾಜ್ಯಮಟ್ಟದ ಲಾನ್ ಟೆನಿಸ್ ಕ್ರೀಡಾಕೂಟ ನಡೆಸುತ್ತಿರುವುದು ಶ್ಲಾಘನೀಯ. ಕ್ರೀಡೆಗಳಲ್ಲಿ ಸೋಲು-ಗೆಲುವು ಸಾಮಾನ್ಯ. ಮೊದಲು ಕ್ರೀಡೆಯಲ್ಲಿ ಭಾಗವಹಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿ ಕ್ರೀಡಾಕೂಟದಲ್ಲಿ ಭಾಗವಹಿಸಿರುವ ಎಲ್ಲ ವಿದ್ಯಾರ್ಥಿಗಳಿಗೂ ಶುಭವಾಗಲೆಂದು ಹಾರೈಸಿದರು.
ವಿಧಾನ ಪರಿಷತ್ ಸದಸ್ಯ ವಿವೇಕಾನಂದ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಆನ್‌ಲೈನ್ ಗೇಮ್, ಬೆಟ್ಟಿಂಗ್‌ನಂತಹ ದುಶ್ಚಟಕ್ಕೆ ಒಳಗಾಗಿ ತಮ್ಮ ಬದುಕು ನಾಶ ಮಾಡಿಕೊಳ್ಳುತ್ತಿದ್ದಾರೆ. ಇವು ಮಕ್ಕಳ ಮುಂದಿನ ಭವಿಷ್ಯದ ಮೇಲೆ ಸಾಕಷ್ಟು ಪರಿಣಾಮ ಬೀರಲಿವೆ. ಹಾಗಾಗಿ ಮಕ್ಕಳ ಬಗ್ಗೆ ಪಾಲಕರು ಹೆಚ್ಚು ನಿಗಾವಹಿಸಬೇಕು. ಮಕ್ಕಳು ಶಿಕ್ಷಣದ ಜತೆಗೆ ಕ್ರೀಡಾಚಟುವಟಿಕೆಗಳಲ್ಲೂ ಭಾಗವಹಿಸುವ ಮೂಲಕ ಕ್ರೀಡಾ ಕ್ಷೇತ್ರದಲ್ಲೂ ಸಾಧನೆ ಮಾಡಬೇಕು ಎಂದು ತಿಳಿಸಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ಚಲುವಯ್ಯ ಮಾತನಾಡಿ, ಉತ್ತಮವಾದ ಪರಿಸರದಲ್ಲಿ ಕ್ರೀಡಾಕೂಟ ಆಯೋಜನೆ ಮಾಡಿದ್ದಾರೆ. ಕ್ರೀಡಾಕೂಟದಲ್ಲಿ ಭಾಗವಹಿಸಿರುವ ಎಲ್ಲ ವಿದ್ಯಾರ್ಥಿಗಳು ಸಮಾನ ಮನಸ್ಥಿತಿಯಿಂದ ಭಾಗವಹಿಸಿ ಸೋಲು- ಗೆಲುವು ಎರಡನ್ನು ಸಮಾನವಾಗಿ ಸ್ವೀಕರಿಸಬೇಕು. ತೀರ್ಪುಗಾರರು ನೀಡುವ ತೀರ್ಮಾನಕ್ಕೆ ಬದ್ಧರಾಗಬೇಕು ಎಂದು ಸಲಹೆ ನೀಡಿದರು.
ಎಂಟು ಜಿಲ್ಲೆಗಳ ಕ್ರೀಡಾಪಟುಗಳು ಭಾಗವಹಿಸಿದ್ದರು. ಅಂತಾರಾಷ್ಟ್ರಿಯ ಶ್ರೇಯಾಂಕಿಕ ಟೆನಿಸ್ ಆಟಗಾರ ಆರ್.ನಾಗರಾಜು ಚಾಲನೆ ನೀಡಿದರು. ತಹಸೀಲ್ದಾರ್ ಎಸ್.ಸಂತೋಷ್, ಎಸ್‌ಎಸ್‌ಇಟಿ ಅಧ್ಯಕ್ಷ ಪಿ.ಹೊನ್ನರಾಜು, ಉಪಾಧ್ಯಕ್ಷ ಪ್ರೊ.ಎಂ.ಪಂಚಲಿಂಗೇಗೌಡ, ಮನ್‌ಮುಲ್ ನಿದೇರ್ಶಕ ಕಾಡೇನಹಳ್ಳಿ ರಾಮಚಂದ್ರು, ಕೆನ್ನಾಳು ಗ್ರಾಪಂ ಅಧ್ಯಕ್ಷ ಪ್ರಕಾಶ್, ಬಿಇಒ ರವಿಕುಮಾರ್, ಡಾ.ಅರವಿಂದ್, ಉಪನ್ಯಾಸಕರಾದ ರಾಮಕೃಷ್ಣೇಗೌಡ, ಕೆ.ಕುಬೇರ್, ಬಿ.ಜೆ.ಸ್ವಾಮಿ, ಕಾರ್ಯದರ್ಶಿ ಪಿ.ಅಕ್ಷಯ್, ಪಿ.ಧನರಾಜ್, ಪ್ರಾಂಶುಪಾಲೆ ಆರ್.ವಿ.ಸೌಮ್ಯಾ ಹಾಜರಿದ್ದರು.