ಕ್ರೀಡೆ ಯಶಸ್ಸಿಗೆ ಪಕ್ಷಪಾತ ರಹಿತ ತೀರ್ಪು ಮುಖ್ಯ

Oplus_16908290
Oplus_16908290
Published on

ವಿರಾಜಪೇಟೆ: ಕೊಡವ ಹಾಕಿ ಅಕಾಡೆಮಿ, ಹಾಕಿ ಕರ್ನಾಟಕ ಹಾಗೂ ಕಾವೇರಿ ಪದವಿ ಕಾಲೇಜು, ವಿರಾಜಪೇಟೆ ಸಹಯೋಗದಲ್ಲಿ ಹಾಕಿ ತೀರ್ಪುಗಾರರಿಗೆ ಆಯೋಜಿಸಿರುವ ಎರಡು ದಿನಗಳ ಕಾರ್ಯಾಗಾರಕ್ಕೆ ಬುಧವಾರ ಚಾಲನೆ ನೀಡಲಾಯಿತು.

ಕಾವೇರಿ ಕಾಲೇಜಿನ ಕೌಸ್ತುಭ ಸಭಾ ಭವನದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಮೇಕೇರಿರ ರವಿ ಪೆಮ್ಮಯ್ಯ ಉದ್ಘಾಟಿಸಿ ಮಾತನಾಡಿ, ರಘುಪ್ರಸಾದ್ ಹಾಗೂ ರೋಹಿಣಿ ಬೋಪಣ್ಣ ಅವರಂತಹ ಅಂತಾರಾಷ್ಟ್ರೀಯ ತೀರ್ಪುಗಾರರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿರುವುದು ನಿಜಕ್ಕೂ ಹೆಮ್ಮೆಯ ವಿಚಾರ ಎಂದರು.

ಹಾಕಿಯ ತೀರ್ಪುಗಾರಿಕೆಗೆ ಸಂಬಂಧಿಸಿದ ವಿಚಾರಗಳನ್ನು ತಿಳಿದುಕೊಂಡು ಮುಂದಿನ ದಿನಗಳಲ್ಲಿ ಜಿಲ್ಲಾ ಮಟ್ಟ, ರಾಜ್ಯ ಮಟ್ಟ ಹಾಗೂ ರಾಷ್ಟ್ರಮಟ್ಟದಲ್ಲಿ ನಡೆಯುವ ಹಾಕಿ ಪಂದ್ಯಾವಳಿಗಳ ತೀರ್ಪುಗಾರರಾಗಿ ನಿಯೋಜನೆಗೊಳ್ಳುವುದರ ಮೂಲಕ ನಾಡಿಗೆ ಕೀರ್ತಿಯನ್ನು ತರಬೇಕೆಂದು ಆಶಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ವಿರಾಜಪೇಟೆ ಕಾವೇರಿ ಪದವಿ ಕಾಲೇಜು ಪ್ರಾಂಶುಪಾಲ ಬೆನೆಡಿಕ್ಟ್ ಆರ್.ಸಲ್ಡಾನ, ಕೊಡಗಿನಲ್ಲಿ ಇತ್ತೀಚಿನ ದಿನಗಳಲ್ಲಿ ಎಲ್ಲ ರೀತಿಯ ಕ್ರೀಡೆಗಳು ನಡೆಯುತ್ತಿರುವುದು ಸಾಮಾನ್ಯವಾಗಿದೆ. ಆದರೆ ಹೆಚ್ಚಿನ ಕ್ರೀಡೆಗಳು ಯಶಸ್ಸನ್ನು ಕಾಣದೆ ಗೊಂದಲದಿಂದಾಗಿ ಜಗಳಗಳು ನಡೆದು ಕ್ರೀಡೆ ರದ್ದಾಗಿರುವುದನ್ನು ನೋಡಿದ್ದೇವೆ. ಆದ್ದರಿಂದ ಒಂದು ಕ್ರೀಡೆ ಯಶಸ್ವಿಯಾಗಬೇಕಾದರೆ ಆಯೋಜಕರ ಶ್ರಮ ಎಷ್ಟಿರುತ್ತದೆಯೋ ಅದೇ ರೀತಿಯಾಗಿ ತೀರ್ಪುಗಾರರ ಪಕ್ಷಪಾತ ರಹಿತವಾದಂತಹ ತೀರ್ಪುಗಳು ಅತಿ ಮುಖ್ಯವಾಗಿರುತ್ತದೆ. ಅದರಲ್ಲೂ ಹಾಕಿ ಅಂತಹ ಕ್ರೀಡೆಗಳಲ್ಲಿ ತೀರ್ಪುಗಾರರು ಹೆಚ್ಚಿನ ಸೂಕ್ಷ್ಮತೆಯಿಂದ ಪ್ರತಿ ಹಂತವನ್ನು ಗಮನಿಸಿ ತೀರ್ಪು ನೀಡಬೇಕಾಗುತ್ತದೆ ಎಂದರು.

ಮಡಿಕೇರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಕಂಭೀರಂಡ ರಾಕಿ ಪೂವಣ್ಣ ಮಾತನಾಡಿ, ಈ ಕಾರ್ಯಾಗಾರ ಪ್ರಮುಖವಾಗಿ ಕೊಡಗಿನ ಯುವ ಆಟಗಾರರಿಗೆ ಹಾಗೂ ಯುವ ತೀರ್ಪುಗಾರರಿಗಾಗಿ ಆಯೋಜಿಸಲಾಗಿದೆ. ಕೆಲವರು ತಮ್ಮ ವಿದ್ಯಾಭ್ಯಾಸವನ್ನು ಅರ್ಧದಲ್ಲಿ ಮೊಟಕುಗೊಳಿಸಿ ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದರೂ ಸರಿಯಾದ ವೇದಿಕೆ ಸಿಗದೆ ದೂರ ಉಳಿಯುತ್ತಿದ್ದಾರೆ. ಅಂಥವರು ತೀರ್ಪುಗಾರರಾಗಿ ಮುಂದುವರಿಯಬೇಕು ಹಾಗೂ ಕೊಡಗಿನಲ್ಲಿ ಹೆಚ್ಚು ಹಾಕಿ ಕ್ರೀಡೆಯನ್ನು ಆಡುವುದರಿಂದ ಇಲ್ಲಿನ ಯುವ ಜನತೆ ತೀರ್ಪುಗಾರರಾದರೆ ಕೊಡವ ಕುಟುಂಬಗಳ ಹಾಕಿ ಪಂದ್ಯ ಹಾಗೂ ಇನ್ನಿತರ ಹಾಕಿ ಪಂದ್ಯಾವಳಿಗಳನ್ನು ನಡೆಸಲು ಸುಲಭವಾಗುತ್ತದೆ. ಈ ನಿಟ್ಟಿನಲ್ಲಿ ಈ ಕಾರ್ಯಾಗಾರವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ವಿರಾಜಪೇಟೆ ತಾಲೂಕು ಹಾಕಿ ಅಕಾಡೆಮಿ ಉಪಾಧ್ಯಕ್ಷ, ವಕೀಲ ಮಾದಂಡ ಪೂವಯ್ಯ, ಮಡಿಕೇರಿ ಹಾಕಿ ಅಕಾಡೆಮಿ ಉಪಾಧ್ಯಕ್ಷೆ ಬಡಕಡ ಡೀನಾ ಪೂವಯ್ಯ, ಕೊಡವ ಹಾಕಿ ಅಕಾಡೆಮಿ ಕಾರ್ಯದರ್ಶಿ ಮರ್ಚಂಡ ಗಣೇಶ್ ಪೊನ್ನಪ್ಪ, ಅಂತಾರಾಷ್ಟ್ರೀಯ ಹಾಕಿ ತೀರ್ಪುಗಾರ ಅಪ್ಪಚಟೋಲಂಡ ಅಯ್ಯಪ್ಪ, ಕಾವೇರಿ ಪದವಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ತಮ್ಮಯ್ಯ, ಕೊಡಗು ಹಾಕಿ ಅಕಾಡೆಮಿ ಸದಸ್ಯರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net