ಕ್ರೀಡಾಕೂಟಗಳಿಂದ ಬಾಂಧವ್ಯ ವೃದ್ಧಿ

4ss1mla mantargowda matu
Published on

ಶನಿವಾರಸಂತೆ: ಹಬ್ಬ ಆಚರಣೆ ಕಾರ್ಯಕ್ರಮಗಳಲ್ಲಿ ಕ್ರೀಡಾಕೂಟಗಳನ್ನು ಹಮ್ಮಿಕೊಳ್ಳುವುದರಿಂದ ಬಾಂಧವ್ಯ ವೃದ್ಧಿಯಾಗುತ್ತದೆ ಎಂದು ಮಡಿಕೇರಿ ಶಾಸಕ ಡಾ.ಮಂತರ್‌ಗೌಡ ಅಭಿಪ್ರಾಯಪಟ್ಟರು.


ಸಮೀಪದ ಆಲೂರು ಸಿದ್ದಾಪುರ ವಿಜಯ ಯುವಕ ಸಂಘದ ವತಿಯಿಂದ ಕೈಲ್ ಮುಹೂರ್ತ ಹಬ್ಬದ ಪ್ರಯುಕ್ತ ಹಮ್ಮಿಕೊಂಡಿದ್ದ 52ನೇ ವರ್ಷದ ಸಾರ್ವಜನಿಕರ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.


ಹಬ್ಬ ಆಚರಣೆಯಂತಹ ಕಾರ್ಯಕ್ರಮಗಳು ಮನರಂಜನೆಯ ಭಾಗಗಳಾಗಿದ್ದು, ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ಜನರಿಗೆ ಮನರಂಜನೆಯ ಜತೆಯಲ್ಲಿ ಭಾವೈಕ್ಯ ಬೆಳೆಯಲು ಸಹಕಾರಿಯಾಗುತ್ತದೆ ಎಂದರು.


ಸರ್ಕಾರ ಹಂತ ಹಂತವಾಗಿ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಉದ್ದೇಶಿಸಿದ್ದು ಈ ನಿಟ್ಟಿನಲ್ಲಿ ಆಲೂರು ಸಿದ್ದಾಪುರದಲ್ಲಿ ಬಾಕಿ ಕಾಮಗಾರಿ ಸೇರಿದಂತೆ ಬೇಡಿಕೆ ಇರುವ ಅಭಿವೃದ್ಧಿ ಕಾರ್ಯಗಳನ್ನು ಆದ್ಯತೆ ಮೇಲೆ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.


ರಾಜ್ಯ ಮಾಹಿತಿ ಆಯೋಗದ ನಿವೃತ್ತ ಆಯುಕ್ತ ಜೆ.ಎಸ್.ವಿರೂಪಾಕ್ಷಯ್ಯ ಮಾತನಾಡಿ, ಆಲೂರು ಸಿದ್ದಾಪುರದಲ್ಲಿ ಮಿನಿ ಕ್ರೀಡಾಂಗಣದ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಬೇಕು, ಸಾರ್ವಜನಿಕ ಸಮುದಾಯ ಭವನದ ನಿರ್ವಹಣೆಯನ್ನು ಸ್ಥಳೀಯ ವಿಜಯ ಯುವಕ ಸಂಘಕ್ಕೆ ಬಿಟ್ಟುಕೊಡಲು ಸಂಬಂಧಪಟ್ಟ ಇಲಾಖೆ ಕ್ರಮ ತೆಗೆದುಕೊಳ್ಳಬೇಕು, ಸ್ಥಳೀಯ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಖಾಲಿ ಬಿದ್ದಿರುವ 28 ಹುದ್ದೆಯನ್ನು ಕಾಯಂಗೊಳಿಸಲು ಸರ್ಕಾರ ಕ್ರಮ ತೆಗೆದುಕೊಳ್ಳಬೇಕು. ಗ್ರಾಮಕ್ಕೆ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಿಕೊಡುವಂತೆ ಶಾಸಕರಿಗೆ ಮನವಿ ಮಾಡಿದರು.
ಪ್ರೌಢಶಾಲಾ ಮುಖ್ಯ ಶಿಕ್ಷಕ ಸಿ.ಟಿ.ಸೋಮಶೇಖರ್ ಮಾತನಾಡಿದರು.


ವಿಜಯ ಯುವಕ ಸಂಘದ ವತಿಯಿಂದ ವಿವಿಧ ಕ್ಷೇತ್ರದ ಸಾಧಕ ನಿವೃತ್ತ ಶಿಕ್ಷಕರಾದ ರಮಾವತಿ, ರಾಗಿಣಿ, ರಾಜ್ಯ ರಸ್ತೆ ಸಾರಿಗೆ ಬಸ್ಸಿನ ನಿವೃತ್ತ ಚಾಲಕ ಕೋಳಿಬೈಲು ಭೀಮಯ್ಯ, ಸಹಕಾರ ಸಂಘಗಳ ಜಂಟಿ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ ಎಚ್.ಪಿ.ಕುಮಾರ್, ಸೋಮವಾರಪೇಟೆ ಸಿಕೆ ಅಕಾಡೆಮಿಯ ಮುಖ್ಯಸ್ಥ ನಂಗಾರು ಚಂದ್ರಕುಮಾರ್ ಅವರನ್ನು ಸನ್ಮಾನಿಸಲಾಯಿತು.


ವಿಜಯ ಯುವಕ ಸಂಘದ ಅಧ್ಯಕ್ಷ ರಕ್ಷಿತ್ ರಾಜಣ್ಣ ಅಧ್ಯಕ್ಷತೆ ವಹಿಸಿದರು.
ಪ್ರಮುಖರಾದ ಜಿ.ಎಂ.ಹೇಮಂತ್, ಕರುಂಬಯ್ಯ, ಪರ್ಲಕೋಟಿ ಸತೀಶ್, ಹೊಸೂರು ಶಿವಪ್ರಕಾಶ್, ಕುಯುಮುಡಿ ಜಯಕುಮಾರ್, ದಮಯಂತಿ, ವೀಣಾ, ರಾಧಮಣಿ, ದೇವಾಯುರ ಗಿರೀಶ್, ರಾಜು ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net