ಕ್ರೀಡಾಂಗಣಕ್ಕೆ ಶಾಸಕರ ಅನಿರೀಕ್ಷಿತ ಭೇಟಿ

IMG-20250824-WA0165
Published on

ಕೆ.ಆರ್.ಪೇಟೆ: ಪಟ್ಟಣದ ಡಾ.ಬಾಲಗಂಗಾಧರನಾಥ ಸ್ವಾಮೀಜಿ ಒಳಾಂಗಣ ಕ್ರೀಡಾಂಗಣಕ್ಕೆ ಶಾಸಕ ಎಚ್.ಟಿ.ಮಂಜು ಅನಿರೀಕ್ಷಿತ ಭೇಟಿ ನೀಡಿ ಅವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಸಿದರು.

ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಎಚ್.ಟಿ.ಮಂಜು ಕ್ರೀಡಾಂಗಣಕ್ಕೆ ಭೇಟಿ ನೀಡಿದಾಗ ಹಲವು ಸಮಸ್ಯೆಗಳಿರುವ ಬಗ್ಗೆ ಗಮನ ಸೆಳೆಯಲಾಯಿತು.

ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಪಟ್ಟಣದ ನಾಲ್ವಡಿ ಕೃಷ್ಣರಾಜ ಒಡೆಯರ್ ಕ್ರೀಡಾಂಗಣದ ಒಳಗೆ ಸುಮಾರು 14 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಬಿಜಿಎಸ್ ಒಳಾಂಗಣ ಕ್ರೀಡಾಂಗಣ ನಿರ್ಮಾಣವಾಗಿ ಜಿಲ್ಲಾ ಯುವಜನ ಸೇವಾ ಇಲಾಖೆ ಅಧೀನಕ್ಕೆ ಒಳಪಟ್ಟಿದರೂ ನಿರ್ವಹಣೆ ಕೊರತೆಯಿಂದ ನಲುಗುತ್ತಿದೆ.

ಕ್ರೀಡಾಂಗಣದಲ್ಲಿ ಸುಸಜ್ಜಿತ ಜಿಮ್, ಈಜುಕೋಳ, ಟೆನ್ನಿಸ್ ಕೋರ್ಟ್, ಟೇಬಲ್ ಟೆನ್ನಿಸ್ ಕೋರ್ಟ್ ಸೇರಿದಂತೆ ಹತ್ತು ಹಲವು ಒಳಾಂಗಣ ಕ್ರೀಡಾ ಸೌಲಭ್ಯಗಳಿದ್ದರೂ ಕ್ರೀಡಾಪಟುಗಳಿಗಾಗಿ ಶೌಚಗೃಹ ವ್ಯವಸ್ಥೆ ಸಮರ್ಪಕವಾಗಿಲ್ಲ. ಶೌಚಗೃಹ ನಿರ್ಮಾಣವಾದರು ಅದು ಸ್ಟೇಡಿಯಂ ಆರಂಭವಾದ ದಿನದಿಂದ ಹಿಡಿದು ಇಂದಿನವರೆಗೂ ಬಾಗಿಲು ತೆರೆದಿಲ್ಲ.

ಕ್ರೀಡಾಂಗಣದಲ್ಲಿ ಸಮರ್ಪಕ ನೀರು ಮತ್ತು ವಿದ್ಯುತ್ ಸಮಸ್ಯೆಯಿದೆ. ಕ್ರೀಡಾಂಗಣದ ಸುತ್ತ ಗಿಡಗಂಟಿಗಳು ಬೆಳೆದಿದ್ದರೂ ಯುವಜನ ಸೇವಾ ಇಲಾಖೆ ಅದನ್ನು ತೆಗೆಸಿ ಸ್ವಚ್ಛತೆ ಕಾಪಾಡುವತ್ತ ಕ್ರಮವಹಿಸಿಲ್ಲ. ಕ್ರೀಡಾಂಗಣದಲ್ಲಿ ಕಬಡ್ಡಿ ಮೈದಾನದ ಮ್ಯಾಟ್‌ಗಳು ಬಳಕೆಯಾಗದೆ ಧೂಳು ಹಿಡಿದು ಈಜುಕೊಳದ ಸುತ್ತ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.

ಈಜುಕೊಳದ ನೀರು ಕಾಲ ಕಾಲಕ್ಕೆ ಬದಲಾಯಿಸದೆ ಗಲೀಜಾಗಿದೆ. ನಿರ್ವಹಣೆ ಕೊರತೆಯಿಂದ ನಲುಗುತ್ತಿರುವ ಒಳಾಂಗಣ ಕ್ರೀಡಾಂಗಣಕ್ಕೆ ಕ್ರೀಡಾಪಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಅದರ ಉಪಯೋಗ ಪಡೆಯುತ್ತಿಲ್ಲ. ಲಕ್ಷಾಂತರ ರೂ. ವ್ಯಯಿಸಿ ರಾಜ್ಯ ಸರ್ಕಾರ ಸುಸಜ್ಜಿತ ಜಿಮ್ ಯಂತ್ರೋಪಕರಣಗಳನ್ನು ತಂದಿಟ್ಟಿದ್ದರೂ 6 ಜನ ಮಾತ್ರ ಇಲ್ಲಿ ಜಿಮ್ ಮಾಡುತ್ತಿರುವುದಾಗಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಎಚ್.ಟಿ.ಮಂಜು, ಒಳಾಂಗಣ ಕ್ರೀಡಾಂಗಣ ಅವ್ಯವಸ್ಥೆ ಬಗ್ಗೆ ನಾನು ಈಗಾಗಲೇ ವಿಧಾನ ಸಭೆಯಲ್ಲಿ ಮಾತನಾಡಿ ಸರ್ಕಾರದ ಗಮನ ಸೆಳೆದಿದ್ದೇನೆ. ದರಪಟ್ಟಿಗಿಂತ ಮೂರು ಪಟ್ಟು ಹೆಚ್ಚಿನ ಬೆಲೆಗೆ ಕ್ರೀಡಾ ಸಾಮಗ್ರಿಗಳ ಖರೀದಿ ಮಾಡಿದ್ದು, ಈ ಬಗ್ಗೆ ಇಲಾಖೆಗೆ ಸಲ್ಲಿಸಿದ್ದ ಪ್ರಸ್ತಾವನೆ ತಿರಸ್ಕೃತವಾಗಿದ್ದರೂ ಬಿಲ್ ಮಾಡಲಾಗಿದೆ. ಇದರ ಬಗ್ಗೆ ತನಿಖೆಯಾಗಬೇಕಾಗಿದೆ ಎಂದರು.

ಸುಮಾರು 8 ಲಕ್ಷ ರೂ.ವಿದ್ಯುತ್ ಬಿಲ್ ಬಾಕಿಯಿದ್ದು, ವಿದ್ಯುತ್ ಇಲಾಖೆ ಕ್ರೀಡಾಂಗಣದ ವಿದ್ಯುತ್ ಸಂಪರ್ಕ ಕಡಿತ ಮಾಡಿದೆ. ನಿರ್ವಹಣಾ ಏಜೆನ್ಸಿ ಬದಲಿಸುವ ಬಗ್ಗೆ ಮುಖ್ಯಮಂತ್ರಿ ಸದನದಲ್ಲಿ ತಿಳಿಸಿದ್ದು, ಅದರಂತೆ ಆಗಸ್ಟ್ 18ರಿಂದ ಕ್ರೀಡಾಂಗಣ ನಿರ್ವಹಣೆಯ ಏಜೆನ್ಸಿ ಬದಲಾಗಿದೆ ಎಂದರು.

ಕ್ರೀಡಾಂಗಣ ನಿರ್ವಹಣೆಗೆ ಅಗತ್ಯ ಹಣವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದ್ದು, ಕ್ರೀಡಾಪಟುಗಳು ಒಳಾಂಗಣ ಕ್ರೀಡಾಂಗಣದ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಕ್ರೀಡಾಪಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಆಗಮಿಸುವಂತಾಗಬೇಕು. ನೀರು ಮತ್ತು ವಿದ್ಯುತ್ ಕೊರತೆ ಸೇರಿದಂತೆ ಎಲ್ಲವನ್ನೂ ಸರಿಪಡಿಸಿ ಕ್ರೀಡಾಂಗಣವನ್ನು ಜನಸ್ನೇಹಿಯನ್ನಾಗಿ ಪರಿವರ್ತಿಸುವಂತೆ ನೂತನ ಏಜೆನ್ಸಿ ಯವರೊಂದಿಗೆ ಮಾತನಾಡುವುದಾಗಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net