

ಗುಂಡ್ಲುಪೇಟೆ: ಸ್ಥಳೀಯರ ವಿರೋಧದ ನಡುವೆಯೂ ಕ್ರಷರ್ ಆರಂಭಿಸುತ್ತಿರುವುದರಿಂದ ರೊಚ್ಚಿಗೆದ್ದ ತಾಲೂಕಿನ ಅಗತಗೌಡನಹಳ್ಳಿ ಗ್ರಾಮಸ್ಥರು ಸೋಮವಾರ ಸಂಜೆ ಕ್ರಷರ್ ಸ್ಥಳ ಪರಿಶೀಲನೆಗೆ ತೆರಳುತ್ತಿದ್ದ ತಹಸೀಲ್ದಾರ್ ಜೀಪಿಗೆ ಅಡ್ಡಲಾಗಿ ಕುಳಿತು ವಾಗ್ವಾದ ನಡೆಸಿದರು.
ಆಗತಗೌಡನಹಳ್ಳಿ ಸಮೀಪ ಕ್ರಷರ್ ಆರಂಭ ಮಾಡುವ ಬಗ್ಗೆ ಸ್ಥಳೀಯರು ವಿರೋಧ ಮಾಡುತ್ತಿದ್ದಾರೆ. ರೈತ ಸಂಘಟನೆಯ ಸಹಕಾರದಿಂದ ಪ್ರತಿಭಟನೆ ನಡೆಸಿ ಯಾವುದೇ ಕಾರಣಕ್ಕೂ ಕ್ರಷರ್ ಆರಂಭಿಸದಂತೆ ರೈತರು ಒತ್ತಾಯಿಸಿದ್ದರು.
ಆದರೆ ಜಿಲ್ಲಾಡಳಿತದ ಸೂಚನೆ ಮೇರೆಗೆ ಸೋಮವಾರ ತಹಸೀಲ್ದಾರ್ ಟಿ.ರಮೇಶ್‌ಬಾಬು, ಬೇಗೂರು ಉಪ ತಹಸೀಲ್ದಾರ್ ಪ್ರಕಾಶ್, ಗ್ರಾಮ ಆಡಳಿತಾಧಿಕಾರಿಗಳಾದ ಅಶೋಕ್ ವಾಲ್ಮೀಕಿ, ಜವರೇಗೌಡ, ಚಾಲಕ ಚೇತನ್ ಸೇರಿದಂತೆ ಕಂದಾಯಾಧಿಕಾರಿಗಳ ತಂಡ ಜೀಪಿನಲ್ಲಿ ಸ್ಥಳ ಪರಿಶೀಲನೆಗೆ ತೆರಳುತ್ತಿದ್ದರು.
ಈ ಬಗ್ಗೆ ವಿಷಯ ತಿಳಿದ ಗ್ರಾಮಸ್ಥರು ಜೀಪಿಗೆ ಅಡ್ಡಲಾಗಿ ಕುಳಿತು ಪ್ರಯಾಣಕ್ಕೆ ಅಡ್ಡಿಪಡಿಸಿದರು. ಈ ಬಗ್ಗೆ 2021ರಲ್ಲಿ ಅನುಮತಿ ನೀಡಲಾಗಿದ್ದು ಗೆಜೆಟ್ ನೋಟಿಫಿಕೇಷನ್ ಸಹ ಆಗಿದೆ ಎಂದು ಮನವರಿಕೆ ಮಾಡಿದರೂ ಒಪ್ಪದೆ ಗೋವಿಂದಯ್ಯ, ಜಗದೀಶ್, ಮೂರ್ತಿ, ಸ್ವಾಮಿ ಎಂಬುವರು ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ತಹಸೀಲ್ದಾರ್ ಟಿ.ರಮೇಶ್ ಬಾಬು ಬೇಗೂರು ಪೊಲೀಸರಿಗೆ ದೂರು ನೀಡಿದ್ದಾರೆ.