

ಬಾಗಲಕೋಟೆ: ವಿದ್ಯಾರ್ಥಿಗಳು ಕ್ರಮಬದ್ಧ ಹಾಗೂ ಶಿಸ್ತುಬದ್ಧ ಅಧ್ಯಯನವನ್ನು ಕೈಗೊಂಡಲ್ಲಿ ಅವರಿಗೆ ಪರೀಕ್ಷೆಯಲ್ಲಿ ಆತಂಕ ಕಾಡಲಾರದು ಎಂದು ಗೌರವ ಕಾರ್ಯದರ್ಶಿ ಡಾ.ಗಿರೀಶ ಮಸೂರಕರ ಅಭಿಪ್ರಾಯಪಟ್ಟರು.
ಇಲ್ಲಿನ ವಿದ್ಯಾ ಪ್ರಸಾರಕ ಮಂಡಳದ ಎಸ್.ಆರ್. ನರಸಾಪುರ ಕಲಾ ಹಾಗೂ ಎಂ.ಬಿ. ಶಿರೂರ ವಾಣಿಜ್ಯ ಮಹಾವಿದ್ಯಾಲಯವು ಪಿಯುಸಿ ಎರಡನೆಯ ವರ್ಷದ ವಿದ್ಯಾರ್ಥಿಗಳಿಗೆ ಸೋಮವಾರ ಹಮ್ಮಿಕೊಂಡಿದ್ದ ಪಿಯುಸಿ ಪರೀಕ್ಷೆ:ಒತ್ತಡ ನಿರ್ವಹಣಾ ಕೌಶಲ್ಯ ವಿಷಯ ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಅಧ್ಯಯನ ಮಾಡುವಲ್ಲಿ ಯಾವುದೇ ಉದಾಸೀನ ಭಾವವನ್ನು ತೋರಿಸದೇ ಸರಿಯಾದ ಸಮಯದಲ್ಲಿ ಯೋಜನಾಬದ್ಧ ಅಭ್ಯಾಸ ಮಾಡಬೇಕು. ವಿದ್ಯಾರ್ಥಿಗಳು ಪ್ರಯತ್ನಶೀಲರಾಗುವುದರ ಜೊತೆಗೆ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಬೇಕು ಎಂದರು.
ಒತ್ತಡ ನಿರ್ವಹಣೆ ಕುರಿತು ಮಾತನಾಡಿದ ಬಿವಿವಿಎಸ್ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕ ಡಾ.ಎಸ್.ಎಸ್.ಭೂಮಣ್ಣವರ, ಒತ್ತಡ ಒಂದು ಮಾನಸಿಕ ಕ್ರಿಯೆಯಾಗಿದ್ದು, ಸಮತೋಲನದ ವ್ಯಕ್ತಿತ್ವ ಮತ್ತು ನಿರಂತರ ಅಧ್ಯಯನದಿಂದ ಅದನ್ನು ನಿವಾರಿಸಬಹುದಾಗಿದೆ. ನಿರಾಸಕ್ತಿ,ಆಯಾಸ,ಉತ್ಸಾಹದ ಕೊರತೆ ಮುಂತಾದವುಗಳು ಒತ್ತಡದ ಪರಿಣಾಮಗಳಾಗಿದ್ದು ವಿದ್ಯಾರ್ಥಿಗಳು ಅವುಗಳ ಬಗ್ಗೆ ಜಾಗೃತಿವಹಿಸಬೇಕು ಎಂದರು.
ಸಮಯ ನಿರ್ವಹಣೆ ಕುರಿತು ವಿವೇಕಾನಂದ ಶಾಲೆಯ ಶಿಕ್ಷಕ ಮೋಹನ ದೇಶಪಾಂಡೆ ಮಾತನಾಡಿ, ಅಧ್ಯಯನದಲ್ಲಿ ಸಮಯವು ಪ್ರಮುಖ ಪಾತ್ರ ವಹಿಸುತ್ತದೆ. ಪರೀಕ್ಷೆಯಲ್ಲಿ ಉತ್ತರಗಳನ್ನು ಬರೆಯುವಾಗ ಸಮಯವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು. ವಿದ್ಯಾರ್ಥಿಗಳಲ್ಲಿ ಇಚ್ಛಾಶಕ್ತಿ ಇದ್ದಲ್ಲಿ ಪರೀಕ್ಷೆಯ ಹಲವು ಸವಾಲುಗಳನ್ನು ಎದುರಿಸಬಹುದು ಎಂದು ತಿಳಿಸಿದರು.
ಹಳೆಯ ವಿದ್ಯಾರ್ಥಿ ಹಾಗೂ ಸಕ್ರಿ ಕಾಲೇಜಿನ ಪ್ರಾಚಾರ್ಯ ಅಶೋಕ ಕಂದಗಲ್ ಮಾತನಾಡಿ, ಈ ಸಂಸ್ಥೆ ತಮಗೆ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ಹಾಗೂ ಬದುಕು ಕಟ್ಟಿಕೊಳ್ಳಲು ಅವಕಾಶ ನೀಡಿದೆ ಎಂದರು.
ಪ್ರಾಚಾರ್ಯ ಶ್ರೀನಿವಾಸ ನರಗುಂದ ಮಾತನಾಡಿ, ಪ್ರಾಮಾಣಿಕ ಪ್ರಯತ್ನ, ಪರಿಶ್ರಮ ಇದ್ದಲ್ಲಿ ಶೈಕ್ಷಣಿಕ ಹಾಗೂ ಜೀವನದ ಪರೀಕ್ಷೆ ಎರಡರಲ್ಲೂ ಯಶ ಸಾಽಸಬಹುದು. ವ್ಯಕ್ತಿತ್ವ ವಿಕಾಸಕ್ಕೆ ಪೂರಕವಾಗಬಲ್ಲ ಚಟುವಟಿಕೆಗಳನ್ನು ಆಯೋಜಿಸಲಾಗುತ್ತಿದ್ದು ವಿದ್ಯಾರ್ಥಿಗಳು ಅವುಗಳ ಲಾಭವನ್ನು ಪಡೆಯಬೇಕು ಎಂದು ಹೇಳಿದರು.
ಕಾಲೇಜು ಉಪವಿಭಾಗದ ಅಧ್ಯಕ್ಷ ಡಾ.ಪಿ.ಆರ್.ಜೋಶಿ ಅಧ್ಯಕ್ಷತೆ ವಹಿಸಿದ್ದರು. ಜಂಟಿ ಕಾರ್ಯದರ್ಶಿ ಡಾ.ಎಸ್.ಬಿ.ಪರ್ವತೀಕರ,ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ಪಾಲ್ಗೊಂಡರು. ದಿವ್ಯಶ್ರೀ ಬಿಲ್ಲಾರ ಪ್ರಾರ್ಥಿಸಿದರು. ಶ್ರವಣಾ ಸಿದ್ನಾಳ ವಂದಿಸಿದರು. ಎಸ್.ಎಂ.ಜೇವೂರ ನಿರೂಪಿಸಿದರು.