

ಬೆಟ್ಟದಪುರ: ಬೆಟ್ಟದಪುರ ಸಮೀಪದ ಅತ್ತಿಗೋಡು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಸಂಗರಶೆಟ್ಟಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಶನಿವಾರ ವಿಶ್ವ ತಂಬಾಕು ನಿಷೇಧ ದಿನವನ್ನು ಆಚರಿಸಲಾಯಿತು.
ಆರೋಗ್ಯ ಕೇಂದ್ರದ ಆರೋಗ್ಯ ಸುರಕ್ಷತಾಧಿಕಾರಿ ಬಿ.ಎಲ್.ಉಷಾ ಮಾತನಾಡಿ, ತಂಬಾಕು ಉತ್ಪನಗಳ ಸೇವನೆಯಿಂದಾಗಿ ಇತ್ತೀಚೆಗೆ ಮಹಿಳೆಯರಲ್ಲಿ ಕ್ಯಾನ್ಸರ್ ಹೆಚ್ಚುತ್ತಿದೆ. ಇದನ್ನು ತಪ್ಪಿಸಲು ಎಲ್ಲ ರೀತಿಯ ಜಾಗೃತಿ ಮೂಡಿಸಲಾಗುತ್ತಿದೆ. ತಂಬಾಕು ಉತ್ಪನ್ನಗಳ ಸೇವನೆಯಿಂದ ಬಾಯಿ ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗುತ್ತಿವೆ. ಚಿಕ್ಕವಯಸ್ಸಿನ ವಿದ್ಯಾರ್ಥಿಗಳು ಸಹ ಕ್ಯಾನ್ಸರ್‌ಗೆ ತುತ್ತಾಗುತ್ತಿರುವುದು ಆತಂಕದ ಸಂಗತಿಯಾಗಿದೆ. ತಂಬಾಕು ಉತ್ಪನ್ನ ಕಂಪನಿಗಳು ಬೆರೆಸುವ ರಾಸಾಯನಿಕಗಳ ಪರಿಣಾಮವಾಗಿ ತಂಬಾಕು ಸೇವನೆ ವ್ಯಸನವಾಗಿ ಪರಿಣಮಿಸುತ್ತಿದೆ. ಹಾಗಾಗಿ ತಂಬಾಕು ಉತ್ಪನಗಳನ್ನು ಬಳಸದೆ ದೂರವಿರಬೇಕು ಎಂದು ಸಲಹೆ ನೀಡಿದರು.
ಶಿಕ್ಷಕರಾದ ದೇವರಾಜು, ಎಂ.ಜೆ.ರಜನಿಕಾಂತ್, ಎಚ್.ಎನ್.ಸ್ವಾಮಿ, ಸಿ.ಎಚ್.ಮದನಾಯಕ್, ಆರೋಗ್ಯ ಸುರಕ್ಷಾಧಿಕಾರಿ ಸುಚಿತ್ರಾ, ಆಶಾ ಕಾರ್ಯಕರ್ತೆ ಶೀಲಾ, ವಿದ್ಯಾರ್ಥಿಗಳು ಇದ್ದರು.