

ಬಾಗಲಕೋಟೆ: ಕಲಿತ ವಿದ್ಯೆಗೆ ಸರ್ಕಾರಿ ಹುದ್ದೆಗಳಿಗೆ ನೇಮಕವಾಗದೇ ವಿದ್ಯಾರ್ಹತೆಗೆ ತಕ್ಕಂತ ಸೂಕ್ತ ಕೌಶಲ ತರಬೇತಿಯನ್ನು ಪಡೆದು ಉದ್ಯೋಗಾವಕಾಶವನ್ನು ಪಡೆದುಕೊಂಡು ಆರ್ಥಿಕ ಮಟ್ಟ ಸುಧಾರಿಸಲು ಮತ್ತು ಜೀವನೋಪಾಯ ಹೊಂದಲು ಸಾಧ್ಯ ಎಂದು ಶಾಸಕ ವೀರಣ್ಣ ಚರಂತಿಮಠ ಹೇಳಿದರು.
ನವನಗರದ ಡಾ.ಬಾಬು ಜಗಜೀವನರಾಮ ಭವನದಲ್ಲಿ ಗುರುವಾರ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ಕೌಶಲ್ಯಾಭಿವೃದ್ದಿ ನಿಗಮ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಕೌಶಲ್ಯ ಮಿಷನ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಉದ್ಯೋಗ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜೀವನದಲ್ಲಿ ಸರಿಯಾದ ರೀತಿಯಲ್ಲಿ ಬದುಕಬೇಕಾದರೆ, ನಮಗೆ ಬೇಕಾದುದನ್ನು ಪಡೆಯಬೇಕಾದರೆ ಕೌಶಲ ಬಹಳ ಮುಖ್ಯವಾಗಿದೆ ಎಂದರು.
ದೇಶದ ಪ್ರಧಾನಮಂತ್ರಿಗಳು ಕೌಶಲಕ್ಕೆ ಹೆಚ್ಚು ಒತ್ತು ಕೊಡುತ್ತಿದ್ದಾರೆ. ಕೌಶಲಕ್ಕಾಗಿ ಹೊಸದಾಗಿ ಇಲಾಖೆ ಸೃಷ್ಟಿ ಮಾಡಿ, ಅದಕ್ಕಾಗಿ ಮಂತ್ರಿಗಳು, ಅಽಕಾರಿ ವರ್ಗದವರ ಇಡುವ ಮೂಲಕ ಉದ್ಯೋಗ ಸೃಷ್ಟಿಸುವ ಕಾರ್ಯವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಾಡುತ್ತಿವೆ. ಇಂದು ಕುಂಬಾರಿಕೆ, ಕಮ್ಮಾರಿಕೆ ಕೆಲಸ ಕಡಿಮೆಯಾಗಿದೆ. ಕಟ್ಟಡ ನಿರ್ಮಾಣದಲ್ಲಿ ಕಾರ್ಮಿಕರ ಕೊರತೆ, ಪ್ಲಬ್ಬಿಂಗ್ ಕಾರ್ಯದಲ್ಲಿ ಕೊರತೆ ಕಾಣುತ್ತಿದ್ದೇವೆ. ಆರೋಗ್ಯ ಇಲಾಖೆಯಲ್ಲಿ ಲ್ಯಾಬ್ ಅಸಿಸ್ಟಂಟ್‌ಗಳ ಕೊರತೆ ನೋಡುತ್ತಿದ್ದೇವೆ. ಹೀಗಾಗಿ ಕೌಶಲ ಬಹಳ ಮುಖ್ಯ ಎಂದು ಹೇಳಿದರು.
ಉದ್ಯೋಗ ಮೇಳಕ್ಕೆ ಆಗಮಿಸಿದ ಪ್ರೊಬೇಷನರಿ ಐ.ಎ.ಎಸ್ ಅಧಿಕಾರಿ ಕನಿಷ್ಕ ಅವರು ಮೇಳದಲ್ಲಿ ಭಾಗವಹಿಸಿದ ಉದ್ಯಿಮೆದಾರರ ಮಾಹಿತಿ ಪಡೆದುಕೊಂಡು ಉದ್ಯೋಗ ಮೇಳದ ಆಯೋಜನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯ ರವಿ ಧಾಮಜಿ, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ವಿ.ಎಸ್.ಹಿರೇಮಠ ಸೇರಿದಂತೆ, ಸರ್ಕಾರಿ ಕೈಗಾರಿಕೆ ತರಬೇತಿ ಕೇಂದ್ರದ ಶಿವಲೀಲಾ ಶೆಟ್ಟರ, ಕುಬೇರಪ್ಪ ಕಲಗತ್ತಿ, ಚಂದ್ರಪ್ಪ ಹೊಸಮನಿ, ಎನ್.ಎಸ್.ಮರಗುಡಿ ಹಾಗೂ ಇತರರು ಉಪಸ್ಥಿತರಿದ್ದರು.