

ಬಾಗಲಕೋಟೆ: ಕೌಟುಂಬಿಕ ಹಿಂಸೆಯನ್ನು ತಡೆಗಟ್ಟುವಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಅಧಿಕಾರಿಗಳು ಕಾಯ್ದೆಯನ್ನು ಅಚ್ಚುಕಟ್ಟಾಗಿ ಜವಾಬ್ದಾರಿಯಿಂದ ನ್ಯಾಯಯುತವಾಗಿ ನಿರ್ವಹಿಸುವುದು ಬಹಳಷ್ಟು ಅಗತ್ಯ ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಹೇಳಿದರು.
ನವನಗರದ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಸ್ಥೆಯ ಗ್ರಾಮೀಣ ಪ್ರತಿಷ್ಠಾನದ ಸಭಾಭವನದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆ-2005 ಅನುಷ್ಠಾನದಲ್ಲಿ ಭಾಗೀದಾರರ ಇಲಾಖೆಗಳ ಪಾತ್ರ ಕುರಿತ ಎರಡು ದಿನಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೌಟುಂಬಿಕ ಕಲಹಗಳು, ಗಂಡ ಹೆಂಡತಿ ಜಗಳ, ಅತ್ತೆ ನಾದಿನಿ ಮಾವ ಇವರುಗಳ ಜಗಳಗಳು ನಮ್ಮ ಸಂಪ್ರದಾಯದ ಕೌಟುಂಬಿಕ ವ್ಯವಸ್ಥೆಯಲ್ಲಿ ಮನೆಯೊಳಗೆ ಬಗೆಹರಿಯಬೇಕು. ಆದರೆ ಪೆÇಲೀಸ್ ಠಾಣೆ ನ್ಯಾಯಾಲಯ ಇಂತಹ ಕಡೆ ಹೋಗಬಾರದೆಂಬುದು ನಮ್ಮ ಪೂರ್ವಜರು ಕಲ್ಪನೆಯಾಗಿತ್ತು. ಕಲ್ಯಾಣ ರಾಜ್ಯದಲ್ಲಿ ಈ ಪರಿಕಲ್ಪನೆ ಬದಲಾಗಿದೆ. ಅನ್ಯಾಯ ಅನುಭವಿಸುವರು ಕೂಡ ಒಂದು ಅಪರಾಧವಾಗಿದೆ. ಈ ಕಾಯ್ದೆ ಅಡಿ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಕಾನೂನು ಸಂರಕ್ಷಣೆ ದೊರೆಯಲಿದೆ ಎಂದರು.
ಮುಂಬರುವ ಪೀಳಿಗೆಗೆ ಇಂತಹ ಕಾಯ್ದೆಗಳ ಮಾಹಿತಿ ಅತ್ಯಾವಶ್ಯಕ ನೀವು ಇದನ್ನ ತಿಳಿಯುವುದರ ಜೊತೆಗೆ ಸಮೂಹಕ್ಕೆ ಸಮುದಾಯಕ್ಕೆ ಈ ಕುರಿತಾದ ಮಾಹಿತಿಯನ್ನ ರವಾನಿಸುವುದು ಅತ್ಯವಶ್ಯಕ. ಕುಟುಂಬ ಸಮಾಜದ ಒಂದು ಮೂಲ ಸಂಸ್ಥೆ ಇದರಲ್ಲಾಗುವ ಬದಲಾವಣೆಗಳು, ಏರಿಳಿತಗಳು ನೇರವಾಗಿ ಸಮಾಜಕ್ಕೆ ಪರಿಣಾಮ ಬೀರುತ್ತದೆ. ಆದ್ದರಿಂದ ಕುಟುಂಬದಲ್ಲಿ ತಾಳ್ಮೆ ಸಹನೆ ಸಹಬಾಳ್ವೆ ಪರಸ್ಪರ ಗೌರವಿಸೋಕೆ ಇವುಗಳು ಒಡಮೂಡಿದಾಗ ಮಾತ್ರ ಶಾಂತಿಯುತ ಜೀವನ ನಡೆಸಲು ಸಾಧ್ಯವೆಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ದಿವಾಣಿ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಚಂದ್ರಶೇಖರ್ ದಿಡ್ಡಿ ಮಾತನಾಡಿ ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆ 2005 ಕಾಯ್ದೆಯ ಅಡಿಯಲ್ಲಿ ಒಬ್ಬ ಹಿಂಸೆಕ್ಕೊಳಗಾದ ಮಹಿಳೆಗೆ ವಾಸದ ಆದೇಶವನ್ನು ದೊರಕಿಸಿಕೊಡಲು ಸಾಧ್ಯ ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆ ಸಿವಿಲ್ ಹಾಗೂ ಕ್ರಿಮಿನಲ್ ಎರಡೂ ಕಾಯ್ದೆಗಳಿಗೆ ಒಳಪಟ್ಟಂತೆ ಕಾರ್ಯನಿರ್ವಹಿಸುವ ಅತ್ಯಂತ ಪರಿಣಾಮಕಾರಿಯಾದ ಕಾಯ್ದೆ ಎಂದರೆ ತಪ್ಪಾಗಲಾರದು ಎಂದರು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪ್ರಭಾಕರ ಕೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಅಧಿಕಾರಿ ಸುಮಂಗಲ ಹಿರೇಮನಿ ಸೇರಿದಂತೆ ಇತರರು ಉಪಸ್ಥಿತರಿದ್ದರು.