

ಕೋಲಾರ: ನಿರ್ವಹಣೆ ಕೊರತೆಯಿಂದ ನಗರದಲ್ಲಿನ ಬೀದಿ ದೀಪಗಳು ಬೆಳಗದ ಸ್ಥಿತಿಯಲ್ಲಿದ್ದು, ನಿತ್ಯ ರಾತ್ರಿ ನಗರದ ವಿವಿಧ ಬಡಾವಣೆಗಳು, ಪ್ರಮುಖ ರಸ್ತೆಗಳು ಕತ್ತಲಲ್ಲಿ ಮುಳುಗಿವೆ.
ನಗರದಲ್ಲಿ ಬೀದಿದೀಪ ಅಳವಡಿಕೆಯ ಟೆಂಡರ್ ಪಡೆದಿರುವ ಮುಂಬೈನ (ಇ-ಸ್ಮಾರ್ಟ್ ಎನಾರ್ಜಿ ಸಲ್ಯೂಷನ್) ಖಾಸಗಿ ಕಂಪನಿ ಸ್ಥಳೀಯವಾಗಿ ಉಪ ಗುತ್ತಿಗೆ ನೀಡಿದ್ದು, ಅವರು ಕಳಪೆ ಎಲ್‌ಇಡಿ ಅಳವಡಿಸಿದ್ದರಿಂದ ಸಾರ್ವಜನಿಕರು ಕತ್ತಲಿನಲ್ಲಿ ಕಾಲಕಳೆಯುವಂತಾಗಿದೆ ಎಂಬ ಆರೋಪ ಕೇಳಿಬಂದಿದೆ.
ಗುತ್ತಿಗೆದಾರ ಬಹುತೇಕ ಕಡೆ ಹೊಸದಾಗಿ ಎಲ್‌ಇಡಿ ಬಲ್ಬ್ ಹಾಕಿದ್ದರೆ, ಇನ್ನು ಕೆಲವೆಡೆ ಕೆಟ್ಟು ಹೋಗಿದ್ದ ಬೀದಿದೀಪಗಳನ್ನು ಸರಿಪಡಿಸಿದ್ದಾರೆ. ಆದರೆ, ನಗರದೊಳಗೆ ಬೀದಿದೀಪಗಳ ಸಂಪರ್ಕ ಜಾಲ ದಶಕಗಳಷ್ಟು ಹಳೆಯದಾಗಿದ್ದು, ಈ ಹಿಂದೆ ಅಳವಡಿಸಿರುವ ಬೀದಿದೀಪಗಳಿಗೆ ಯಾವ ಮೂಲದಿಂದ ವಿದ್ಯುತ್ ಸಂಪರ್ಕ ಪಡೆಯಲಾಗಿದೆ, ಅದು ಎಲ್ಲಿ ಅಂತಿಮಗೊಳ್ಳುತ್ತದೆ ಎಂಬ ವಾಹಿತಿ ಗುತ್ತಿಗೆದಾರರಿಗೆ ತಿಳಿಯದಂತಾಗಿದೆ. ಅಡ್ಡಾದಿಡ್ಡಿ ವಿದ್ಯುತ್ ಸಂಪರ್ಕ ಕಲ್ಪಿಸುತ್ತಿರುವುದರಿಂದ ಬೀದಿದೀಪ ಹೆಚ್ಚುಕಾಲ ಬಾಳಿಕೆ ಬರುತ್ತಿಲ್ಲ ಎನ್ನಲಾಗಿದೆ.
ಕೆಲವೊಂದು ಬೀದಿದೀಪಗಳ ಸಂಪರ್ಕ ಜಾಲ ಸರಿಪಡಿಸಲಾಗದಷ್ಟು ಹದಗೆಟ್ಟಿವೆ. ಸಂಪರ್ಕ ಜಾಲದಲ್ಲಿರುವ ಕೇಬಲ್‌ಗಳೆಲ್ಲ ಸತ್ವ ಕಳೆದುಕೊಂಡಿವೆ. ಈ ಅವ್ಯವಸ್ಥೆ ನಡುವೆ ಗುತ್ತಿಗೆದಾರರು ಬೀದಿದೀಪಗಳನ್ನು ಸಮರ್ಪಕವಾಗಿ ನಿರ್ವಹಣೆ ವಾಡಲು ಸಾಧ್ಯವಾಗುತ್ತಿಲ್ಲ. ಪರಿಣಾಮ ಬೀದಿದೀಪಗಳು ನಗರವನ್ನು ಅರ್ಧವೂ ಬೆಳಗದ ಸ್ಥಿತಿ ತಲುಪಿವೆ.
ನಗರದಲ್ಲಿರುವ ಒಟ್ಟು ದೀಪಗಳಲ್ಲಿ ಎಷ್ಟು ಬೆಳೆಗುತ್ತಿವೆ, ಎಷ್ಟು ಹಾಳಾಗಿವೆ ಎಂಬುದು ಲೆಕ್ಕಕ್ಕೆ ಸಿಗದಂತಾಗಿದೆ. ಗುತ್ತಿಗೆದಾರರು ಇಷ್ಟ ಬಂದಹಾಗೆ ವಿದ್ಯುತ್ ದೀಪ ಅಳವಡಿಸುತ್ತಿದ್ದಾರೆ. ಕೆಲವೆಡೆ ಒಂದೇ ಕಂಬಕ್ಕೆ ಎರಡು ದೀಪ ಅಳವಡಿಸಲಾಗಿದೆ.
ಗಾಳಿ, ಮಳೆಯಾದಾಗಲೆಲ್ಲ ಬಲ್ಬ್ ಒಡೆದು ಹೋಗುತ್ತಿವೆ. ಹಲವು ದೀಪಗಳು ಸಂಪರ್ಕ ಕಳೆದುಕೊಳ್ಳುತ್ತಿವೆ. ವಿದ್ಯುತ್ ಹರಿವಿನಲ್ಲಿ ವ್ಯತ್ಯಾಸಗಳಾದ ಸಂದರ್ಭದಲ್ಲಿ ದೀಪಗಳು ಸುಟ್ಟುಹೋಗುವುದು ಸಾವಾನ್ಯವಾಗಿದೆ.
ಇನ್ನು ಬಡಾವಣೆಗಳಲ್ಲಿನ ಕಂಬಗಳಲ್ಲಿನ ವಿದ್ಯುತ್ ದೀಪಕ್ಕೆ ತಂತಿಗಳ ಮೂಲಕ ವಿದ್ಯುತ್ ಸಂಪರ್ಕ ನೀಡಿದ್ದು, ಮಳೆ ಬಂದರೆ ಶಾರ್ಟ್‌ಸರ್ಕ್ಯೂಟ್‌ನಿಂದ ಇಡೀ ಬಡಾವಣೆಯಲ್ಲಿ ಕತ್ತಲು ಆವರಿಸುತ್ತದೆ. ಬೆಳಗ್ಗೆ-ಸಂಜೆ ಬೀದಿದೀಪಗಳನ್ನು ಆನ್-ಆ್ ಮಾಡಲು ಸ್ವೀಚ್ ವ್ಯವಸ್ಥೆ ಮಾಡದೆ ಇರುವುದು ದೀಪಗಳು ಬೇಗ ಹಾಳಾಗಲು ಕಾರಣವಾಗಿದೆ.
ಹಗಲು-ರಾತ್ರಿ ಬೆಳಗುವ ದೀಪಗಳು
ನಗರದಲ್ಲಿ ಒಟ್ಟು 9,568 ಕಂಬಗಳಲ್ಲಿ ದೀಪಗಳನ್ನು ಅಳವಡಿಸಲಾಗಿದ್ದು, 5,203 ಕಡೆ ಸಾಮಾನ್ಯ ವಿದ್ಯುತ್ ದೀಪಗಳು, 1745 ಎಲ್‌ಇಡಿ ದೀಪ ಅಳವಡಿಸಿದ್ದು, 2,620 ಕಂಬಗಳು ಬಾಕಿ ಇದೆ. ಈಗಾಗಲೇ ಅಳವಡಿಸಿರುವ ವಿದ್ಯುತ್ ದೀಪಗಳ ಸಮರ್ಪಕ ನಿರ್ವಹಣೆ ಕೊರತೆಯಿಂದ ಹಗಲು-ರಾತ್ರಿ ಸಹ ಬೆಳಗುತ್ತಲ್ಲೇ ಇರುತ್ತವೆ. ಹಳೇ ಬಸ್ ನಿಲ್ದಾಣ, ಬಂಗಾರಪೇಟೆ ರಸ್ತೆ, ಅಂತರಗಂಗೆ ರಸ್ತೆ, ಡೂಂ ಲೈಟ್ ವೃತ್ತದಲ್ಲಿನ ಕಂಬಗಳಲ್ಲಿ ಗುಣಮಟ್ಟವಿಲ್ಲದ ದೀಪ ಅಳವಡಿಸಲಾಗಿದ್ದು, ಕಂಬದ ಬುಡಕ್ಕೆ ಮಾತ್ರ ಬೆಳಕು ಸೀಮಿತವಾಗಿದೆ.
ಕತ್ತಲು ಆವರಿಸಿರುವ ಪ್ರದೇಶಗಳು
ಹಳೇ ಬಸ್ ನಿಲ್ದಾಣದಿಂದ ಬಂಗಾರಪೇಟೆ ರಸ್ತೆ, ಅಂತರಗಂತೆ ರಸ್ತೆ, ಕ್ಲಾಕ್ ಟವರ್‌ನಿಂದ ಎಪಿಎಂಸಿ, ಡೂಂ ಲೈಟ್‌ನಿಂದ ಬಂಗಾರಪೇಟೆ ವೃತ್ತ, ಎಂ.ಬಿ.ರಸ್ತೆ, ಕಾರಂಜಿಕಟ್ಟೆ ರಸ್ತೆ, ಪಿಸಿ ಬಡಾವಣೆ, ಜಯನಗರ, ಕ್ಲಾಕ್ ಟವರ್‌ಯಿಂದ ಎಪಿಎಂಸಿ ತನಕ, ಶಾಹಿನ್‌ಷಾ ನಗರ, ರಮಹತ್ ನಗರ, ಚಿಕ್ಕಬಳ್ಳಾಪುರ ರಸ್ತೆ, ಗಾಂಧಿನಗರ, ಬೈರೇಗೌಡ ನಗರ ಸೇರಿ ಹಲವು ಬಡಾವಣೆ, ಮುಖ್ಯರಸ್ತೆಗಳಲ್ಲಿ ರಾತ್ರಿ ವೇಳೆ ಕತ್ತಲು ಆವರಿಸಿರುತ್ತದೆ.
ಬೀದಿದೀಪ ನಿರ್ವಹಣೆ ವಾಡುವ ಟೆಂಡರ್‌ದಾರರಿಗೆ ವಾರ್ಷಿಕ 90 ಲಕ್ಷ ರೂ.ಗೆ ಟೆಂಡರ್ ನೀಡಲಾಗಿದೆ. ನಿರ್ವಹಣೆ ಹೊಣೆ ಹೊತ್ತ ಗುತ್ತಿಗೆದಾರರು ವಿದ್ಯುತ್ ದೀಪ ಕೆಟ್ಟುಹೋದ ಸಮಯದಲ್ಲಿ ಗುಣಮಟ್ಟವಿಲ್ಲದ ದೀಪಗಳನ್ನು ಅಳವಡಿಸುತ್ತಿರುವುದೇ ಅವ್ಯವಸ್ಥೆಗೆ ಕಾರಣವಾಗಿದೆ. ದುರಸ್ತಿ ನೆಪದಲ್ಲಿ ಕೋಟ್ಯಂತರ ರೂ. ಲೂಟಿ ಹೊಡೆಯಲಾಗುತ್ತಿದೆ ಎಂದು ಕೆಲ ನಗರಸಭೆ ಸದಸ್ಯರು ಆರೋಪಿಸಿದ್ದಾರೆ.
ಬೀದಿದೀಪಗಳ ನಿರ್ವಹಣೆಗಾಗಿ ಗುತ್ತಿಗೆದಾರನಿಗೆ ಕೋಟ್ಯಂತರ ರೂ.ಗಳನ್ನು ನಗರಸಭೆಯಿಂದ ಪಾವತಿ ಮಾಡಲಾಗುತ್ತಿದೆ. ಅಧಿಕಾರಿಗಳು ಕೆಲಸ ಆಗಿದಿಯೇ, ಇಲ್ಲವೇ ಎಂಬುದನ್ನು ಪರಿಶೀಲಿಸದೆ ಬಿಲ್ ಬಿಡುಗಡೆ ಮಾಡುತ್ತಿರುವುದು ಅವ್ಯವಸ್ಥೆಗೆ ಕಾರಣವಾಗಿದೆ.
ರಾಕೇಶ್, ನಗರಸಭೆ ಸದಸ್ಯ, ಕೋಲಾರ.