

ಕಲಬುರಗಿ: ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ಪತ್ತಿನ ಸಹಕಾರ ಸಂಘದ ಹಿಂದಿನ ಅಧ್ಯಕ್ಷ ಪ್ರಸ್ತುತ ಆಡಳಿತ ಮಂಡಳಿ ನಿರ್ದೇಶಕ ಸಿದ್ದಣ್ಣ ಸಿಕೇದ್ ಸಂಘದಲ್ಲಿ ಕೋಟ್ಯಂತರ ರೂ. ಅಕ್ರಮ ಮಾಡಿ, ಪರಾರಿಯಾಗಿದ್ದಾರೆ ಎಂದು ಸಂಘದ ನಿರ್ದೇಶಕ ದೇವರಾಜ ಎಸ್ ಚಾರ್ ಆರೋಪಿಸಿದರು.
೨೦೧೯ರಿಂದ ೨೦೨೪ರ ಆಗಸ್ಟ್ವರೆಗೆ ಅಧ್ಯಕ್ಷನಾಗಿದ್ದು, ಆಡಳಿತ ಮಂಡಳಿಯ ನಿರ್ದೇಶಕರ ಗಮನಕ್ಕೆ ತರದೇ, ಜಂಟಿ ಖಾತೆ ಇದ್ದರೂ ಕಾರ್ಯದರ್ಶಿಯನ್ನು ಹೆದರಿಸಿ ಸಹಿ ಮಾಡಿಸಿಕೊಂಡು ಸುಮಾರು ಮೂರು ಕೋಟಿ ರೂ. ಅವ್ಯವಹಾರ ಎಸಗಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಹೊಸ ಆಡಳಿತ ಮಂಡಳಿ ಬಂದ ನಂತರ ಲೆಕ್ಕಪತ್ರವನ್ನು ಗಮನಿಸಿದಾಗ ಅವ್ಯವಹಾರ ನಡೆದಿರುವುದು ಗಮನಕ್ಕೆ ಬಂದಿದೆ. ಈ ಕುರಿತು ಪರಿಶೀಲಿಸಿದಾಗ ೨೦೨೪ರ ಏಪ್ರಿಲ್ ೪ರಿಂದ ಸೆಪ್ಟೆಂಬರ್ ೨ರವರೆಗೆ ೪೧ ಲಕ್ಷ ರೂ. ವಿಥಡ್ರಾ ಮಾಡಿದ್ದಾರೆ. ಯಾವ ಕಾರಣಕ್ಕೆ ಮಾಡಿದ್ದಾರೆ ಎಂಬುದು ಉಲ್ಲೇಖಿಸಿಲ್ಲ. ಕೇವಲ ಆರು ತಿಂಗಳಲ್ಲಿ ೪೧ ಲಕ್ಷ ರೂ. ಅಕ್ರಮ ಎಸಗಿದ್ದು, ಹಿಂದಿನ ಅವಧಿಯಲ್ಲಿ ಮಾಡಿದ್ದ ಅಕ್ರಮದ ಕುರಿತು ತನಿಖೆಗೆ ಸಹಕಾರ ಇಲಾಖೆಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ಹೊಸ ಆಡಳಿತ ಮಂಡಳಿ ಬಂದ ನಂತರ ಸಂಘದ ಮಾಸಿಕ ಸಭೆಯಲ್ಲಿ ಚರ್ಚಿಸಿದಾಗ ಅಕ್ರಮವಾಗಿರುವ ಹಣ ವಾಪಸ್ ನೀಡುತ್ತೇನೆ ಎಂದು ಹಿಂದಿನ ಅಧ್ಯಕ್ಷ ಸಿದ್ದಣ್ಣ ಸಿಕೇದ್ ಹೇಳಿದ್ದ. ಅದರಂತೆ ಐದು ಲಕ್ಷ ರೂ. ಭರಿಸಿದ್ದ. ಆದರೆ ನಂತರ ಎರಡನೇ ಮಾಸಿಕ ಸಭೆಯಲ್ಲಿ ಭಾಗವಹಿಸಿಲ್ಲ. ಅಲ್ಲದೆ ಕೋಟ್ಯಂತರ ರೂ. ಇದ್ದು, ಭರಿಸುವ ಸಾಧ್ಯತೆ ಕಡಿಮೆ ಇದ್ದರಿಂದ ಸಹಕಾರ ಇಲಾಖೆಗೆ ತನಿಖೆಗೆ ಮನವಿ ಮಾಡಿದ್ದು, ಇಲಾಖೆಯೂ ಉಪ ನಿಬಂಧಕ ಕಿಶೋರ ಪಾಟೀಲ್‌ರನ್ನು ನೇಮಿಸಿದೆ ಎಂದು ಹೇಳಿದರು.
ಅಕ್ರಮ ನಡೆಸಿದ ವ್ಯಕ್ತಿ ಆಡಳಿತ ಮಂಡಳಿಯನ್ನೇ ಅಸ್ಥಿರಗೊಳಿಸುವ ಪ್ರಯತ್ನ ನಡೆಸಿದ್ದು, ತನಿಖೆಗೆ ನೇಮಕ ಆಗಿರುವ ಉಪ ನಿಬಂಧಕರು ತನಿಖೆಗೆ ವೇಗ ನೀಡಬೇಕು ಎಂದು ಮನವಿ ಮಾಡಿದರು.