ಕೋಟೆನಾಡಿನ ನಾದಯೋಗಿ …!

bkt-20-7 (2)
ನಾದಯೋಗಿ ದತ್ತಾತ್ರೇಯ ಪರ್ವತೀಕರ
Published on

ಸಂತೋಷ ದೇಶಪಾಂಡೆ
ಬಾಗಲಕೋಟೆ: ಅವರೊಬ್ಬ ಅಕ್ಷರಶಃ ಸಂತ. ಸಂಗೀತ ಸರಸ್ವತಿಗಾಗಿ ಮನೆ, ಮಠ ಎಲ್ಲವನ್ನು ತ್ಯಾಗ ಮಾಡಿದರು. ಒಂದು ಕಾಲದಲ್ಲಿ ಅವರ ಸಂಗೀತ ಕಚೇರಿ ನಡೆಯುತ್ತಿದ್ದರೇ ಕಿಕ್ಕಿರಿದು ಜನಸ್ತೋಮ ಸೇರುತ್ತಿತ್ತು. ದುರಂತ ಅಂದರೇ ಕೋಟೆನಾಡಿನವರಾದರು ಅವರ ಹೆಸರು ಅಜರಾಮರವಾಗಿ ಉಳಿಸಲು ಸಾಧ್ಯವಾಗಿಲ್ಲ. ಇದೀಗ ಇಂತದೊಂದು ವಿಶೇಷ ಪ್ರಯತ್ನಕ್ಕೆ ಕೈ ಹಾಕಲಾಗಿದೆ….!

ಜಿಲ್ಲೆಯ ಗುಳೇದಗುಡ್ಡ ಪಟ್ಟಣದವರಾದ ಶ್ರೇಷ್ಠ ವೀಣಾವಾದಕ ದಿ.ದತ್ತಾತ್ರೇಯ ಪರ್ವತೀಕರ ಅವರ ಸಂಗೀತಮಯ ಬದುಕಿನ ಕುರಿತು ಸೆ.೨೨ರಂದು ನಗರದಲ್ಲಿ ಒಂದು ಕೃತಿ ಬಿಡುಗಡೆಯಾಗುತ್ತಿದೆ. ಆದರೆ ಇವರ ಸಾಧನೆಯನ್ನು ಪರಿಚಯಿಸುವ ಯಾವ ಕುರುಹುಗಳೂ ಜಿಲ್ಲೆಯಲ್ಲಿ ಇಲ್ಲದಿರುವುದು ವಿಷಾದನೀಯ. ಅವರ ಸಮಗ್ರ ಜೀವನದ ಹೂರಣ ಕೃತಿ ಮೂಲಕ ಹೊರ ತರಲಾಗುತ್ತಿದೆ.

ನಾದಯೋಗಿ ಎಂದೇ ಹೆಸರಾದ ಇವರು ೬೦ರ ದಶಕದಲ್ಲಿ ವೀಣಾ ವಾದಕರಾಗಿ ದೇಶಾದ್ಯಂತ ಸಂಚರಿಸಿದ ಬಾಗಲಕೋಟೆ ಕೀರ್ತಿಯನ್ನು ದಶ ದಿಕ್ಕುಗಳಲ್ಲಿ ಬೆಳಗಿದವರು. ನಮ್ಮ ದೇಶದ ಪ್ರಥಮ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಅವರಿಗೆ ವೀಣಾವಿದ್ಯೆ ಕಲಿಸಿದ ಗುರುವಾಗಿದ್ದರು. ಇವರು ನುಡಿಸಿದ ಕೆಲವು ರಾಗಗಳು ಕೋಲ್ಕತಾ, ಮಥುರಾ ಮತ್ತಿತರ ಆಕಾಶವಾಣಿ ಹಾಗೂ ದೆಹಲಿ ಸಂಗೀತ ನಾಟಕ ಅಕಾಡೆಮಿಯಲ್ಲಿ ಲಭ್ಯವಾಗಿವೆ. ಸ್ವತಃ ಇವರೇ ತಯಾರಿಸಿದ ದತ್ತ ವೀಣೆಯನ್ನು ಕೂಡ ದೆಹಲಿ ಸಂಗೀತ ನಾಟಕ ಅಕಾಡೆಮಿಯ ಭಾರತೀಯ ಸಂಗೀತ ವಾದ್ಯಗಳ ಸಂಗ್ರಹದಲ್ಲಿ ಇಂದಿಗೂ ನೋಡಬಹುದಾಗಿದೆ. ಈ ವೀಣೆಯನ್ನು ತಯಾರಿಸುವಾಗ ಭಾರತರತ್ನ ಸರ್ ಸಿ.ವಿ.ರಾಮನ್ ಅವರಂಥ ಶ್ರೇಷ್ಠ ವಿಜ್ಞಾನಿಯೊಂದಿಗೆ ಪರ್ವತೀಕರ ಚರ್ಚೆ ನಡೆಸಿ ತಂತಿಗಳ ಅಳತೆಯನ್ನು ನಿರ್ಧರಿಸಿದ್ದರು ಎಂಬುದು ಗಮನಾರ್ಹ.

ಇವರ ಹೆಸರಿವನಲ್ಲಿ ಉತ್ತರ ಪ್ರದೇಶದ ಮಥುರಾ, ವೃಂದಾವನಗಳಲ್ಲಿ ಇಂದಿಗೂ ಸಂಗೀತ ಶಾಲೆಗಳು ನಡೆಯುತ್ತಿವೆ. ಜರ್ಮನಿ ಹಾಗೂ ಅಮೆರಿಕದಿಂದ ಬಂದು ಇವರ ಬಳಿ ಸಂಗೀತ, ಧ್ಯಾನಗಳನ್ನು ಕಲಿತು ಆ ದೇಶಗಳಲ್ಲಿ ಇಂದಿಗೂ ಅನುಸರಿಸುತ್ತಿರುವ, ಕಲಿಸುತ್ತಿರುವ ವ್ಯಕ್ತಿಗಳಿದ್ದಾರೆ. ೩೪ ವರ್ಷಗಳ ಹಿಂದೆ ಇಹಲೋಕ ತ್ಯಜಿಸಿದ ಪರ್ವತೀಕರ ಅವರ ಹೆಸರಿನಲ್ಲಿ ಋಷಿಕೇಶ, ವೃಂದಾವನಗಳಲ್ಲಿ ಅನೇಕ ವರ್ಷಗಳಿಂದ ಸ್ವರ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯುತ್ತಿವೆ.

ಗುಳೇದಗುಡ್ಡದ ಈ ಸಾಧಕರ ಬಗ್ಗೆ ದೆಹಲಿಯಲ್ಲಿರುವ ವ್ಯಕ್ತಿ ಸಂಶೋಧನಾತ್ಮಕ ಅಧ್ಯಯನ ನಡೆಸಿ ಪಿಎಚ್‌ಡಿ ಪಡೆದಿದ್ದಾರೆ. ನಮ್ಮ ದೇಶದ ಮೂವರು ರಾಷ್ಟ್ರಪತಿಗಳಿಂದ ಸನ್ಮಾನಿತರಾದ, ಮೂವರು ಭಾರತರತ್ನ ಸಂಗೀತ ಕಲಾವಿದರಿಂದ ಭೇಷ್ ಎನಿಸಿಕೊಂಡ ಪರ್ವತೀಕರ ಸಂಗೀತ ಪ್ರಸಾರಕ್ಕಾಗಿ ರಾಘವೇಂದ್ರ ಸ್ವಾಮಿ ಮಿಷನ್ ಟ್ರಸ್ಟ್ ಸ್ಥಾಪಿಸಿದ್ದರು. ಅದರ ಕೆಲವು ಶಾಖೆಗಳು ಬೆಂಗಳೂರು ಸೇರಿದಂತೆ ಇಂದಿಗೂ ನಾಡಿನ ಕೆಲವೆಡೆ ಕಾರ್ಯ ನಿರ್ವಹಿಸುತ್ತಿವೆ. ಅಲ್ಲಿ ಮಕ್ಕಳಿಗೆ ಸಂಗೀತ ಪಾಠವೂ ನಡೆಯುತ್ತಿದೆ. ಪರ್ವತೀಕರ ಕೆಲವು ದಶಕಗಳ ಹಿಂದೆ ಕೇಂದ್ರ ಸಚಿವರು, ಉತ್ತರ ಪ್ರದೇಶದ ಮುಖ್ಯಮಂತ್ರಿಗಳು, ಬಿರ್ಲಾ ಅವರಂಥ ಉದ್ಯಮಿಗಳಿಗೆ ಚಿರಪರಿಚಿತರಾಗಿದ್ದ ದಿ.ದತ್ತಾತ್ರೇಯ ಪರ್ವತೀಕರ ಅವರ ಬಗ್ಗೆ ಬದರಿ ಧಾಮದ ತೋಪನಿಧಿ ಕೃತಿ ಹೊರಬರುತ್ತಿದೆ ಎಂಬುದು ಸಂತಸದ ಸಂಗತಿ. ಇಂತಹ ಮಹಾನ್ ವ್ಯಕ್ತಿ ಮುಂದಿನ ಪೀಳಿಗೆ ಜನರಿಗೆ ತಿಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.

ಏನಾಗಬೇಕು?
ನಾದಯೋಗಿ ದತ್ತಾತ್ರೇಯ ಪರ್ವತೀಕರ ಅವರ ಹೆಸರಿನಲ್ಲಿ ಸಂಗೀತ ಸಾಧಕರಿಗೆ ಪ್ರಶಸ್ತಿ ವಿತರಿಸುವ ಕಾರ್ಯವಾಗಬೇಕು. ಅವರ ಹೆಸರಿನಲ್ಲಿ ಒಂದು ಸಂಗೀತ ಸಂಶೋಧನೆ ಹಾಗೂ ಅಧ್ಯಯನ ಕೇಂದ್ರ ಜಿಲ್ಲೆಯಲ್ಲಿ ಸ್ಥಾಪನೆಯಾಗಬೇಕು. ನಗರದ ಪ್ರಮುಖ ರಸ್ತೆಗೆ ಅವರ ಹೆಸರಿಡುವ ಕಾರ್ಯವಾಗಬೇಕು. ಧಾರವಾಡ ಆಕಾಶವಾಣಿಯಲ್ಲಿ ಇವರ ಹೆಸರಿನಲ್ಲಿ ಪ್ರತಿಭಾವಂತ ಸಂಗೀತ ವಿದ್ಯಾರ್ಥಿಗಳಿಗೆ ಪಾರಿತೋಷಕ ವಿತರಿಸಲು ದತ್ತಿನಿಧಿ ಸ್ಥಾಪಿಸಲಾಗಿದ್ದು, ಇಂಥ ಕಾರ್ಯ ಜಿಲ್ಲೆಯಲ್ಲೂ ನಡೆಯಬೇಕು ಎಂಬುದು ಸಂಗೀತಪ್ರಿಯರ ಆಶಯವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net