

ಬಾಗಲಕೋಟೆ: ಬೆಳಕಿನ ಹಬ್ಬ ದೀಪಾವಳಿ ಹಬ್ಬ ಆಚರಣೆಗೆ ಕೋಟೆನಾಡು ಸಜ್ಜುಗೊಂಡಿದೆ. ಜಿಲ್ಲೆಯಾದ್ಯಂತ ಮೂರು ದಿನಗಳ ಕಾಲ ಹಬ್ಬದ ಸಂಭ್ರಮ, ಸಂಡಗರ ಮನೆ ಮಾಡಲಿದೆ. ಸಾರ್ವಜನಿಕರು ಸಾಂಪ್ರದಾಯಕ ದೀಪಾವಳಿ ಆಚರಣೆಗೆ ಮುಂದಾಗಿದ್ದಾರೆ.
ಜಿಲ್ಲೆಯ ಎಲ್ಲ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ದೀಪಾವಳಿ ಹಬ್ಬ ಆಚರಣೆ ಸಂಭ್ರಮದಿಂದ ಜರುಗಲಿದೆ. ಸೋಮವಾರ ಬೆಳಗ್ಗೆ ನರಕ ಚುತುದರ್ಶಿ ಪೂರ್ಣಗೊಂಡಿದ್ದು, ಸೂರ್ಯಗ್ರಹಣ ಹಿನ್ನಲೆಯಲ್ಲಿ ಸೋಮವಾರ ಸಂಜೆಯೇ ಅಂಗಡಿ, ಮುಂಗಟ್ಟು ಹಾಗೂ ಮನೆಮನಗಳಲ್ಲಿ ಭಕ್ತಿ ಪೂರ್ವಕ ಲಕ್ಷ್ಷೀ ಪೂಜೆ ನೆರವೇರಿಸಲಾಯಿತು. ಬುಧವಾರ ಪಾಡ್ಯ ಆಚರಿಸಲಾಗುತ್ತದೆ. ಇನ್ನು ಎಲ್ಲೆಡೆ ದೀಪಗಳ ಬೆಳಕು ಜಗಮಗಿಸುತ್ತೀವೆ.
ತರಹೇವಾರಿ ಆಕಾಶಪುಟ್ಟಿಗಳ ಲಗ್ಗೆ…
ಬಾಗಲಕೋಟೆ ನಗರ ಮಾರುಕಟ್ಟೆ ಸೇರಿದಂತೆ ಮುಧೋಳ, ಜಮಖಂಡಿ, ಬಾದಾಮಿ, ಹುನಗುಂದ, ಇಳಕಲ್ಲ, ಬೀಳಗಿ ಪಟ್ಟಣದ ಮಾರುಕಟ್ಟೆಗಳಲ್ಲಿ ತರಹೇವಾರಿ ಆಕಾಶಪಟ್ಟಿಗಳು ಲಗ್ಗೆ ಇಟ್ಟಿವೆ. ೩೦೦ ರಿಂದ ೫೦೦ ರೂ. ವರೆಗೆ ಆಕಾಶಪುಟ್ಟಿಗೆ ದರ ನಿಗದಿ ಮಾಡಲಾಗಿದೆ. ದೀಪಾವಳಿ ಹಬ್ಬದ ಅಂಗವಾಗಿ ಅಂಗಡಿಗಳನ್ನು ಸ್ವಚ್ಛಗೊಳಿಸಿ ಸುಣ್ಣ, ಬಣ್ಣ ಬಳೆಯುವ ಕಾರ್ಯ ಪೂರ್ಣಗೊಂಡಿದೆ. ಪ್ಲಾಸ್ಟಿಕ್, ಮಣ್ಣಿನ ಹಣತೆಗಳು ಮಾರುಕಟ್ಟೆಯಲ್ಲಿ ಆಕರ್ಷಿಸುತ್ತಿವೆ. ಹೊಸ ಮಾದರಿಗಳ ಬಟ್ಟೆಗಳ ಖರೀದಿಗೆ ಜನ ಮುಗಿಬಿದ್ದಿರುವ ದೃಶ್ಯ ಕಂಡು ಬಂದಿತು. ಚಿಕ್ಕಮಕ್ಕಳು ಪಟಾಕಿಗಳ ಖರೀದಿ ಮಾಡಲು ಪಾಲಕರ, ಪೋಷಕರ ದುಂಬಾಲು ಬೀಳುತ್ತಿದ್ದಾರೆ.
ಅಲ್ಲದೆ ವ್ಯಾಪಕ ಪ್ರಮಾಣದಲ್ಲಿ ಕಬ್ಬು, ಬಾಳೆ ದಿಂಡು, ಚಂಡು ಹೂ, ಬೂದ ಕುಂಬಳಕಾಯಿ ಮಾರುಕಟ್ಟೆ ಆಗಮಿಸಿವೆ. ಬೈಕ್, ಕಾರು ಸೇರಿದಂತೆ ಹೊಸ ವಾಹನಗಳು ರಸ್ತೆಗೆ ಇಳಿಯಲಿದ್ದು, ವಾಹನ, ಗೃಹ ಉಪಯೋಗಿ ವಸ್ತುಗಳ ವ್ಯಾಪಾರದ ಭರಾಟೆ ನಡೆಯಲಿದೆ.
ಮನೆಗಿಂತಲೂ ಅಂಗಡಿ, ಮುಂಗುಟ್ಟು ಗಳಲ್ಲಿ ಲಕ್ಷ್ಮೀ ಪೂಜೆಯ ಅದ್ದೂರಿಯಾಗಿ ಜರುಗಿತು. ದೇವಿಗೆ ವಿಶೇಷ ಅಡುಗೆ ಮಾಡಿ ನೈವೇದ್ಯ ಸಮರ್ಪಿಸಲಾಯಿತು. ಜನರು ಹಳೇ ವಾಹನಗಳನ್ನು ಶುಚಿಗೊಳಿಸಿ, ವಿವಿಧ ರೀತಿಯಲ್ಲಿ ಶೃಂಗಾರಗೊಳಿಸಿ ವಿಶೇಷ ಪೂಜೆ ಮಾಡಲಿದ್ದಾರೆ. ಅಂಗಡಿ, ಮುಂಗಟ್ಟುಗಳು ವಿದ್ಯುತ್ ಅಲಂಕಾರದಿಂದ ಕಂಗೂಳಿಸುತ್ತೀವೆ.