ಕೋಟೆನಾಡಲ್ಲಿ ಚಂದ್ರ ಗ್ರಹಣ ವೀಕ್ಷಣೆ..!

bkt-8-5 a
ಬಾಗಲಕೋಟೆ ನಗರದಲ್ಲಿ ಗ್ರಹಣ ವೀಕ್ಷಣೆ.
Published on

ಬಾಗಲಕೋಟೆ: ಚಂದ್ರ ಗ್ರಹಣ ಹಿನ್ನಲೆಯಲ್ಲಿ ನಭೋಮಂಡಲದ ನಡೆಯುವ ಖಗೋಳ ವಿಸ್ಮಯಕ್ಕೆ ಬಾಗಲಕೋಟೆ ಸಾಕ್ಷಿಯಾಯಿತು. ಜಿಲ್ಲೆಯ ನಾನಾ ಭಾಗದಲ್ಲಿ ಸಾರ್ವಜನಿಕರು, ವಿಜ್ಞಾನ ಶಿಕ್ಷಕರು ವೀಕ್ಷಣೆ ಮಾಡಿದರು. ಮೋಕ್ಷವಾಗುತ್ತಿದ್ದಂತೆ ಬಾದಾಮಿ ಬನಶಂಕರಿ ದೇವಿ ಸೇರಿದಂತೆ ಜಿಲ್ಲೆಯ ವಿವಿಧ ದೇವಸ್ಥಾನಗಳಲ್ಲಿ ಪೂಜಾ ಕೈಂಕರ್ಯಗಳು ನಡೆದವು.
ಸಂಜೆ ೫ ಗಂಟೆ ೪೦ ನಿಮಿಷದಿಂದ ಆರಂಭವಾದ ಗ್ರಹಣ ೬.೪೫ ನಿಮೀಷಕ್ಕೆ ಮುಕ್ತಾಯವಾಯಿತು. ಈ ವೇಳೆ ಭಕ್ತರಿಗೆ ದೇವರ ದರ್ಶನಕ್ಕಿಲ್ಲ ಅವಕಾಶ ಇರಲಿಲ್ಲ. ಗ್ರಹಣ ಕಾಲಕ್ಕೆ ದೇವರ ಮೂರ್ತಿಗೆ ಜಲಾಭಿಷೇಕ ಮಾಡಲಾಯಿತು. ಮೋಕ್ಷದ ನಂತರ ದೇವರಿಗೆ ವಿವಿಧ ಪೂಜೆ ಜರುಗಿತು.
ಬಾದಾಮಿ ಬನಶಂಕರಿ ತುಳಸಿಗೇರಿಯ ಆಂಜನೇಯ ದೇವಸ್ಥಾನ, ಮಹಾಕೂಟದ ಮಹಾಕೋಟೇಶ್ವರ, ಚಿಕ್ಕ ಸಂಗಮದ ಸಂಗಮೇಶ್ವರ ದೇವಸ್ಥಾನ, ಕೂಡಲಸಂಗಮದ ಸಂಗಮೇಶ್ವರ ದೇವಸ್ಥಾನ ಸೇರಿದಂತೆ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ದೇವಸ್ಥಾನಗಳಲ್ಲಿ ಶುದ್ಧಿ ಕಾರ್ಯ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು. ಅಲ್ಲದೆ ಗ್ರಹಣ ಬಿಟ್ಟ ಬಳಿಕ ವಿವಿಧ ಮಠಾಧೀಶರು, ಅರ್ಚಕರು, ಪುರೋಹಿತರು, ಸಾರ್ವಜನಿಕರು ಸ್ನಾನ ಮಾಡಿ ಅರ್ಘ್ಯ ಅರ್ಪಿಸಿದರು.
ಗ್ರಹಣ ವೇಳೆ ಈ ಭಾಗದಲ್ಲಿ ವಿಚಿತ್ರ ನಂಬಿಕೆಗಳಿವೆ. ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ತೇರದಾಳ ಪಟ್ಟಣದ ಮೃತ್ಯುಂಜಯ ತೆಳಗಿನಮನಿ ಎಂಬುವವರ ಮನೆಯಲ್ಲಿ ಗ್ರಹಣ ಪರೀಕ್ಷೆಗೆ ವನಕೆ ಪ್ರಯೋಗ ಮಾಡಿದರು. ಗ್ರಹಣ ಕಾಲದಲ್ಲಿ ತಟ್ಟೆಯಲ್ಲಿ ನೀರು ಹಾಕಿ ವನಕೆ ನಿಲ್ಲಿಸಿದ್ದರು. ಗ್ರಹಣ ಹಿನ್ನೆಲೆ ಜಿಲ್ಲೆಯ ನಾನಾ ಭಾಗದಲ್ಲಿ ಧಾರ್ಮಿಕ ಆಚರಣೆಗಳು ಜರುಗಿದವು. ಖಗ್ರಾಸ್ ಚಂದ್ರ ಗ್ರಹಣ ಹಿನ್ನಲೆ ಬಾಗಲಕೋಟೆ ತಾಲೂಕಿನ ಹಳೇ ಮುರುನಾಳ ಗ್ರಾಮದ ಹಿನ್ನೀರು ಪ್ರದೇಶದಲ್ಲಿರುವ ಮಳೆರಾಜೇಂದ್ರ ಸ್ವಾಮಿಮಠದ ಘಟಪ್ರಭಾ ನದಿಯಲ್ಲಿ ಸಾರ್ವಜನಿಕರು ಜಪ -ತಪ ಮಾಡಿದರು. ಅಲ್ಲದೆ ವಿವಿಧೆಡೆ ಹೋಮ-ಹವನ ಜರುಗಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net