

ಬಾಗಲಕೋಟೆ: ಬಾದ್ರಪದ ಚೌತಿಯ ದಿನವಾದ ಬುಧವಾರ ವಿಘ್ನ ವಿನಾಶಕ, ವಕ್ರತುಂಡನ ಪ್ರತಿಷ್ಠಾನ ಕಾರ್ಯ ಕೋಟೆನಾಡಿನಲ್ಲಿ ಅದ್ದೂರಿಯಾಗಿ ನಡೆಯಿತು. ಜಿಲ್ಲಾದ್ಯಂತ ಒಟ್ಟು 1800 ಕ್ಕೂ ಹೆಚ್ಚು ಸ್ಥಳಗಳಲ್ಲಿ ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಯಿತು.
ಬೆಳಗ್ಗೆಯಿಂದಲೇ ಸಂಭ್ರಮ ಸಡಗರದಿಂದ ಗಣೇಶ ಪ್ರತಿಷ್ಠಾಪನಾ ಕಾರ್ಯ ಆರಂಭವಾಯಿತು. ಮೊದಲು ಭಕ್ತರು ಮನೆ ಮನೆಗಳಲ್ಲಿ ಏಕದಂತನನ್ನು ಸ್ವಾಗತಿಸಿಕೊಂಡರು. ಜೈ ಗಣೇಶ, ಮಂಗಲ ಮೂರ್ತಿ ಮೊರೆಯಾ, ಗಣಪತಿ ಬಪ್ಪಾ ಮೊರೆಯಾ.. ಜೈ ಕಾರ ಹಾಕುತ್ತಾ, ಗಣೇಶ ಮೂರ್ತಿಯನ್ನು ತೆಗೆದುಕೊಂಡು ಹೋಗುತ್ತಿರುವ ದೃಶ್ಯ ಕಂಡು ಬಂದಿತು.
ಬೆಳಗ್ಗೆ 11 ಗಂಟೆಯ ನಂತರ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಲು ಭಕ್ತರು ಟಂಟಂ, ಟ್ರ್ಯಾಕ್ಟರ್ ಹಾಗೂ ಭಾರಿ ವಾಹನಗಳ ಮೂಲಕ ಭವ್ಯ ಮೆರವಣಿಗೆ ನಡೆಸಿದರು. ಸಂಜೆ ವರೆಗೂ ವಿವಿಧ ಸಾರ್ವಜನಿಕರ ಗಣಪತಿ ಮೆರವಣಿಗೆಗಳು ನಡೆದವು. ಯುವಕರು ಗುಲಾಲ ಎರೆಚಿಕೊಂಡು, ಹೆಜ್ಜೆ ಹಾಕುತ್ತಾ ವಕ್ರತುಂಡನಿಗೆ ಜೈಕಾರ ಕೂಗಿದರು.
ಬೃಹತ್ ಗಣೇಶ ಮೂರ್ತಿಗಳ ಮೆರವಣಿಗೆ ಆಗಮಿಸುತ್ತಿದ್ದಂತೆ ಸಾರ್ವಜನಿಕರು ಮನೆಯಿಂದ ಆಚೆ ಬಂದು ಮೆರವಣಿಗೆ ವೀಕ್ಷಿಸುತ್ತಿರುವ ದೃಶ್ಯ ಕಂಡು ಬಂದಿತು. ಮೆರವಣಿಗೆಯಲ್ಲಿದ್ದ ಯುವಕರು ಹಣೆಗೆ ರಿಬ್ಬನ್ ಕಟ್ಟಿಕೊಂಡು ಕುಣಿದು ಕುಪ್ಪಳಿಸಿದರು. ವಿವಿಧ ಚಿತ್ರಗೀತೆಗಳು ಪ್ರತಿಧ್ವನಿಸಿದವು. ಹಾಡಿನ ತಕ್ಕಂತೆ ಯುವಕರು ಕುಣಿದು ಕುಪ್ಪಳಿಸಿದರು. ಕೆಲವು ಭಾಗದಲ್ಲಿ ಎರಡು, ಮೂರು ಗಣೇಶ ಮಂಡಳಿಗಳು ಕೂಡಿಕೊಂಡು ಸರದಿಯಲ್ಲಿ ಗಣೇಶ ಮೂರ್ತಿ ಮೆರವಣಿಗೆ ನಡೆಸಿದರು. ಪಟಾಕಿಗಳ ಸದ್ದು ಜೋರಾಗಿತ್ತು. ಪ್ರಮುಖ ರಸ್ತೆಗಳಲ್ಲಿ ಜನದಟ್ಟನೆ ಕಂಡು ಬಂದಿತು. ಹಣ್ಣು, ಕಾಯಿ, ಹೂವು ಸೇರಿದಂತೆ ಪೂಜಾ ಸಾಮಗ್ರಿಗಳ ಖರೀದಿಗೆ ಸಾರ್ವಜನಿಕರು ಮುಗಿಬಿದ್ದಿದ್ದರು. ಬಿಗಿ ಪೊಲೀಸ ಬಂದೂ ಬಸ್ ನಡುವೆ ಗಣೇಶ ಮೂರ್ತಿ ಪ್ರತಿಷ್ಠಾಪನೆ ಶಾಂತಿಯುತವಾಗಿ ಜರುಗಿತು.
ವಿಶೇಷ ಪೂಜೆ: ಗಣೇಶೋತ್ಸವ ಹಿನ್ನೆಲೆಯಲ್ಲಿ ವಿನಾಯಕನಿಗೆ ಅಭಿಷೇಕ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು. ಮಂತ್ರಘೋಷಗಳು ಮೊಳಗಿದವು. ನೂರಾರು ಭಕ್ತರು ಒಂದೆಡೆ ಸೇರಿ ಗಣಪತಿ ಶತನಾಮಾವಳಿ ಪಠಿಸಿದರು. ಇಷ್ಟಾರ್ಥ ಸಿದ್ದಿಗಾಗಿ ವಿವಿಧ ಸೇವೆ ಸಲ್ಲಿಸಲಾಯಿತು.
ಗಣ ಹೋಮ ಮಾಡಿ ಗಣೇಶನಿಗೆ ಪ್ರಿಯವಾದ ಮೊದಕ, ಕಡುಬು ನೈವೇದ್ಯ ಸಮರ್ಪಿಸಲಾಯಿತು. ವಿವಿಧ ಹೂಗಳಿಂದ ಅಲಂಕರಿಸಲಾಗಿತ್ತು. ಅಲ್ಲದೆ ಸಾರ್ವಜನಿಕ ಗಣೇಶ ಮೂರ್ತಿ ವೇದಿಕೆಗಳಲ್ಲಿ ವಿದ್ಯುತ್ ದೀಪಾಲಾಂಕಾರ ಗಮನ ಸೆಳೆಯಿತು. ಹಬ್ಬದ ಅಂಗವಾಗಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.