

ಬಾಗಲಕೋಟೆ: ಹಿಂದೆ ನಡೆದ ಕುಡಚಿ ರೈಲು ಮಾರ್ಗ ನಿರ್ಮಾಣದ ಹೋರಾಟ ಮಾದರಿಯಲ್ಲಿ, ಲೋಕಾಪುರ ಧಾರವಾಡ ಮಾರ್ಗದ ನಿರ್ಮಾಣ ಹೋರಾಟ ನಡೆಯಲಿದೆ ಎಂದು ಉತ್ತರ ಕರ್ನಾಟಕ ರೈಲ್ವೆ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಕುತುಬುದ್ದೀನ್ ಖಾಜಿ ಹೇಳಿದರು.
ಇಲ್ಲಿನ ಚರಂತಿಮಠದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರೈಲ್ವೆ ಹೋರಾಟ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಈ ರೈಲ್ವೆ ಪ್ರಾರಂಭವಾದರೆ ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕದ ಬಹುತೇಕ ಭಾಗಕ್ಕೆ ಅನುಕೂಲವಾಗಲಿದೆ. ಈ ಮಾರ್ಗ ಅನುಷ್ಠಾನಗೊಂಡರೆ ಉತ್ತರ ಕರ್ನಾಟಕದ ಅಭಿವೃದ್ಧಿಯ ಜೀವನಾಡಿ ಆಗುವುದರಲ್ಲಿ ಎರಡು ಮಾತಿಲ್ಲ ಎಂದರು.
ವಕೀಲ ಜೆ.ಜೆ.ಕುಲಕರ್ಣಿ ಮಾತನಾಡಿ, ಧಾರವಾಡ ಹೈಕೋರ್ಟ್ ಪೀಠಕ್ಕೆ ತೆರಳಲು ಅವಳಿ ಜಿಲ್ಲೆಯ ನ್ಯಾಯವಾದಿಗಳಿಗೆ, ಜನರಿಗೆ ಬಹಳ ಅನುಕೂಲ ಇದ್ದ ಈ ಮಾರ್ಗ ಶೀಘ್ರ ಕಾರ್ಯರೂಪಕ್ಕೆ ತರಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಅಹಿಂದ ಮುಖಂಡ ಕಾಶಿನಾಥ ಹುಡೇದ ಮಾತನಾಡಿ, ಸೌದತ್ತಿ ಯಲ್ಲಮ್ಮನ ಭಕ್ತರು ಮಹಾರಾಷ್ಟ್ರ ಮತ್ತು ಉತ್ತರ ಕರ್ನಾಟಕದ ಭಾಗದಲ್ಲಿ ಭಾರಿ ಪ್ರಮಾಣದಲ್ಲಿ ಇದ್ದು, ಈ ಮಾರ್ಗ ನಿರ್ಮಾಣಚಾದರೆ ಎಲ್ಲರಿಗೂ ಅನುಕೂಲ ಎಂದು ಹೇಳಿದರು.
ರೈತ ಮುಖಂಡ ಸುಭಾಸ ಶಿರಬೂರ ಹಾಗೂ ಮುಖಂಡ ರಾಜು ಮನ್ನಿಕೇರಿ ಮಾತನಾಡಿದರು. ಸಭೆಯಲ್ಲಿ ದಾದಾಪಿರ್ ಕೆರೂರ, ಪ್ರೇಮಾ ರಾಠೋಡ, ರೇಣುಕಾ ನ್ಯಾಮಗೌಡರ, ಮಂಜುಳಾ ಭೂಸಾರೆ, ಮೈನುದ್ದೀನ್ ಖಾಜಿ, ಸುಭಾಸ ಚಂದ್ರ ಘೋಡಕೆ, ಎ.ಆರ್.ಪಠಾಣ್, ಡಿ.ಎಫ್.ಹಾಜಿ ಸೇರಿ ಇತರರಿದ್ದರು.