

ಬಾಗಲಕೋಟೆ: ಛತ್ರಪತಿ ಶಿವಾಜಿ ಮಹಾರಾಜ ಮೂರ್ತಿ ತೆರವುಗೊಳಿಸುರುವುದು ಹಿಂದೂ ಜಾಗರಣಾ ವೇದಿಕೆ ಜಿಲ್ಲಾ ಘಟಕ ನೇತೃತ್ವದಲ್ಲಿ ಹಿಂದು ಪರ ಸಂಘಟನೆಗಳು ನಗರದಲ್ಲಿ ಶನಿವಾರ ಬೃಹತ್ ಪ್ರತಿಭಟನಾ ರ‍್ಯಾಲಿ ನಡೆಯಿತು. ಸ್ವಯಂ ಪ್ರೇರಿತ ಬಂದ್‌ಗೆ ಮಿಶ್ರ ಕೋಟೆನಗರಿಯಲ್ಲಿ ವ್ಯಾಪಾರ ವಹಿವಾಟು ಸ್ತಬ್ಧಗೊಂಡಿತ್ತು.
ನಗರದ ಬಸವೇಶ್ವರ ಸರ್ಕಲದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆಯು ಕಾಲೇಜು ರಸ್ತೆ, ಪಶು ಆಸ್ಪತ್ರೆ, ಟೆಂಗಿನಮಠ, ಬಸವೇಶ್ವರ ಬ್ಯಾಂಕ ರೋಡ, ಪೊಲೀಸ್ ಚೌಕ, ಟಾಂಗಾ ಸ್ಯಾಂಡ್, ಪಂಖಾ ಮಸೀದಿ, ಕಿಲ್ಲಾ, ಕಾಯಿಪಲ್ಲೆ ಮಾರುಕಟ್ಟೆ, ವಲ್ಲಭಬಾಯಿ ಚೌಕ, ಎಂ.ಜಿ.ರಸ್ತೆಯ ಮೂಲಕ ಹೊಳೆ ಆಂಜನೇಯ ದೇವಸ್ಥಾನದ ಆವರಣ ತಲುಪಿ ಸಮಾವೇಶವಾಗಿ ಮಾರ್ಪಟ್ಟಿತು.
ಪ್ರತಿಭಟನಾ ಮೆರವಣಿಗೆ ಆಗಮಿಸುತ್ತಿದ್ದಂತೆ ಎಂದಿನಂತೆ ಆರಂಭವಾಗಿದ್ದ ತರಕಾರಿ ಮಾರುಕಟ್ಟೆಯಲ್ಲಿ ಕೆಲ ಕಾಲ ಆತಂಕ ಮನೆ ಮಾಡಿತ್ತು. ಅಲ್ಲಲ್ಲಿ ತೆರೆದಿದ್ದ ಅಂಗಡಿಗಳನ್ನು ಪ್ರತಿಭಟನಾಕಾರರು ಮುಚ್ಚಿಸಿದರು. ಈ ವೇಳೆ ಯುವಕನೋರ್ವ ಗೊಣಗಿದ್ದರಿಂದ ಹಿಂದು ಜಾಗರಣಾ ವೇದಿಕೆ ಮುಖಂಡ ಕುಮಾರಸ್ವಾಮಿ ಹಿರೇಮಠ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಯುವಕ ಅಲ್ಲಿಂದ ಕಾಲ್ಕಿತ್ತನು. ನಂತರ ಮೆರವಣಿಗೆ ಶುರುವಾಯಿತು.
ಮೆರವಣಿಗೆಯುದ್ದಕ್ಕೂ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು, ಛತ್ರಪತಿ ಶಿವಾಜಿ ಮಹಾರಾಜ, ಅಂಬಾಭವಾನಿ, ಬಸವೇಶ್ವರ ಮಹಾರಾಜ್ ಕೀ ಜೈ ಎನ್ನುವ ಘೋಷಣೆ ಕೂಗುತ್ತಾ ಸಂಚರಿಸಿದರು. ಕೇಸರಿ ಭಾವುಟಗಳು ರಾರಾಜಿಸಿದವು. ಅಲ್ಲದೆ ಬಾಗಲಕೋಟೆ ನಗರಸಭೆ ಆಯುಕ್ತರು, ಜಿಲ್ಲಾಡಳಿತ, ಪೊಲೀಸ ಇಲಾಖೆ, ಕಾಂಗ್ರೆಸ್ ಸರ್ಕಾರ ವಿರುದ್ದ ಘೋಷಣೆ ಕೂಗಿದರು. ಹಿಂದೂಗಳ ಭಾವನೆಗಳಿಗೆ ಕಾಂಗ್ರೆಸ್ ಧಕ್ಕೆ ತರುತ್ತಿದೆ ಎಂದು ಆರೋಪಿಸಿದರು. ಮುಂಜಾಗೃತ ಕ್ರಮವಾಗಿ ನಗರದಲ್ಲಿ ಬಿಗಿ ಪೊಲೀಸ್ ಬಂದೋ ಬಸ್ತ ಕೈಗೊಳ್ಳಲಾಗಿತ್ತು. ಸಾವಿರಕ್ಕೂ ಹೆಚ್ಚು ಪೊಲೀಸರು, ಡಿಎಆರ್ ತುಕಡಿಗಳನ್ನು ನಿಯೋಜಿಸಲಾಗಿತ್ತು.
ಮಾಜಿ ಶಾಸಕ ವೀರಣ್ಣ ಚರಂತಿಮಠ, ವಿ.ಪ ಮಾಜಿ ಸದಸ್ಯ ನಾರಾಯಣಸಾ ಭಾಂಡಗೆ, ಬಸವರಾಜ ಯಂಕಂಚಿ, ಯಲ್ಲಪ್ಪ ಬೆಂಡಿಗೇರಿ, ಪ್ರಭು ಹಡಗಲಿ ನೇತೃತ್ವ ವಹಿಸಿದ್ದರು.