ಕೋಟೆನಗರಿಯಲ್ಲಿ ಕಾಂಗ್ರೆಸ್ ಪಾದಯಾತ್ರೆ

bkt-11-1
ಬಾಗಲಕೋಟೆ ಕಾಂಗ್ರೆಸ್ ಪಾದಯಾತ್ರೆ
Published on

ಬಾಗಲಕೋಟೆ: ದೇಶದ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಅಂಗವಾಗಿ ಬಾಗಲಕೋಟೆ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ವತಿಯಿಂದ ಗುರುವಾರ ಕೋಟೆನಗರಿಯಲ್ಲಿ ಅಮೃತ ನಡಿಗೆ ನಡೆಯಿತು.
ಮಾಜಿ ಸಚಿವ ಎಚ್.ವೈ.ಮೇಟಿ, ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ ನೇತೃತ್ವದಲ್ಲಿ ಕಚೇರಿಯಿಂದ ಆರಂಭವಾದ ಪಾದಯಾತ್ರೆ ಶಕ್ತಿ ಟಾಕೀಸ್ ಮೂಲಕ ದುರ್ಗಾ ವಿಹಾರ, ರೈಲ್ವೆ ಸ್ಟೇಷನ ರಸ್ತೆ, ಬಸ್ ನಿಲ್ದಾಣ ರಸ್ತೆ, ಕಾಲೇಜು ರಸ್ತೆ, ಟೆಂಗಿನ ಮಠ ರಸ್ತೆ , ಬಸವೇಶ್ವರ ಬ್ಯಾಂಕ್, ಕಪಡ ಬಾಜಾರ, ಪಂಕಾ ಮಸೀದಿ, ಟಾಂಗಾ ಸ್ಟ್ಯಾಂಡ್, ಎಂ.ಜಿ.ರಸ್ತೆ, ಬಸವೇಶ್ವರ ವೃತ್ತದ ಮೂಲಕ ಹೊಳೆ ಆಂಜನೇಯ ದೇವಸ್ಥಾನ ಆವರಣ ತಲುಪಿ ಸಮಾಪ್ತಿಗೊಳ್ಳಲಿದೆ. ಮೆರವಣಿಗೆಯೂದ್ದಕ್ಕೂ ದೇಶ ಭಕ್ತಿ ಪರ ಘೋಷಣೆ ಕೂಗಲಾಯಿತು. ಸಾರ್ವಜನಿಕರು, ವಿದ್ಯಾರ್ಥಿಗಳು ಮಹಿಳೆಯರು, ಪಕ್ಷದ ಕಾರ್ಯಕರ್ತರು, ಪದಾಧಿಕಾರಿಗಳು, ಮುಖಂಡರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಎಚ್.ವೈ.ಮೇಟಿ ಮಾತನಾಡಿ, ನಮ್ಮ ಹಿರಿಯರು ತ್ಯಾಗ, ಬಲಿದಾನದಿಂದ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ. ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಅವರ ಸ್ಮರಣೆ ಮಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ಹಬ್ಬದ ರೀತಿಯಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸಬೇಕು. ಇಂತಹ ಸಂದರ್ಭದಲ್ಲಿ ರಾಜಕಾರಣ ಬೇಡ. ಭಾಷಣವು ಬೇಡ. ಎಲ್ಲ ಧರ್ಮಿಯರು ಒಗ್ಗಟ್ಟಾಗಿ ಭಾವೈಕ್ಯತೆಯಿಂದ ಬಾಳಬೇಕು. ಪ್ರತಿಯೊಬ್ಬರು ಪ್ರಜಾಪ್ರಭುತ್ವ, ರಾಷ್ಟ್ರ ಧ್ವಜಕ್ಕೆ ಗೌರವ ನೀಡಬೇಕು ಎಂದು ಹೇಳಿದರು.
ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ, ಮಹಾತ್ಮ ಗಾಂಜಿ, ನೆಹರು, ತ್ಯಾತ್ಯಾ ಟೋಪಿ, ಭಗಸಿಂಗ, ಚಂದ್ರಶೇಖರ ಆಜಾದ್, ಸುಭಾಷ ಚಂದ್ರಬೋಸ್ ನಂತರ ಮಹಾನ್ ನಾಯಕರು, ಲಕ್ಷಾಂತರ ಜನರ ಹೋರಾಟ, ತ್ಯಾಗ, ಬಲಿದಾನದಿಂದ ಸ್ವಾತಂತ್ರ್ಯ ಸಿಕ್ಕಿದೆ. ಅದನ್ನು ಕಾಪಾಡಿಕೊಳ್ಳವುದು ನಮ್ಮೆಲ್ಲರ ಹೊಣೆಯಾಗಿದೆ. 250 ವರ್ಷಗಳ ಕಾಲ ನಮ್ಮನ್ನು ಆಳಿದ ಬ್ರಿಟಿಷರನ್ನು ತೊಲಗಿಸುವಲ್ಲಿ ಪಟ್ಟ ಶ್ರಮಕ್ಕೆ ಬೆಲೆ ಕಟ್ಟಲಾಗದು. ಅಹಿಂಸಾ ತತ್ವದ ಮೂಲಕ ಮಹಾತ್ಮ ಗಾಂಧಿಜಿ ನಡೆಸಿದ ಫಲವಾಗಿ ಸ್ವಾತಂತ್ರ್ಯ ಸಿಕ್ಕಿತು. 70 ವರ್ಷದಲ್ಲಿ ಕಾಂಗ್ರೆಸ್ ಭಾವೈಕ್ಯತೆ ಸುಖ, ಶಾಂತಿಯಿಂದ ಭಾರತ ಕಟ್ಟಿತು. ಇಂದು ಬಿಜೆಪಿ ದೇಶದಲ್ಲಿ ಅಶಾಂತಿ ಸೃಷ್ಟಿ ಮಾಡುತ್ತಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ 56 ಇಂಚಿನ ಎದೆಯಲ್ಲಿ ಅಂಬಾನಿ, ಅದಾನಿ ಅಂತಹವರಿಗೆ ಜಾಗವಿದೆ. ಆದರೇ ಬಡವರು, ರೈತರು, ಕಾರ್ಮಿಕರಿಗೆ ಸ್ಥಾನ ಕೊಟ್ಟಿಲ್ಲ. ಸಿಎಂ ಬಸವರಾಜ ಬೊಮ್ಮಾಯಿ ರಾಜಧರ್ಮ ಪಾಲನೆ ಮರೆತಿರುವುದು ಖೇದಕರ ಸಂಗತಿ ಎಂದು ವಾಗ್ದಾಳಿ ನಡೆಸಿದರು.

ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ರಕ್ಷಿತಾ ಭರತಕುಮಾರ ಈಟಿ ಮಾತನಾಡಿ, ಸ್ವಾತಂತ್ರ್ಯ ಬಂದಾಗಿನಿಂದ ಕಾಂಗ್ರೆಸ್ ರಾಷ್ಟ್ರ ಧ್ವಜಕ್ಕೆ ಗೌರವ ನೀಡುತ್ತಾ ಬಂದಿದೆ. ಅದಕ್ಕಾಗಿ ನೀತಿ, ರೂಪಿಸಿ ಕಾನೂನು ಜಾರಿ ಮಾಡಿತ್ತು. ಬಿಜೆಪಿ ಸರ್ಕಾರ ಎಲ್ಲವನ್ನು ತೆಗೆದು ಹಾಕಿ ಧ್ವಜದ ಗೌರವಕ್ಕೆ ಧಕ್ಕೆ ತಂದಿದೆ. ಖಾದಿ, ರೇಷ್ಮೆ ಬಟ್ಟೆಯಲ್ಲಿ ಸಿದ್ಧಪಡಿಸಬೇಕಾದ ಧ್ವಜವನ್ನು ಇಂದು ಪ್ಲಾಸ್ಟಿಕ್, ಪಾಲಿಸ್ಟರ್ ಬಟ್ಟೆಯಲ್ಲಿ ತಯಾರ ಆಗುತ್ತಿದೆ. ಇದರಿಂದ ಧ್ವಜ ನೀತಿ ಸಂಹಿತಿಗೆ ಅಗೌರವ ಉಂಟಾಗಿದೆ. ದೇಶದ ಜನ ಬಿಜೆಪಿ ಸರ್ಕಾರದ ಧೋರಣೆ ವಿರುದ್ಧ ಹೋರಾಟ ನಡೆಸಬೇಕು ಎಂದರು.

ಕಾರ್ಯಕ್ರಮದಲ್ಲಿ ಮುಖಂಡರಾದ ನಾಗರಾಜ ಹದ್ಲಿ, ರಾಜು ಮನ್ನಿಕೇರಿ, ದೇವರಾಜ ಪಾಟೀಲ, ಮುತ್ತು ಜೋಳದ, ಹಾಜಿಸಾಬ ದಂಡಿನ, ಚನ್ನವೀರ ಅಂಗಡಿ, ನಿಂಗನಗೌಡ ಪಾಟೀಲ, ಮಲ್ಲಿಕಾರ್ಜುನ ಮೇಟಿ, ಶಶಿಕಾಂತ ಪೂಜಾರ, ಸಿಕಂದರ ಅಥಣಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net