

ಬಾಗಲಕೋಟೆ: ಬಾಗಲಕೋಟೆ ನಗರದಲ್ಲಿ ಸ್ವಚ್ಚತೆ ಕಾಪಾಡಬೇಕು, ಶುದ್ದ ಕುಡಿಯುವ ನೀರು ಒದಗಿಸಬೇಕು, ಬೀದಿ ದೀಪ ಅಳವಡಿಸಬೇಕು ಎಂದು ಆಗ್ರಹಿಸಿ ಎಎಪಿ ಜಿಲ್ಲಾ ಘಟಕದ ನೇತೃತ್ವದಲ್ಲಿ ನಗರಸಭೆ ಆಯುಕ್ತ ಆರ್.ವಾಸಣ್ಣ ಅವರಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.
ಆಲಮಟ್ಟಿ ಹಿನ್ನೀರಿಗೆ ಮುಳಗಡೆಯಾಗಿರುವ ಬಾಗಲಕೋಟೆ ನಗರವು ನಿರೀಕ್ಷಿತಮಟ್ಟದಲ್ಲಿ ಬೆಳೆದಿಲ್ಲ. ದೊಡ್ಡ ಪ್ರಮಾಣದಲ್ಲಿ ಹಿನ್ನಡೆಯಾಗುತ್ತಿದೆ. ನಗರದಲ್ಲಿ ಸಂಚರಿಸಿ ವಾಸ್ತವ ಪರಿಸ್ಥಿತಿ ಅರಿತುಕೊಳ್ಳಬೇಕು. ನಿರ್ಲಕ್ಷ್ಯ ಧೋರಣೆ ಸರಿಯಲ್ಲ ಎಂದು ತಿಳಿಸಿದರು.
ಹಳೆ ನಗರದ ಬಡಾವಣೆಗಳಾದ ಅಂಬೇಡ್ಕರ್ ಗಲ್ಲಿ, ಸಾಬಣ್ಣ ಓಣಿ, ಟೆಂಗಿನ ಮಠದ ಓಣಿ ಸೇರಿದಂತೆ ಎಲ್ಲ ಭಾಗಗಳು, ಮುಚಖಂಡಿ ಕ್ರಾಸ್, ಜಯನಗರ ಕ್ರಾಸ್, ವಾಂಬೆ ಕಾಲೋನಿ, ರಾಜೀವ ಗಾಂಽ ಕಾಲೋನಿಯಲ್ಲಿ ಚರಂಡಿಗಳು ಮಲೀನಗೊಂಡಿವೆ. ಡೆಂಘ್ಯೂ ಎಲ್ಲೆಡೆ ಆವರಿಸಿ ಜನರ ಆರೋಗ್ಯ ಹದಗೆಡುತ್ತಿದೆ. ಕಲುಷಿತ ನೀರು ಪೂರೈಕೆಯಾಗುತ್ತಿದೆ. ಸಾಮಾಜಿಕ, ಆರ್ಥಿಕವಾಗಿ ತೀವ್ರ ಸಂಕಷ್ಟದಲ್ಲಿರುವ ಬಾಗಲಕೋಟೆ ನಗರ ಸಾರ್ವಜನಿಕರಿಗೆ ಉತ್ತಮವಾದ ಸ್ವಚ್ಛ ವಾತಾವರಣ ಕಲ್ಪಿಸುವುದು ನಗರಸಭೆ ಜವಾಬ್ದಾರಿ. ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ಗಮನ ಹರಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕರವೇ ಜಿಲ್ಲಾಧ್ಯಕ್ಷ ರಮೇಶ ಬದ್ನೂರ, ಮುಖಂಡರಾದ ಭೀಮಣ್ಣ ಬಜಣ್ಣವರ, ಕೆ.ಎಂ.ಕಲಾದಗಿ, ಯುವರಾಜ ಬಂಡಿ, ಮಂಜುನಾಥ ಪವಾರ ಸೇರಿದಂತೆ ಇತರರು ಇದ್ದರು.