

ಬಾಗಲಕೋಟೆ: ದೇಶದಲ್ಲಿಯೆ ಖ್ಯಾತಿ ಪಡೆದಿರುವ ಬಾಗಲಕೋಟೆ ಹೋಳಿ ಹಬ್ಬದ ರಂಗೀನಾಟ ಮೊದಲ ದಿನ ಬುಧವಾರ ಅದ್ಧೂರಿಯಾಗಿ ಆರಂಭವಾಗಿದ್ದು, ಕೋಟೆನಗರಿ ಸಂಭ್ರಮದಲ್ಲಿ ತೆಲುವಂತೆ ಮಾಡಿತು. ಮುಳಗಡೆಯಾದ ಬಳಿಕ ಎರಡನೇ ಬಾರಿಗೆ ಅಽಕೃತವಾಗಿ ನವನಗರ-ವಿದ್ಯಾಗಿರಿ ಭಾಗದಲ್ಲಿ ಹಮ್ಮಿಕೊಂಡಿದ್ದ ಬಣ್ಣದಾಟ ಹೋಳಿ ಉತ್ಸವದ ಸಂತಸ ಇಮ್ಮಡಿಗೊಳಿಸಿತ್ತು.
ಬೆಳಗ್ಗೆ ೯ ಗಂಟೆಗೆ ನವನಗರ, ವಿದ್ಯಾಗಿರಿ, ಹಳೇ ಬಾಗಲಕೋಟೆ ನಗರದಲ್ಲಿ ಬಣ್ಣದಾಟ ಆರಂಭಗೊಂಡಿತು. ಯುವಕರು, ಮಹಿಳೆಯರು, ಹಿರಿಯರು ಹಲಗೆ ಸಂಭ್ರಮದಿಂದ ಪಾಲ್ಗೊಂಡಿದ್ದರು. ವಿದ್ಯಾಗಿರಿ ಇಂಜಿನಿಯರಿಂಗ್ ಕಾಲೇಜು ವೃತ್ತದಲ್ಲಿ ಏರ್ಪಡಿಸಿದ್ದ ರೇನ್ಸ್ ಡ್ಯಾನ್ಸ್ ಆಕರ್ಷಿಸಿತು. ಚಿತ್ರಗೀತೆಗಳ ಡಿಜೆ ಮ್ಯೂಜಿಕ್‌ಗೆ ಸಾವಿರಾರು ಯುವಕರು ಹೆಜ್ಜೆ ಹಾಕಿದರು. ೧೨.೩೦ ಗಂಟೆಗೆ ಬಳಿಕ ನವನಗರ, ವಿದ್ಯಾಗಿರಿ ಬಣ್ಣದಲೋಕ ಸೃಷ್ಟಿಯಾಯಿತು.
ನವನಗರದ ಜಿಹವೇಶ್ವರ ದೇವಸ್ಥಾನದಿಂದ ನವನಗರದ ಜನತೆ, ವಿದ್ಯಾಗಿರಿ ಆಂಜನೇಯ ಸ್ವಾಮಿ ದೇವಸ್ಥಾನದಿಂದ ವಿದ್ಯಾಗಿರಿ ಜನತೆ ಬಣ್ಣದ ಬಂಡಿಗಳ ಮೆರವಣಿಗೆ ಆರಂಭಿಸಿದರು. ನೂರಾರು ಸಂಖ್ಯೆಯಲ್ಲಿದ್ದ ಟ್ಯಾಕ್ಟರ್, ಎತ್ತಿನ ಬಂಡಿಗಳಲ್ಲಿ ತುರಾಯಿ ಹಲಗೆ ನೇತೃತ್ವ ಮೆರವಣಿಗೆ ನೋಡುಗರಿಗೆ ಗಮನ ಸೆಳೆಯಿತು. ಕಾಳಿದಾಸ ವೃತ್ತ, ಜಿಲ್ಲಾ ಆಸ್ಪತ್ರೆ ವೃತ್ತ, ನಗರಸಭೆ, ಬಸವೇಶ್ವರ ಸಹಕಾರಿ ಬ್ಯಾಂಕ್ ರಸ್ತೆಯಲ್ಲಿ ಪರಸ್ಪರ ಸಮಾಗಮಗೊಳ್ಳುವ ದೃಶ್ಯ ಬಾಗಲಕೋಟೆ ಹೋಳಿ ಗತವೈಭವ ಸಾರಿತು.
ಇನ್ನು ಮೊದಲ ದಿನದ ಕಿಲ್ಲಾಗಲ್ಲಿಯ ರಂಗೀನಾಟ ನಗರದಲ್ಲಿ ಹಬ್ಬದ ವಾತಾವರಣ ಸೃಷ್ಠಿಸಿತು. ಮಹಿಳೆಯರು, ಮಕ್ಕಳು, ಯುವಕರು ಬಣ್ಣದೋಕುಳಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಪ್ರಮುಖ ಜನದಟ್ಟನೆ ಪ್ರದೇಶಗಳಲ್ಲಿ ಓಕುಳಿ ಆಡಿ ಯುವಕರು ಸಂಭ್ರಮಿಸಿದರು.
ರಂಗೀನ ಆಟದ ಪರಿಣಾಮ ಇಡೀ ಬಾಗಲಕೋಟೆ ವ್ಯಾಪಾರ ವಹಿವಾಟು ಸ್ವಯಂ ಘೋಷಿತ ಬಂದ್‌ನಂತೆ ಕಾಣಿಸಿತು. ಬಸ್ ನಿಲ್ದಾಣ, ರೈಲು ನಿಲ್ದಾನ ಪ್ರಮುಖ ಪ್ರದೇಶಗಳು ಜನರಿಲ್ಲದೇ ಬಿಕೋ ಎನ್ನುತ್ತಿದ್ದವು. ಬೆಳಗ್ಗಯಿಂದ ಮಕ್ಕಳು ಹಲಿಗೆ ಬಾರಿಸುವುದು ಬಣ್ಣ ಆಡುವುದು ಸಾಮಾನ್ಯವಾಗಿತ್ತು. ಮಧ್ಯಾಹ್ನದ ವೇಳೆಗೆ ಸ್ಪಲ್ಪ ಹೆಚ್ಚು ರಂಗು ಕಾಣಿಸಿತು. ಬಣ್ಣದ ನೀರು ತುಂಬಿಕೊಂಡು ಪ್ರಮುಖ ರಸ್ತೆಗಳಲ್ಲಿ ಓಕುಳಿಯಾಡುತ್ತ ಜನರನ್ನು ರಂಜಿಸಿದರು.
ಬಸವೇಶ್ವರ ವೃತ್ತ ಹಾಗೂ ಕಾಲೇಜು ವೃತ್ತದಲ್ಲಿ ಬಂಡಿಗಳ ಜೊತೆಗೆ ನೂರಾರು ಯುವಕರು ಸೇರಿಕೊಂಡು ಪ್ರದೇಶವನ್ನು ಕಲರ್ ಫುಲ್ ಮಾಡಿದರು. ಪರಸ್ಪರ ಬಣ್ಣದ ನೀರು ಎರೆಚುತ್ತ ಸಂಭ್ರಮಿಸಿದರು. ಸಡಗರದಲ್ಲಿ ಹಲಿಗೆ ಸಪ್ಪಳವೂ ಸೇರಿಕೊಂಡು ಹಬ್ಬದ ರಂಗೇರಿತು. ವಿವಿಧ ಬಡಾವಣೆಗಳಲ್ಲಿ ಯುವತಿಯರು ಪರಸ್ಪರ ಗುಲಾಲ್ ಎರಚಿ ಹಬ್ಬಕ್ಕೆ ಕಳೆ ತಂದರು. ವಿಭಿನ್ನ ವೇಷ, ಪೋಷಾಕು ಧರಿಸಿದ್ದ ಯುವಕರು ನಾನಾ ರೀತಿಯ ನಟನೆ ಮಾಡುತ್ತಾ ಗಮನ ಸೆಳೆದರು. ಬಣ್ಣದ ಬಂಡಿಗಳ ಜೊತೆ ಕೇಕೇ ಹಾಕುತ್ತಾ ಯುವಕರು ಸಾಗಿದರು. ಆಕರ್ಷಕ ಸಾಂಪ್ರದಾಯಕ ಹಲಗೆ ನಾದಕ್ಕೆ ಕುಣಿದು ಕುಪ್ಪಳಿಸಿದರು. ಮೊದಲ ದಿನ ಕೋಟೆನಗರಿ ರಂಗೀನಾಟ ನೋಡುಗರನ್ನು ಸೆಳೆಯಿತು.
ಇಂದು ಬಣ್ಣದ ಬಂಡಿಗಳ ಸಮಾಗಮ:
ಮಾ.೯ ರಂದು ೨ನೇ ದಿನ ಬಣ್ಣದ ರಂಗು ಮತ್ತಷ್ಟು ರಂಗು ಪಡೆಯಲಿದೆ. ಹಳಪೇಟ, ಜೈನ್‌ಪೇಟ ಮತ್ತು ವೆಂಕಟಪೇಟ ಬಣ್ಣದೋಕುಳಿ ನಡೆಯಲಿದೆ. ಓಣಿಗಳಲ್ಲಿ ಓಕುಳಿ ಆಡಿದ ನಂತರ ಬಣ್ಣದ ಬಂಡಿಗಳು ಬಸವೇಶ್ವರ ವೃತ್ತದಿಂದ ಕಾಲೇಜು ವೃತ್ತದ ವರೆಗೆ ಎದುರು ಬದುರು ಸಮಾಗಮಗೊಳ್ಳಲಿವೆ. ಪರಸ್ಪರ ಬಣ್ಣ ಎರೆಚುವ ಮೂಲಕ ಹಬ್ಬದ ರಂಗು ಮತ್ತೇರುವಂತೆ ಮಾಡುತ್ತಾರೆ. ಆಕರ್ಷಕವಾದ ಈ ದೃಶ್ಯವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಜನರು ರಸ್ತೆಯ ಎಡಬದಿಯಲ್ಲಿ ಗುಂಪು ಗುಂಪಾಗಿ ಸೇರುವ ನಿರೀಕ್ಷೆ ಇದೆ.