

ರಾಣೆಬೆನ್ನೂರ: ತಹಸೀಲ್ದಾರ್ ಕಾರ್ಯವೈಖರಿ ಬಗ್ಗೆ ತಾಲೂಕು ಪಂಚಾಯಿತಿ ಸದಸ್ಯರು ಮಂಗಳವಾರ ಸಾಮಾನ್ಯ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಚೈತ್ರಾ ಮಾಗನೂರ ಮಾತನಾಡಿ, ವೃದ್ಧಾಪ್ಯ, ವಿಧವಾ ವೇತನ ಸೇರಿ ಸರ್ಕಾರದ ಯಾವ ಸಹಾಯಧನವೂ ಫಲಾನುಭವಿಗಳಿಗೆ ದೊರೆಯುತ್ತಿಲ್ಲ. ಒಂದು ಪಡಿತರ ಚೀಟಿ ಕೆಲಸಕ್ಕಾಗಿ ಒಂದೂವರೆ ವರ್ಷದಿಂದ ಅಲೆದಾಡಿದರೂ ಸಿಗುತ್ತಿಲ್ಲ. ತಹಸೀಲ್ದಾರ್ ಕಚೇರಿಯಲ್ಲಿ ಕೆಲಸಗಳು ಆಗುತ್ತಿಲ್ಲ. ನೀವೇನು ಮಾಡುತ್ತಿದ್ದೀರಿ? ಎಂದು ಪ್ರಶ್ನಿಸಿದರು.
ರುಪ್ಲಪ್ಪ ಹಂಚಿನಮನಿ ಮಾತನಾಡಿ, ಕಾಕೋಳದ ಅಂಗವಿಕಲೆ ಹೇಮವ್ವ ಲಮಾಣಿ ಎಂಬುವರ ಮನೆ 2019ರ ಮಳೆಗೆ ಬಿದ್ದಿದೆ. ಈವರೆಗೂ ಅವರಿಗೆ ಪರಿಹಾರ ಸಿಕ್ಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭರಮಪ್ಪ ಊರ್ವಿು ಮಾತನಾಡಿ, ಎಲೆಬಳ್ಳಿ ಹಾಳಾದ ರೈತರಿಗೆ ಪರಿಹಾರ ನೀಡಲು ಆಗ್ರಹಿಸಿದರು.
ಪ್ರತಿಕ್ರಿಯಿಸಿದ ತಹಸೀಲ್ದಾರ್ ಬಸನಗೌಡ ಕೋಟೂರ, ಎಲೆಬಳ್ಳಿ ತೋಟ ಹಾನಿ ಪ್ರಕರಣ ನಡೆದಾಗ ನಾನಿರಲಿಲ್ಲ. ಈ ಬಗ್ಗೆ ಏನಾಗಿದೆ ಎಂಬುದನ್ನು ತಿಳಿದು ವರದಿ ಸರ್ಕಾರಕ್ಕೆ ಸಲ್ಲಿಸುತ್ತೇನೆ. ವೃದ್ಧಾಪ್ಯ, ವಿಧವಾ ವೇತನ ವಿತರಣೆಯಲ್ಲಿ ಫಲಾನುಭವಿಗಳ ದಾಖಲಾತಿ ಕೊರತೆಯಿಂದ ತಡವಾಗುತ್ತಿದೆ. ಇದು ಇಡೀ ರಾಜ್ಯದಲ್ಲಿಯೇ ಸಮಸ್ಯೆ ಆಗಿದೆ. ಕಾಕೋಳದಲ್ಲಿ ಮನೆ ಬಿದ್ದಿರುವ ಮಹಿಳೆಗೆ ಪರಿಹಾರ ಕೊಡಿಸುವಲ್ಲಿ ಎಲ್ಲ ಕಾರ್ಯವೂ ನಡೆದಿದೆ. ಪರಿಹಾರ ಖಂಡಿತ ಬರುತ್ತದೆ ಎಂದರು. ರಾಮಪ್ಪ ಬೆನ್ನೂರ ಮಾತನಾಡಿ, ಕರೂರ ಗ್ರಾಮದ ಪರಿಶಿಷ್ಟ ಪಂಗಡದವರ ಓಣಿಯಲ್ಲಿ 25 ಲಕ್ಷ ರೂ. ವೆಚ್ಚದಲ್ಲಿ ರಸ್ತೆ, ಗಟಾರು ನಿರ್ವಿುಸಲಾಗಿದೆ ಎಂದು ವರದಿ ನೀಡಿದ್ದೀರಿ. ಆದರೆ, ರಸ್ತೆ, ಗಟಾರು ಎಲ್ಲಿ ಮಾಡಿದ್ದೀರಿ ಎಂಬುದನ್ನು ತೋರಿಸಿ. ಕಾಮಗಾರಿ ಕೈಗೊಳ್ಳದೇ ಬಿಲ್ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಉತ್ತರಿಸಿದ ಎಇಇ ಆರ್. ಮಂಜುನಾಥ, ‘ನಾನು ಹೊಸದಾಗಿ ಬಂದಿದ್ದೇನೆ. ಈ ಬಗ್ಗೆ ಪರಿಶೀಲಿಸಿ ವರದಿ ಕೊಡುತ್ತೇನೆ’ ಎಂದರು.
ಅಧ್ಯಕ್ಷೆ ಗೀತಾ ಲಮಾಣಿ, ಉಪಾಧ್ಯಕ್ಷೆ ಕಸ್ತೂರವ್ವ ಹೊನ್ನಾಳಿ, ಸ್ಥಾಯಿ ಸಮಿತಿ ಅಧ್ಯಕ್ಷ ರಾಜು ಸೂರ್ವೆ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
ಸದಸ್ಯರ ನಡುವೆ ವಾಗ್ವಾದ: ತಹಸೀಲ್ದಾರ್ ಅವರನ್ನು ಸಾಮಾನ್ಯ ಸಭೆಗೆ ಕರೆಸುವ ವಿಚಾರವಾಗಿ ಸದಸ್ಯರ ನಡುವೆ ವಾಗ್ವಾದ ನಡೆಯಿತು.
ಸಭೆ ಆರಂಭದಲ್ಲಿ ಭರಮಪ್ಪ ಊರ್ವಿು ಮಾತನಾಡಿ, 2019ರಲ್ಲಿ ಉಂಟಾದ ಅತಿವೃಷ್ಟಿಯಿಂದ ತಾಲೂಕಿನ ದೇವರಗುಡ್ಡ, ಕೆರಿಮಲ್ಲಾಪುರ ಸೇರಿ ವಿವಿಧ ಗ್ರಾಮಗಳ 128 ರೈತರ 120 ಎಕರೆ ಎಲೆಬಳ್ಳಿ ತೋಟ ಹಾಳಾಗಿದೆ. ಈ ಬಗ್ಗೆ ತೋಟಗಾರಿಕೆ, ಕಂದಾಯ ಇಲಾಖೆಯವರು ಜಂಟಿ ಸಮೀಕ್ಷೆ ನಡೆಸಿ ತಹಸೀಲ್ದಾರ್ಗೆ ವರದಿ ಸಲ್ಲಿಸಿದ್ದಾರೆ. ಆದರೆ, ತಹಸೀಲ್ದಾರರು ಸರ್ಕಾರಕ್ಕೆ ವರದಿ ಸಲ್ಲಿಸದ ಕಾರಣ ರೈತರಿಗೆ ಈವರೆಗೂ ಪರಿಹಾರ ಬಂದಿಲ್ಲ. ಈ ಬಗ್ಗೆ ತಹಸೀಲ್ದಾರ್ ಅವರೊಂದಿಗೆ ರ್ಚಚಿಸಬೇಕಿದೆ. ಪ್ರತಿ ಬಾರಿ ತಹಸೀಲ್ದಾರರು ಸಭೆಗೆ ಬರುತ್ತಿಲ್ಲ. ಆದ್ದರಿಂದ ಅವರು ಬಂದ ಬಳಿಕವೇ ಸಭೆ ಆರಂಭಿಸಬೇಕು ಎಂದು ಪಟ್ಟು ಹಿಡಿದರು.
ತಕ್ಷಣವೇ ಇಒ ಎಸ್.ಎಂ. ಕಾಂಬಳೆ ಅವರು ತಹಸೀಲ್ದಾರ್ ಬಸನಗೌಡ ಕೋಟೂರ ಅವರಿಗೆ ಕರೆ ಮಾಡಿದರು. ‘ತಹಸೀಲ್ದಾರರು ಬೆಳೆ ಸಮೀಕ್ಷೆ ಕಾರ್ಯದಲ್ಲಿದ್ದು, ಅವರು ಸ್ವಲ್ಪ ಹೊತ್ತು ಬಿಟ್ಟು ಬರಲಿದ್ದಾರೆ’ ಎಂದರು. ಇದಕ್ಕೆ ಒಪ್ಪದ ಭರಮಪ್ಪ ಊರ್ವಿು, ಅವರು ಬಂದ ಮೇಲೆ ಸಭೆ ನಡೆಸಬೇಕು ಎಂದು ಮತ್ತೆ ಪಟ್ಟುಹಿಡಿದರು. ಇದರಿಂದಾಗಿ ಕೆರಳಿದ ಮತ್ತೊಬ್ಬ ಸದಸ್ಯ ಕರಿಯಪ್ಪ ತೋಟಗೇರ, ‘ತಹಸೀಲ್ದಾರ್ ಬರುವುದಾಗಿ ಹೇಳಿದ್ದಾರೆ. ಅವರು ಬರುವವರೆಗೆ ಬೇರೆ ವಿಷಯ ರ್ಚಚಿಸೋಣ. ಸಮಯ ಹಾಳು ಮಾಡುವುದು ಬೇಡ’ ಎಂದರು. ಈ ಸಂದರ್ಭದಲ್ಲಿ ಕೆಲ ಸದಸ್ಯರ ನಡುವೆ ವಾಗ್ವಾದ ನಡೆಯಿತು. ನಂತರ ಇಒ ಎಸ್.ಎಂ. ಕಾಂಬಳೆ ಎಲ್ಲರನ್ನೂ ಸಮಾಧಾನ ಪಡಿಸಿ ಸಭೆ ಆರಂಭಿಸಿದರು.
ನೀರಿನ ಘಟಕ ಸರಿಪಡಿಸಿ: ತಾಲೂಕಿನಲ್ಲಿ ಶುದ್ಧ ಕುಡಿಯುವ ನೀರಿನ 160 ಘಟಕಗಳನ್ನು ನಿರ್ವಿುಸಲಾಗಿದೆ. ಶೇ. 80ರಷ್ಟು ಘಟಕಗಳು ಕೆಟ್ಟಿವೆ. ಕರೊನಾ ಭೀತಿಯ ಸಮಯದಲ್ಲಿ ಜನರಿಗೆ ಶುದ್ಧ ನೀರಿನ ಅವಶ್ಯಕತೆಯಿದೆ. ಆದ್ದರಿಂದ ಎಲ್ಲವನ್ನೂ ದುರಸ್ತಿಪಡಿಸಬೇಕು ಎಂದು ನೀಲಕಂಠಪ್ಪ ಕೂಸಗೂರ ಒತ್ತಾಯಿಸಿದರು. ಪ್ರತಿಕ್ರಿಯಿಸಿದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಂಜಿನಿಯರಿಂಗ್ ವಿಭಾಗದ ಎಇಇ ಮಾಲತೇಶ, 160ರಲ್ಲಿ 33 ಘಟಕಗಳನ್ನು ಖಾಸಗಿಯವರು ನಿರ್ವಹಿಸುತ್ತಿದ್ದಾರೆ. ಸೂಕ್ತ ನಿರ್ವಹಣೆ ಇಲ್ಲದ ಕಾರಣ ಸಮಸ್ಯೆಯಾಗುತ್ತಿದೆ. ಈ ಬಗ್ಗೆ ಅವರಿಗೆ ಸೂಚಿಸಿ ಸರಿಪಡಿಸಲಾಗುವುದು ಎಂದರು.