ಕೊಲೆಗಾರನಿಗೆ 7 ವರ್ಷ ಜೈಲು

images
Published on

ವಿಜಯವಾಣಿ ಸುದ್ದಿಜಾಲ ಕಾರವಾರ

ಬಟ್ಟೆ ತೊಳೆಯುತ್ತಿದ್ದ ಮಹಿಳೆಯನ್ನು ಮರೆಯಲ್ಲಿ ಬೆತ್ತಲಾಗಿ ನಿಂತು ನೋಡಿ, ಆಕೆಯನ್ನು ಬೆನ್ನಟ್ಟಿದ್ದಲ್ಲದೆ, ಆತನನ್ನು ತಡೆದು, ಪ್ರಶ್ನಿಸಿದ ಮಹಿಳೆಯ ತಂದೆಯ ಕೊಲೆ ಮಾಡಿದ ಅಪರಾಧಿಗೆ 7 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 7 ಸಾವಿರ ದಂಡ ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯ ತೀರ್ಪು ನೀಡಿದೆ.
ಒರಿಸ್ಸಾ ಮೂಲದ ಆಕಾಶ ಓರಮ್ ಶಿಕ್ಷೆಗೊಳಗಾದ ವ್ಯಕ್ತಿ. ಗೋಕರ್ಣ ಸಮೀಪದ ತದಡಿಯಲ್ಲಿ ಮೀನುಗಾರಿಕೆಗಾಗಿ ಬಂದು ವಾಸ್ತವ್ಯ ಮಾಡಿದ್ದ ಆತ ಗ್ರಾಮದ ಅಭಿಜಟ್ಟಿಯ ವಿವೇಕಾನಂದ ಪುತ್ತು ಶಾನಭಾಗ ಅವರ ಮಗಳ ಜತೆ 2021 ರ ಸೆ. 24 ರಂದು ಬೆಳಗಿನಜಾವದ ಹೊತ್ತಲ್ಲಿ ಅಸಭ್ಯವಾಗಿ ವರ್ತಿಸಿದ್ದ. ಆತನನ್ನು ತಡೆದಾಗ ವಿವೇಕಾನಂದ ಶಾನಭಾಗ ಅವರ ಮೇಲೆ ಕಬ್ಬಿಣದ ಪಟ್ಟಿಯಿಂದ ಹಲ್ಲೆ ಮಾಡಿದ್ದ. ಗಂಭೀರವಾಗಿ ಗಾಯಗೊಂಡಿದ್ದ ವಿವೇಕಾನಂದ ಅವರು ಕುಮಟಾ ಆಸ್ಪತ್ರೆಗೆ ಕೊಂಡೊಯ್ಯುವ ಮಾರ್ಗದಲ್ಲಿ ಮೃತಪಟ್ಟಿದ್ದರು.
ಗೋಕರ್ಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆತನನ್ನು ಬಂಧಿಸಿ ನ್ಯಾಯಾಲಯದೆದುರು ಹಾಜರುಪಡಿಸಲಾಗಿತ್ತು. 22 ಸಾಕ್ಷ್ಯಗಳನ್ನು ವಿಚಾರಣೆ ನಡೆಸಿದ ಜಿಲ್ಲಾ ಪ್ರಧಾನ ಮತ್ತು ಸೆಶನ್ಸ್ ನ್ಯಾಯಾಧೀಶ ಡಿ.ಎಸ್.ವಿಜಯಕುಮಾರ್ ಅವರು ತೀರ್ಪು ಪ್ರಕಟಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ತನುಜಾ ಹೊಸಪಟ್ಟಣ ಹಾಗೂ ಹೆಚ್ಚಿನ ಶಿಕ್ಷೆ ವಿಧಿಸುವಂತೆ ಪ್ರಭಾರ ಸರ್ಕಾರಿ ಅಭಿಯೋಜಕ ರಾಜೇಶ ಮಳಗೀಕರ್ ಅವರು ವಾದ ಮಂಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net