ಕೊಲೆ ಅಪರಾಧಿಗೆ ಜೀವಾವಧಿ ಶಿಕ್ಷೆ

Published on

ಮಳವಳ್ಳಿ: ತಾಲೂಕಿನ ಬಿ.ಜಿ.ಪುರ ಹೋಬಳಿ ಚಿಕ್ಕಬಾಗಿಲು ಗ್ರಾಮದಲ್ಲಿ ವ್ಯಕ್ತಿಯೊಬ್ಬನನ್ನು ಕ್ರೂರವಾಗಿ ಕೊಲೆ ಮಾಡಿದ್ದ ಅಪರಾಧಿಗೆ ಜಿಲ್ಲಾ ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಚಿಕ್ಕಬಾಗಿಲು ಗ್ರಾಮದ ಪಶುಪತಿ ಶಿಕ್ಷೆಗೆ ಗುರಿಯಾದವ. ಈತ ಅದೇ ಗ್ರಾಮದ ಗಿರೀಶ್ ಎಂಬಾತನನ್ನು ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಧಿಸಿದಂತೆ ಶಿಕ್ಷೆಯಾಗಿದೆ.

ಘಟನೆ ವಿವರ: ಕೊಲೆಯಾದ ಗಿರೀಶ್ ಎಂಬಾತ ಅಪರಾಧಿ ಪಶುಪತಿ ತಾಯಿಯನ್ನು ನೋಡಿ ಕೆಟ್ಟ ರೀತಿಯಲ್ಲಿ ಸನ್ನೆ ಮಾಡಿದ್ದ ಎಂಬ ಕಾರಣಕ್ಕೆ ಆತನ ವಿರುದ್ಧ ದ್ವೇಷ ಸಾಧಿಸುತ್ತಿದ್ದ. 2018ರ ಅ.29ರಂದು ಗಿರೀಶ್‌ನನ್ನು ಜಮೀನಿನ ಬಳಿ ಕೆಲಸ ಮಾಡಲು ಕರೆದೊಯ್ದು ಆತನ ಮೇಲೆ ಪಶುಪತಿ ಹಲ್ಲೆ ನಡೆಸಿ ಕ್ರೂರವಾಗಿ ಕೊಲೆ ಮಾಡಿದ್ದ. ನಂತರ ಕೊಡಲಿಯಿಂದ ಆತನ ರುಂಡವನ್ನು ಕತ್ತರಿಸಿ ತನ್ನ ಬೈಕ್‌ನಲ್ಲಿ ಇಟ್ಟುಕೊಂಡು ಪಟ್ಟಣ ಠಾಣೆಗೆ ಹಾಜರಾಗಿ ತಾನೇ ಕೃತ್ಯವೆಸಗಿರುವುದಾಗಿ ಒಪ್ಪಿಕೊಂಡು ಪೊಲೀಸರಿಗೆ ಶರಣಾಗಿದ್ದ. ಈ ಸಂಬಂಧ ಬೆಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಗ್ರಾಮಾಂತ ವೃತ್ತ ನಿರೀಕ್ಷಕ ಆರ್.ಶ್ರೀಕಾಂತ್ ತನಿಖಾಧಿಕಾರಿಯಾಗಿ ಪ್ರಕರಣದ ಸಂಪೂರ್ಣ ತನಿಖೆ ನಡೆಸಿ ಆರೋಪಿಯ ವಿರುದ್ಧ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆಯು 2ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನಡೆದು ಆರೋಪಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು 2 ಲಕ್ಷ ರೂ. ದಂಡವನ್ನು ವಿಧಿಸಿದೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಎನ್.ಬಿ ವಿಜಯಲಕ್ಷ್ಮೀ ವಾದ ಮಂಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net