ಕೊಪ್ಪದಲ್ಲಿ ಕಾವೇರಿ ಮಾತೆಗೆ ವಿಶೇಷ ಪೂಜೆ

123740
Published on

ಬೈಲುಕುಪ್ಪೆ: ಕೊಡಗಿನ ಗಡಿಭಾಗದ ಕೊಪ್ಪ ಬಿ.ಎಂ.ರಸ್ತೆ ಪಕ್ಕದಲ್ಲಿ ಕಾವೇರಿ ಕನ್ನಡ ಸಂಘದ ವತಿಯಿಂದ ನಿರ್ಮಿಸಲಾಗಿರುವ ಕಾವೇರಿ ಮಾತೆ ಪ್ರತಿಮೆಗೆ 13ನೇ ವಾರ್ಷಿಕ ಮಹೋತ್ಸವದ ಅಂಗವಾಗಿ ಶನಿವಾರ ವಿಶೇಷ ಪೂಜೆ ಸಲ್ಲಿಸಲಾಯಿತು.

ಸಂಘದ ಅಧ್ಯಕ್ಷ ಬೇಬಿಂದ್ರ ಪ್ರಸಾದ್ ಸಮ್ಮುಖದಲ್ಲಿ ಅರ್ಚಕ ಪುರುಷೋತ್ತಮ ಭಟ್ ಮತ್ತು ತಂಡದವರಿಂದ ಕಾವೇರಿ ಪ್ರತಿಮೆಗೆ ವಿಶೇಷ ಪೂಜೆ ಸಲ್ಲಿಸಿ ನೆರೆದಿದ್ದ ಭಕ್ತರಿಗೆ ಭಾಗಮಂಡಲದ ತಲಕಾವೇರಿ ಪುಣ್ಯ ಕ್ಷೇತ್ರದಿಂದ ತಂದಿದ್ದ ತೀರ್ಥವನ್ನು ವಿತರಣೆ ಮಾಡಲಾಯಿತು.

ತಲಕಾವೇರಿಯ ತುಲಾ ಸಂಕ್ರಮಣದ ತೀರ್ಥೋದ್ಭವದ ಬಳಿಕ ಪ್ರತಿ ವರ್ಷ ಕಾವೇರಿ ಪ್ರತಿಮೆಗೆ ಪೂಜೆ ಸಲ್ಲಿಸಿ ನಂತರ ತೀರ್ಥ ವಿತರಣಾ ಕಾರ್ಯಕ್ರಮವನ್ನು ನಡೆಸಿಕೊಂಡು ಬರಲಾಗುತ್ತಿದೆ. ಈ ಬಾರಿ ಕಾವೇರಿ ಮಾತೆಯನ್ನು ವಿಶೇಷವಾಗಿ ಪುಷ್ಪಗಳಿಂದ ಅಲಂಕರಿಸಿ ಕಾವೇರಿ ತೀರ್ಥ ಪ್ರಸಾದವನ್ನು ತಾಲೂಕಿನ ವಿವಿಧ ಭಾಗಗಳಿಂದ ಬಂದ ಭಕ್ತರಿಗೆ ವಿತರಿಸಲಾಯಿತು.

ತಲಕಾವೇರಿಯಲ್ಲಿ ಅ.17ರಂದು ತೀರ್ಥೋದ್ಭವವಾದ ಬಳಿಕ ಶ್ರೀಬಾರವಿ ಕಾವೇರಿ ಕನ್ನಡ ಸಂಘದ ಪದಾಧಿಕಾರಿಗಳು ಕಾವೇರಿ ತೀರ್ಥವನ್ನು ಸಂಗ್ರಹಿಸಿ ಕೊಪ್ಪ ಗ್ರಾಮಕ್ಕೆ ತೆಗೆದುಕೊಂಡು ಬಂದು ಮುಂಜಾನೆಯಿಂದಲೇ ವಿವಿಧ ಹೋಮ, ಕಳಸ ಕಟ್ಟುವುದು, ಕಾವೇರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು, ಮಧ್ಯಾಹ್ನ ಅನ್ನದಾನ ನಡೆಯಿತು.

ಸಂಘದ ಪದಾಧಿಕಾರಿಗಳಾದ ರವೀಂದ್ರ ಪ್ರಸಾದ್ ವಿಜೇಂದ್ರ ಪ್ರಸಾದ್, ಕುಶಾಲನಗರದ ತಹಸೀಲ್ದಾರ್ ಕಿರಣ್ ಗೌಡ, ಮುಖಂಡರಾದ ಅವರ್ತಿ ಸೋಮಶೇಖರ್, ಮಂಜು, ಸತೀಶ್, ಬೆಮ್ಮತ್ತಿ ಚಂದ್ರು, ಚಂದ್ರನ್, ಕೌಶಿಕ್, ಸುನಂದ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net