ಕೊನೆಗೂ ತಂಪೆರೆದ ಮಳೆರಾಯ

bkt-24-12 (1)
Published on

ಬಾಗಲಕೋಟೆ: ಮುಂಗಾರು ಮಳೆ ಇಲ್ಲದೇ ಕಂಗಾಲಾಗಿ ನಿತ್ಯ ಆಕಾಶದ ಕಡೆಗೆ ಮುಖ ಮಾಡುತ್ತಿದ್ದ ಜನರಿಗೆ ಶನಿವಾರ ವರುಣ ದರ್ಶನ ಆಗಿದೆ. ಬಾಗಲಕೋಟೆ ನಗರ ಸೇರಿದಂತೆ ಜಿಲ್ಲೆಯ ಕೆಲವಡೆ ಮಳೆರಾಯ ಭೂಮಿಗೆ ತಂಪೆರೆದಿದ್ದಾನೆ.

ಮೇ ಅಂತ್ಯದಿಂದ ಜೂನ್ ತಿಂಗಳು ಈ ವರೆಗೂ ಮಳೆಯ ಸುಳಿವೆ ಇರಲಿಲ್ಲ. ಮಧ್ಯ ಅಲ್ಲೊಂದು ಇಲ್ಲೊಂದು ಕಡೆಗೆ ಮಳೆ ಆಗಿದ್ದರೂ ಭೂಮಿ ತಂಪುಗೊಳಿಸಿದ್ದಕ್ಕಿಂತ ಹಾನಿ ಆಗಿದ್ದೆ ಜಾಸ್ತಿ.

ಮುಂಗಾರು ಬಿತ್ತನೆ ಇಲ್ಲದೇ ಕೃಷಿ ಚಟುವಟಿಕೆಗಳಿಗೂ ಬ್ರೇಕï ಬಿದ್ದು ದಿಕ್ಕು ತೋಚದೇ ಕುಳಿತಿದ್ದ ಅನ್ನದಾತರಿಗೆ ಶನಿವಾರ ಭಾರಿ ಅಲ್ಲದಿದ್ದರೂ ಮುಂಗಾರು ಮಳೆ ಸುರಿಯುವ ಲಕ್ಷಣಗಳು ಗೋಚರಿಸಿದ್ದು, ಸುತು ಸಮಾಧಾನ ತಂದಿದೆ.

ಬಾಗಲಕೋಟೆ ನಗರ, ಹುನಗುಂದ ತಾಲೂಕಿನ ಕಮತಗಿ ಸುತ್ತಮುತ್ತ ಮಳೆ ಸುರಿದಿತ್ತು. ಶನಿವಾರ ವರುಣ ದರ್ಶನ ಮುಂದುವರೆದು, ಬಾಗಲಕೋಟೆ ನಗರ ಸೇರಿದಂತೆ ಇಳಕಲ್ಲ, ಬೀಳಗಿ ತಾಲೂಕಿನ ಕೆಲವಡೆ ಧಾರಾಕಾರ ಮಳೆ ಆಗಿರುವ ವರದಿಯಾಗಿದೆ. ಮಳೆಯ ಜೊತೆಗೆ ಗುಡುಗು, ಸಿಡಿಲಿನ ಅಬ್ಬರವೂ ನಡೆದು, ಮುಧೋಳ ತಾಲೂಕಿನ ಆಲಗುಂಡಿ ಬಿಕೆ ಗ್ರಾಮದಲ್ಲಿ ೩೫ ವರ್ಷದ ಬಸಪ್ಪ ಮಾದರ ಎನ್ನುವವರು ಮೃತಪಟ್ಟಿದ್ದು, ವಿಠ್ಠಲ ಮಾದರ ಎನ್ನುವವರಿಗೆ ಗಾಯವಾಗಿದೆ.

ಜಿಲ್ಲೆಯಲ್ಲಿ ಮುಂಗಾರು ಆರಂಭ ಸಂಪೂರ್ಣ ಕೈಕೊಟ್ಟಿದ್ದರಿಂದ ಈಗಾಗಲೇ ನದಿ, ಕೆರೆ, ಕಟ್ಟೆಗಳು ಖಾಲಿಯಾಗಿ ಕುಡಿವ ನೀರಿಗೂ ಸಮಸ್ಯೆಗೂ ಎದುರಾಗಿದೆ. ಮಳೆ ಇಲ್ಲದೇ ಬಿತ್ತನೆ ಕಾರ್ಯಕ್ಕೆ ತೀವ್ರ ಹಿನ್ನೆಡೆ ಆಗಿದೆ. ಮುಖ್ಯವಾಗಿ ಜಿಲ್ಲೆಯಲ್ಲಿ ಪ್ರತಿ ವರ್ಷ ೩೦ ಸಾವಿರ ಹೆಕ್ಟೇರ ನಷ್ಟು ಬಿತ್ತನೆ ಆಗುತ್ತಿದ್ದ ಹೆಸರಿಗೆ ಭೂಮಿ ಹಸಿಯಾಗದೇ ಭೂಮಿಗೆ ಹೆಸರು ಬೀಜವೇ ಬಿದ್ದಿಲ್ಲ. ತಡವಾಗಿಯಾದರೂ ಮುಂಗಾರು ಆರಂಭಗೊಂಡಲ್ಲಿ ಜೋಳ, ಸಜ್ಜಿ, ಸೂರ್ಯಕಾಂತಿ, ಮೆಕ್ಕೆಜೋಳ, ತೊಗರಿ ಇತ್ಯಾದಿ ಬೆಳೆಗಳನ್ನು ಬೆಳೆಯಲು ರೈತರು ಆಕಾಶದ ಕಡೆಗೆ ಮುಖನೆಟ್ಟಿದ್ದಾರೆ.

ಶನಿವಾರ ಮಳೆಯಾಗಿದ್ದು, ಇನ್ನಷ್ಟು ಮಳೆ ಮುಂದುವರೆದಲ್ಲಿ ಸ್ಥಗಿತವಾಗಿರುವ ಕೃಷಿ ಚಟುವಟಿಕೆಗಳು ಮತ್ತೆ ಗರಿಗೆದರಲಿವೆ. ಮುಖ್ಯವಾಗಿ ಕುಡಿವ ನೀರು, ಜಾನುವಾರುಗಳಿಗೆ ಮೇವಿನ ಅಭಾವ ನೀಗಿಸಲು ಅನುಕೂಲವಾಗಲಿದೆ. ಹೀಗಾಗಿ ತಡವಾಗಿದ್ದರೂ ಕರುಣೆ ತೋರು ಮಳೆರಾಯ ಎಂದು ಜಿಲ್ಲೆಯ ಬಹುತೇಕ ಕಡೆಗೆ ಹಲವು ದಿನಗಳಿಂದ ಜನರು ದೇವರಿಗೆ ಮೊರೆ, ಗುರ್ಜಿ ಹಾಡು, ಕತ್ತೆಗಳ ಮದುವೆ, ದೇವರಿಗೆ ಜಲಾಭಿಷೇಕ ಹೀಗೆ ಭಿನ್ನ ವಿಭಿನ್ನ ಆಚರಣೆಗನ್ನು ಆಚರಿಸುತ್ತಿದ್ದಾರೆ.

ಸದ್ಯಕ್ಕೆ ಕಾದು ಕಬ್ಬಿಣದಂಚಿನಂತಾಗಿರುವ ಭೂಮಿಯನ್ನು ತಂಪಾಗಿಸಲು ವರುಣ ಅಬ್ಬರಿಸುವ ದಾರಿಯನ್ನು ರೈತರು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಶನಿವಾರ ಮಳೆರಾಯ ಶುಭಸೂಚನೆಯನ್ನಂತೂ ಕೊಟ್ಟಾಗಿದೆ. ಇದರ ಜೊತೆಗೆ ಒಂದು ದೊಡ್ಡ ಮಳೆ ಸುರಿದು ಭೂಮಿ ಹದಗೊಂಡರೆ ಬಿತ್ತನೆ ಕಾರ್ಯ ಆರಂಭವಾಗಲಿದೆ.

ಹಾಗೆಯೇ ಜಿಲ್ಲೆಯಲ್ಲಿ ಸಮೃದ್ದ ಮಳೆ ಆಗುವುದರ ಜೊತೆಗೆ ಮಹಾರಾಷ್ಟ್ರದಲ್ಲೂ ವರುಣನ ಆರ್ಭಟ ನಡೆಯಲಿ ಎನ್ನುವುದು ಜಿಲ್ಲೆಯ ಜನರ ಪ್ರಾರ್ಥನೆಯಾಗಿದೆ. ಅಲ್ಲಿ ಮಳೆ ಅಬ್ಬರಿಸಿದರೆ ಕೃಷ್ಣಾ ನದಿಗೆ ನೀರು ಹರಿದು ಬಂದು ಬತ್ತಿರುವ ಕೃಷ್ಣೆಯ ಒಡಲು ತುಂಬಿಕೊಳ್ಳುತ್ತದೆ. ನದಿಪಾತ್ರಗಳ ಗ್ರಾಮಗಳ ಜಮೀನುಗಳಿಗೆ, ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ನೀಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net