

ಶ್ರೀಮಂಗಲ: ತಮ್ಮ ಜನಾಂಗದ ಏಳಿಗೆಗಾಗಿ ಕೊಡವ ಸಮಾಜ ಸೇವಾ ಕೇಂದ್ರವಾಗಿ ಕೆಲಸ ಮಾಡಬೇಕೆಂದು ವಿರಾಜಪೇಟೆ ಶಾಸಕ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಸಲಹೆ ನೀಡಿದರು.
ಪೊನ್ನಂಪೇಟೆ ಕೊಡವ ಸಮಾಜದ ಆಶ್ರಯದಲ್ಲಿ ಶುಕ್ರವಾರ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ನಾನು ಜಾತಿವಾದಿಯಲ್ಲ. ಅದರ ವಿರೋಧಿಯೂ ಅಲ್ಲ. ಜಾತಿ ಆಧಾರದಲ್ಲಿ ಸಮಾಜವನ್ನು ಒಡೆಯುವ ಕೆಲಸವನ್ನು ಎಂದೂ ಮಾಡುವುದಿಲ್ಲ. ಎಲ್ಲ ಜನಾಂಗಗಳು ತಮ್ಮ ಸಂಸ್ಕೃತಿ, ಆಚಾರ, ವಿಚಾರಗಳ ಸಂರಕ್ಷಣೆ ಸೌಹಾರ್ದತೆ ಮತ್ತು ಸಾಮರಸ್ಯದೊಂದಿಗೆ ಕೆಲಸ ಮಾಡುವುದಾದರೆ ಅದಕ್ಕೆ ನನ್ನ ಬೆಂಬಲವಿದೆ ಎಂದು ಹೇಳಿದರು.
ನನಗೆ ಯಾರು ಮತ ಹಾಕಿದ್ದಾರೆ ಅಥವಾ ಹಾಕಿಲ್ಲ ಎಂಬ ಚರ್ಚೆ ಈಗ ಆಪ್ರಸ್ತುತ. ಕೊಡಗಿನ ಸಮಗ್ರ ಅಭಿವೃದ್ಧಿ, ಎಲ್ಲರ ಏಳಿಗೆಗಾಗಿ ಕೆಲಸ ಮಾಡುತ್ತೇನೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ಹೇಳಿದರು.
ಅಧ್ಯಕ್ಷತೆಯನ್ನು ಕೊಡವ ಸಮಾಜ ಅಧ್ಯಕ್ಷ ಕಾಳಿಮಾಡ ಮೋಟಯ್ಯ ವಹಿಸಿದ್ದರು. ಸಮಾಜದ ನಿರ್ದೇಶಕಿ ಚೊಟ್ಟೆಕಾಳಪಂಡ ಆಶಾ ಪ್ರಕಾಶ್, ಉಪಾಧ್ಯಕ್ಷೆ ಚಿರಿಯಪಂಡ ಇಮ್ಮಿ ಉತ್ತಪ್ಪ ಸ್ವಾಗತಿಸಿ ,ಗೌರವ ಕಾರ್ಯದರ್ಶಿ ಕೋಟೆರ ಕಿಶನ್ ಉತ್ತಪ್ಪ, ಖಜಾಂಚಿ ಕಳ್ಳಿಚಂಡ ಕಟ್ಟಿ ಪೂಣಚ್ಚ, ಕೊಡವ ಸಮಾಜ ನ್ಯಾಯಪೀಠ ಅಧ್ಯಕ್ಷ ಚಿರಿಯಪಂಡ ಉಮೇಶ್ ಸಹಕಾರ್ಯದರ್ಶಿ ಆಲೇಮಾಡ ಸುಧೀರ್, ಆಡಳಿತ ಮಂಡಳಿ ನಿರ್ದೇಶಕರಾದ ಮೂಕಳೇರ ಕಾವ್ಯ ಕಾವೇರಮ್ಮ, ಕೊಣಿಯಂಡ ಸಂಜು ಸೋಮಯ್ಯ, ಅಡ್ಡಂಡ ಸುನಿಲ್ ಸೋಮಯ್ಯ, ಮೂಕಳಮಾಡ ಅರಸು ನಂಜಪ್ಪ, ಚೊಟ್ಟೆಕಾಳಪಂಡ ಆಶಾ ಪ್ರಕಾಶ್, ಚೆಪ್ಪುಡೀರ ರಾಕೇಶ್, ದೇವಯ್ಯ, ಚೀರಂಡ ಕಂದಾ ಸುಬ್ಬಯ್ಯ ಇತರರಿದ್ದರು.