

ಭಟ್ಕಳ: ತಾಲೂಕಿನಲ್ಲಿ ಸುರಿದ ಮಿತಿ ಮೀರಿದ ಮಳೆಯಿಂದ ಕೊಂಕಣ ರೈಲ್ವೆ ಮಾರ್ಗದ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.
ಮುರ್ಡೇಶ್ವರ ಮತ್ತು ಭಟ್ಕಳ ರೈಲು ನಿಲ್ದಾಣದ ನಡುವೆ ಹಳಿಗಳ ಮೇಲೆ ನೀರು ನಿಂತಿದೆ.ಕೆಲವೆಡೆ ಹಳಿಗಳ ಮೇಲೆ ಮಣ್ಣು ಕುಸಿದಿದೆ. ಹಳಿಯ ಅಡಿಗಿನ ಜಲ್ಲಿ ಕಲ್ಲುಗಳು ಕೊಚ್ಚಿ ಹೋಗಿವೆ. ಇದರಿಂದ ಕೆಲ ರೈಲು ಓಡಾಟವನ್ನು ರದ್ದು ಮಾಡಲಾಗಿದೆ.ಇನ್ನು ಕೆಲವು ರೈಲುಗಳನ್ನು ಅರ್ಧಕ್ಕೇ ನಿಲ್ಲಿಸಲಾಗಿದೆ.
ರೈಲು ಸಂಖ್ಯೆ 06602 ಮಂಗಳೂರು- ಮಡಗಾಂವ್ ವಿಶೇಷ ರೈಲನ್ನು ಉಡುಪಿ ನಿಲ್ದಾಣದವರೆಗೆ ಮಾತ್ರ ಓಡಿಸಲಾಗುತ್ತಿದೆ. ರೈಲು ಸಂಖ್ಯೆ 06601 ವಿಶೇಷ ರೈಲಿನ ಸಂಚಾರವನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ. ರೈಲು ಸಂಖ್ಯೆ 11098 ಎರ್ನಾಕುಲಂ- ಪುಣೆ ಎಕ್ಸ್‌ಪ್ರೆಸ್ ರೈಲು ಭಟ್ಕಳ ನಿಲ್ದಾಣದಲ್ಲಿ ನಿಂತಿದೆ. ರೈಲು ಸಂಖ್ಯೆ 16595 ಬೆಂಗಳೂರು ಸಿಟಿ ಜಂಕ್ಷನ್- ಕಾರವಾರ ಎಕ್ಸ್‌ಪ್ರೆಸ್ ಅನ್ನು ಶಿರೂರು ನಿಲ್ದಾಣದಲ್ಲಿ ನಿಲ್ಲಿಸಲಾಗಿದೆ. ರೈಲು ಸಂಖ್ಯೆ 16334 ತ್ರಿವೇಂದ್ರಮ್- ವೇರವಲ್ ಎಕ್ಸ್‌ಪ್ರೆಸ್ ಸೇನಾಪುರ ನಿಲ್ದಾಣದಲ್ಲಿ, ರೈಲು ಸಂಖ್ಯೆ 12201 ಮುಂಬೈ ಲೋಕಮಾನ್ಯ ತಿಲಕ್ ಟರ್ಮಿನಲ್- ಕೊಚ್ಚುವೇಲಿ ಎಕ್ಸ್‌ಪ್ರೆಸ್ ಅಂಕೋಲಾ ನಿಲ್ದಾಣದಲ್ಲಿ ಹಾಗೂ ರೈಲು ಸಂಖ್ಯೆ 16516 ಕಾರವಾರ- ಯಶವಂತಪುರ ಎಕ್ಸ್‌ಪ್ರೆಸ್ ಹೊನ್ನಾವರ ನಿಲ್ದಾಣದಲ್ಲಿ ನಿಲುಗಡೆಗೊಂಡಿದೆ.