

ಬಾಗಲಕೋಟೆ: ಹುಲಿ ಉಗುರಿನ ಪೆಂಡೆಂಟ್ ಬಗ್ಗೆ ರಾಜ್ಯದಲ್ಲಿ ಕಾವೇರಿದ ಚರ್ಚೆ ನಡೆದಿದ್ದು, ಕಾನೂನಾತ್ಮಕವಾಗಿ ಕೆಲವರಿಗೆ ಅದು ಬಿಗಿ ಉರುಳು ಆಗುತ್ತಿದ್ದಂತೆ ಅನೇಕರು ಸದ್ದಿಲ್ಲದೇ ಟೈಗರ್ ಪಂಜಆ ಮಾದರಿ ಪೆಂಡೆಂಟ್ ಇರುವ ಶೋಕಿ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಿಂದ ತೆಗೆದುಹಾಕುತ್ತಿದ್ದಾರೆ.
ಇದೀಗ ಜಿಲ್ಲೆಯ ಕಾಂಗ್ರೆಸ್ ಮುಖಂಡ, ವಿಜಯಪುರ-ಬಾಗಲಕೋಟೆ ಹಾಲು ಒಕ್ಕೂಟದ ನಿರ್ದೇಶಕ ಸಂಜಯ ತಳೇವಾಡ ಅವರಿಗೂ ಈ ಹುಲಿ ಉಗುರಿನ ಹೋಲಿಕೆಯ ಪೆಂಡೆಂಟ್‌ನ್ನು ಕೊರಳಿಗೆ ಹಾಕಿಕೊಂಡಿರುವ ಪೋಟೋ ತಗಲಾಕಿಕೊಂಡಿದೆ.
ಮುಧೋಳ ತಾಲೂಕಿನ ಜಂಬಗಿ ಕೆಡಿ ಗ್ರಾಮದ ಸಂಜಯ ಹಲವು ದಿನಗಳಿಂದ ತಮ್ಮ ಫೇಸ್ ಬುಕ್ ಪ್ರೋಫೈಲ್‌ನಲ್ಲಿ ಟೈಗರ ಪಂಜಾ ಹೋಲಿಕೆಯ ಪೆಂಡೆಂಟ್‌ಇರುವ ಚಿನ್ನದ ಸರ ಕೊರಳಿಗೆ ಹಾಕಿಕೊಂಡಿದ್ದ ಪೋಟೋ ಇಟ್ಟುಕೊಂಡಿದ್ದರು. ಗುರುವಾರ ಬೆಳಗ್ಗೆ ವರೆಗೂ ಅದು ಇತ್ತು ಕೂಡ. ಯಾವಾಗ ಟೈಗರ್ ಪಂಜಾ ಹಲವರಿಗೆ ಪರಚುತ್ತಿದೆ ಎಂದು ಗೊತ್ತಾಗುತ್ತಿದ್ದಂತೆ ಗುರುವಾರ ಬೆಳಗ್ಗೆ ಪ್ರೋಫೈಲ ಪೋಟೋ ಮಾಯವಾಗಿದೆ.
ಆದರೆ, ಸಂಜಯ ಅವರ ಕೊರಳಿಲ್ಲಿದ್ದ ಹುಲಿ ಉಗುರು ಪೆಂಡೆಂಟ್ ಅಸಲಿಯೋ ಅಥವಾ ನಕಲಿಯೋ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಈ ಬಗ್ಗೆ ಪೊಲೀಸ್ ಹಾಗೂ ಅರಣ್ಯ ಇಲಾಖೆ ಅಽಕಾರಿಗಳಿಗೆ ಮೌಖಿಕ ದೂರುಗಳು ಬಂದಿದ್ದರಿಂದ ಗುರುವಾರ ಸಂಜಯ ಅವರ ಮನೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ, ಲಿಖಿತ ನೋಟಿಸ್ ಕೊಟ್ಟಿದ್ದಾರೆ.
ಹುಲಿ ಉಗುರು ಹೋಲಿಕೆಯ ಪೆಂಡೆಂಟ್‌ಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯಿಂದ ನೋಟಿಸ್ ಬಂದಿದ್ದು, ಶುಕ್ರವಾರ ಮುಧೋಳ ಅರಣ್ಯ ಇಲಾಖೆಗೆ ತೆರಳಿ ಲಿಖಿತ ಉತ್ತರದೊಂದಿಗೆ ನನ್ನ ಬಳಿ ಇರುವ ಸಿಂಥೆಟಿಕ್ ಪೆಂಡೆಂಟ್‌ನ್ನು ಪರಿಶೀಲನೆಗಾಗಿ ಅಧಿಕಾರಿಗಳಿಗೆ ಕೊಡುವುದಾಗಿ ಸಂಜಯ ತಳೇವಾಡ ತಿಳಿಸಿದ್ದಾರೆ.