ಕೈ ಮೀರುತ್ತಿದೆ ಕರ್ನಾಟಕದ ಪರಿಸ್ಥಿತಿ: ಸರ್ಕಾರದ ಮಟ್ಟದಲ್ಲೇ ದ್ವಂದ್ವ, ಪೊಲೀಸರು ಲಾಠಿ ಎತ್ತಿದರೂ ಆಕ್ಷೇಪ

Manvi Cross Bengaluru Returns Puldown
Published on

ಬೆಂಗಳೂರು: ರಕ್ಕಸ ಕರೊನಾ ಹತ್ತಿಕ್ಕಲು ರಾಜ್ಯ ಸರ್ಕಾರ ನಡೆಸುತ್ತಿರುವ ಪ್ರಯತ್ನ ಹಲವು ದ್ವಂದ್ವ ತೀರ್ವನಗಳ ಕಾರಣಕ್ಕೆ ನಿರೀಕ್ಷಿತ ಮಟ್ಟದಲ್ಲಿ ಫಲ ನೀಡಿಲ್ಲ. ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಿಎಂ ಪ್ರತಿನಿತ್ಯ ಮೂರು ಬಾರಿ ಉಚ್ಚರಿಸಿದರೂ, ಪರಿಣಾಮಕಾರಿ ಅನುಷ್ಠಾನ ಸಾಧ್ಯವಾಗದೆ ಪರಿಸ್ಥಿತಿ ಕೈಮೀರುತ್ತಿರುವುದು ಸರ್ಕಾರದ ಗಮನಕ್ಕೂ ಬಂದಿದೆ. ಲಾಕ್​ಡೌನ್ ಸಂದರ್ಭದಲ್ಲಿ ಪ್ರಮುಖ ಗಮನ ನೀಡಬೇಕಾದ ಸಾರ್ವಜನಿಕ ಓಡಾಟಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸ್ಪಷ್ಟತೆ ಮೂಡಿಲ್ಲ. ಲಾಕ್​ಡೌನ್ ಪೂರ್ಣ ಪ್ರಮಾಣದಲ್ಲಿ ನಡೆಯಬೇಕೆಂದು ಪ್ರಧಾನಿಯೇ ಸೂಚಿಸಿದರೂ ಕೆಲವಕ್ಕೆ ರಿಯಾಯಿತಿ ಕೊಡಬೇಕೆಂದು ಪ್ರಧಾನಿ ಕಚೇರಿ ಹೇಳುತ್ತದೆ. ಹೀಗಾಗಿ ರಾಜ್ಯಕ್ಕೆ ಇದೊಂದು ಸವಾಲಾಗಿದೆ.

ಹಾಗೆಯೇ ರಾಜ್ಯಮಟ್ಟದಲ್ಲಿ ಕಠಿಣ ಕ್ರಮ ಅನುಸರಿಸಲು ಸಿಎಂ ಬಿ.ಎಸ್.ಯಡಿಯೂರಪ್ಪ ಮುಂದಾದರೂ, ಸಚಿವ ಸಂಪುಟ ಸಹೋದ್ಯೋಗಿಗಳೇ ವಿವಿಧ ವಿಚಾರದಲ್ಲಿ ವಿನಾಯಿತಿ ಕೇಳುತ್ತಿದ್ದಾರೆ. ರೇಷ್ಮೆ, ದ್ರಾಕ್ಷಿ, ಸೂಪರ್ ಮಾರ್ಕೆಟ್, ಫುಡ್ ಡೆಲವರಿ, ಗಡಿ, ಅನ್ಯರಾಜ್ಯ, ಕಾರ್ವಿುಕ ಎಂದು ‘ಅರ್ಹ’ ಕಾರಣ ನೀಡಿ ಪ್ರಯತ್ನ ಸಡಿಲಗೊಳಿಸುತ್ತಿದ್ದಾರೆ. ಮುಖ್ಯಮಂತ್ರಿಗಳಿಗೆ ಈ ಕೋರಿಕೆಯನ್ನು ಬದಿಗೆ ಸರಿಸಲು ಸಾಧ್ಯವಾಗುತ್ತಿಲ್ಲ. ಶುಕ್ರವಾರ ಸಂಪುಟ ಸಭೆಯಲ್ಲೂ ಈ ಬಗ್ಗೆ ಚರ್ಚೆ ನಡೆಯಿತು. ಜಿಲ್ಲಾ ಮಟ್ಟದಲ್ಲಿ ಆಗಬೇಕಾದ ಕೆಲವು ರಿಯಾಯಿತಿಗಳ ಬಗ್ಗೆ ಸಚಿವರು ಕೋರಿಕೆ ಇಟ್ಟಿದ್ದಾರೆ. ಅಗತ್ಯ ಸೇವೆ ನೀಡುವ ವ್ಯಾಪ್ತಿಯಲ್ಲಿ ಬರುವವರು ಪೊಲೀಸ್ ಮೂಲಕ ಪಾಸ್ ಪಡೆದವರಷ್ಟೇ ರಸ್ತೆಗಿಳಿಯಬಹುದು ಎಂಬ ಕಠಿಣ ಹಾದಿ ತುಳಿಯಲು ನಿರ್ಧರಿಸಲಾಯಿತಾದರೂ, ಡಿಸಿಎಂ ಆದಿಯಾಗಿ ಕೆಲವು ಸಚಿವರ ಬೇಡಿಕೆಗಳಿಗೆ ಪೊಲೀಸರೇ ಬೆಸ್ತುಬಿದ್ದಿದ್ದಾರೆ.

ಆಹಾರ ವಿತರಣಾ ಕಂಪನಿಯೊಂದು ತನಗೆ 10 ಸಾವಿರ ಪಾಸ್ ನೀಡಬೇಕು, ಯಾರಿಗೆ ಕೊಡಬೇಕೆಂದು ತಾನೇ ನಿರ್ಧರಿಸುವುದಾಗಿ ಹೇಳಿತು. ಇದಕ್ಕೆ ಒಪ್ಪಿದರೆ ಪಾಸ್ ದುರ್ಬಳಕೆಯಾಗಿ ಅನಗತ್ಯ ವ್ಯಕ್ತಿಗಳು ರಸ್ತೆಗಿಳಿಯಬಹುದು ಎಂಬುದು ಪೊಲೀಸರ ಅಭಿಪ್ರಾಯ. ಒಟ್ಟಾರೆ ಯಾವುದರಲ್ಲೂ ಸ್ಪಷ್ಟತೆ ಇಲ್ಲ. ದಿನಸಿ, ತರಕಾರಿ ಸುಲಲಿತವಾಗಿ ಜನರಿಗೆ ಸಿಗಬೇಕು, ಲಾಕ್​ಡೌನ್ ಎಂದು ಜನ ಪರದಾಡಬಾರದು ಎಂಬ ಹಿತಚಿಂತನೆ ಸರ್ಕಾರದ್ದು. ಆದರೆ, ಕಳೆದ ಎರಡು ದಿನವೂ ಪ್ರಮುಖ ನಗರಗಳ ಸಂತೆಗಳಲ್ಲಿ ಸಾವಿರಾರು ಜನ ಒಟ್ಟಿಗೆ ಸೇರುತ್ತಿದ್ದಾರೆ. ಲಾಕ್​ಡೌನ್ ಉದ್ದೇಶವೇ ಸಾರ್ಥಕವಾಗುತ್ತಿಲ್ಲವಾಗಿದೆ.

ಅನಗತ್ಯವಾಗಿ ತಿರುಗುವವರ ಮೇಲೆ ಲಾಠಿ ಬೀಸಿ ನಿಯಂತ್ರಿಸಿದ್ದಕ್ಕೆ ಸರ್ಕಾರದಲ್ಲಿ ಆಕ್ಷೇಪ ಕೇಳಿಬಂತು. ತಿಳಿ ಹೇಳಬೇಕಿತ್ತು, ಲಾಠಿ ಬೀಸುವುದು ತಪ್ಪು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಈ ಅಭಿಪ್ರಾಯಕ್ಕೆ ಪೊಲೀಸ್ ವಲಯದಿಂದ ಆಕ್ಷೇಪ ವ್ಯಕ್ತವಾಗಿದೆ. ಮನವೊಲಿಕೆ ವಾತಾವರಣ ಸದ್ಯ ಇಲ್ಲ, ಸಮಾಧಾನದಲ್ಲಿ ಹೇಳಿದರೆ ಕೇಳುವ ವ್ಯವಧಾನ ರಸ್ತೆಯಲ್ಲಿ ಖಾಲಿಪೋಲಿ ಸುತ್ತುವವರಿಗೆ ಇರುವುದಿಲ್ಲ. ದಂಡಪ್ರಯೋಗವಿಲ್ಲದೆ ಕೆಲವು ಕಡೆಗಳಲ್ಲಿ ನಿಯಂತ್ರಣ ಕಷ್ಟ, ಒಂದು ವೇಳೆ ನಾವು ಲಾಠಿ ಬೀಸಬಾರದೆಂದರೆ ಸುಮ್ಮನಿರುತ್ತೇವೆ ಎಂದು ಪೊಲೀಸರು ಸರ್ಕಾರದ ಮಟ್ಟದಲ್ಲೇ ಅಭಿಪ್ರಾಯ ವ್ಯಕ್ತಮಾಡಿದ್ದಾರೆ. ಈ ಭಾವನೆಗೆ ಅನುಗುಣವಾಗಿಯೇ, ಸರ್ಕಾರದ ದ್ವಂದ್ವದ ಕಾರಣಕ್ಕಾಗಿಯೇ ಶುಕ್ರವಾರ ಪೊಲೀಸರು ರಸ್ತೆಗಳಲ್ಲಿ ಸಂಯಮ ಕಾಯ್ದುಕೊಂಡರು. ಪರಿಣಾಮ ಅಪರಿಮಿತ ಪ್ರಮಾಣದಲ್ಲಿ ವಾಹನಗಳು ರಸ್ತೆಗಿಳಿದಿದ್ದವು. ಜನರು ತಮ್ಮ ಕುಟುಂಬಸ್ಥರ ಮನೆಗಳಿಗೆ ಹೋಗಿಬರುವುದು, ಖಾಲಿ ರಸ್ತೆಯಲ್ಲಿ ಜಾಲಿ ರೈಡ್ ಮಾಡಿದ್ದು ಕಾಣಿಸಿತು.

ಸರಣಿ ಸಭೆ: ಪರಿಸ್ಥಿತಿ ನಿಯಂತ್ರಣಕ್ಕಾಗಿಯೇ ಮುಖ್ಯಮಂತ್ರಿ, ಗೃಹ ಸಚಿವರ ಹಂತದಲ್ಲಿ ದಿನಕ್ಕೆ ಆರು ತಾಸು ಸಭೆಗಳಿಗೇ ಮೀಸಲಾಗುತ್ತಿದೆ. ಅಷ್ಟಾದರೂ ಒಂದು ತೀರ್ವನಕ್ಕೆ ಬರಲಾಗುತ್ತಿಲ್ಲ. ಸಭೆಯಲ್ಲಿ ಒಂದು ನಿಲುವಿಗೆ ಬಂದರೂ ಅನುಷ್ಠಾನ ಹಂತದಲ್ಲಿ ಅಡೆತಡೆ ಉಂಟಾಗುತ್ತಿದೆ.

ರಾಜ್ಯದ ಕ್ರಮ ಮೆಚ್ಚಿದ ಪಿಎಂ

ಮುಸ್ಲಿಂ ಸಮುದಾಯದ ಪ್ರಮುಖರನ್ನು ಕರೆದು ಸಾಮೂಹಿಕ ನಮಾಜ್ ಮಾಡದಂತೆ ಮನವೊಲಿಸುವಲ್ಲಿ ಸಫಲವಾಗಿದ್ದನ್ನು ಪ್ರಧಾನಿ ನರೇಂದ್ರ ಮೋದಿಯವರು ಮೆಚ್ಚಿದ್ದಾರೆ. ಶುಕ್ರವಾರ ರಾಜ್ಯದಲ್ಲಿ ಈ ವರೆಗೆ ಕೈಗೊಂಡ ಕ್ರಮಗಳನ್ನು ಆಲಿಸಿದ ಪ್ರಧಾನಿ, ಸಾಮೂಹಿಕ ನಮಾಜ್ ನಿಲ್ಲಿಸುವಲ್ಲಿ ಸರ್ಕಾರ ಸಫಲವಾಗಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಸಭೆಯ ವಿಡಿಯೋ ಕಳಿಸುವಂತೆಯೂ ಕೋರಿದ್ದಾರೆ. ಬೇರೆ ರಾಜ್ಯಗಳೂ ಇದೇ ದಾರಿ ಅನುಸರಿಸಲು ಸಲಹೆ ನೀಡುವುದಾಗಿ ಹೇಳಿದರೆಂದು ತಿಳಿದುಬಂದಿದೆ.

ಇಂದು ಪ್ಲಾನ್ ಸಲ್ಲಿಕೆ

ಯಾವ ರೀತಿ 21 ದಿನ ಜನರನ್ನು ಮನೆಯಲ್ಲಿ ಇಡಬಹುದು, ಹೇಗೆ ರಸ್ತೆಗೆ ಇಳಿಯದಂತೆ ನೋಡಿಕೊಳ್ಳಬಹುದು? ಯಾವೆಲ್ಲ ಕಠಿಣ ಕ್ರಮ ಅನಿವಾರ್ಯ? ಅದರ ಅನುಷ್ಠಾನ ಕ್ರಮ ಹೇಗೆ? ಎಂಬ ಬಗ್ಗೆ ಪೊಲೀಸರು ಶುಕ್ರವಾರ ನೀಲಿ ನಕ್ಷೆಯೊಂದನ್ನು ಸಿದ್ಧಪಡಿಸಿದ್ದು, ಶನಿವಾರ ಮುಖ್ಯಮಂತ್ರಿಗೆ ಸಲ್ಲಿಗೆ ಒಪ್ಪಿಗೆ ಪಡೆದುಕೊಳ್ಳಲಿದ್ದಾರೆ. ಬಳಿಕ ಮಾರ್ಪಾಡುಗಳು ಅಗತ್ಯವಿದ್ದರೆ ಮಾಡಿಕೊಂಡು ತಕ್ಷಣದಿಂದಲೇ ಆ ಯೋಜನೆ ಪ್ರಕಾರ ಬಿಗಿ ಕ್ರಮಕ್ಕೆ ಕೈಹಾಕುವರು.

ಮೃತಪಟ್ಟವರನ್ನು ಸುಡಲಾಗುತ್ತೆ

ಕರೊನಾ ಸೋಂಕು ದೃಢಪಟ್ಟು ಮೃತಪಟ್ಟವರು ಯಾವುದೇ ಧರ್ಮದವರಾದರೂ ಸರಿ ಮೃತದೇಹವನ್ನು ಸುಡಲಾಗುತ್ತದೆ. ಇದನ್ನು ಎಲ್ಲ ಸಮುದಾಯಗಳಿಗೆ ಮನವರಿಕೆ ಮಾಡಿಕೊಡುವ ಬಗ್ಗೆ ಸರ್ಕಾರದಲ್ಲಿ ಚರ್ಚೆ ನಡೆದಿದೆ. ಒಂದು ವೇಳೆ ಸೋಂಕಿತ ವ್ಯಕ್ತಿಯನ್ನು ಹೂಳಿದರೆ ಸೋಂಕು ಬೇರೆ ರೂಪಗಳಲ್ಲಿ ಹೊರಬರುವ ಸಾಧ್ಯತೆ ಇರುತ್ತದೆ ಎಂಬ ಅಂಶವನ್ನು ಮೃತರ ಸಂಬಂಧಿಗಳಿಗೆ, ಸಂಬಂಧಪಟ್ಟ ಸಮುದಾಯಗಳಿಗೆ ತಿಳಿಸುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆದಿದೆ.

ಗಡಿಯಲ್ಲಿ ಭಯ

ರಸ್ತೆಯಲ್ಲಿ ಅನಗತ್ಯವಾಗಿ ಓಡಾಡುವವರನ್ನು ತಡೆಯಲು ಸರ್ಕಾರ ಹರಸಾಹಸ ಪಡುತ್ತಿರುವಾಗಲೇ ಗಡಿ ಸಮಸ್ಯೆ ತಲೆದೋರುವ ಹಂತ ತಲುಪಿದೆ. ಲಾಕ್​ಡೌನ್ ಕಾರಣಕ್ಕೆ ರಾಜ್ಯದ ಎಲ್ಲಾ ಗಡಿ ಮುಚ್ಚಲಾಗಿದೆ. ಯಾರನ್ನೂ ಒಳಗೆ ಬಿಟ್ಟುಕೊಳ್ಳುತ್ತಿಲ್ಲ. ಕೆಲಸದ ನಿಮಿತ್ತ ಪರರಾಜ್ಯಕ್ಕೆ ಹೋದ ಕಾರ್ವಿುಕರು ಕೆಲವು ಕಡೆಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಗಡಿ ಬಂದು ಒಳ ಬರಲು ಕಾಯ್ದಿದ್ದಾರೆ. ಕೆಲವೊಂದು ಕಡೆ ಬಿಗುವಿನ ವಾತಾವರಣವಿದ್ದು, ಕಾನೂನು ಸುವ್ಯವಸ್ಥೆ ಕೈತಪ್ಪುವ ಆತಂಕ ಸರ್ಕಾರಕ್ಕಿದೆ ಎಂದು ಮೂಲಗಳು ತಿಳಿಸಿವೆ. ಆದರೆ, ಯಾವುದೇ ಕಾರಣಕ್ಕೂ ಗಡಿ ತೆರುವುಗೊಳಿಸುವ ಪ್ರಶ್ನೆಯೇ ಇಲ್ಲ, ಬೇರೆ ಪರಿಹಾರ ಮಾರ್ಗದ ಬಗ್ಗೆ ಯೋಚಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

2 ಲಕ್ಷ ಕಿಟ್ ಖರೀದಿಗೆ ಆದೇಶ

ಕರೊನಾ ಸೋಂಕಿತರನ್ನು ಪರೀಕ್ಷೆ ನಡೆಸುವಲ್ಲಿ ಈ ವರೆಗೂ ನಿರೀಕ್ಷಿತ ಪ್ರಗತಿ ಸಾಧಿಸದ ರಾಜ್ಯ, 2 ಲಕ್ಷ ಪರೀಕ್ಷಾ ಕಿಟ್ ಖರೀದಿಗೆ ಆದೇಶ ನೀಡಿದೆ. ಸಂಪುಟ ಸಭೆಯಲ್ಲಿ ಈ ವಿಚಾರ ಪ್ರಸ್ತಾಪವಾಗಿದೆ. ಈ ವರೆಗೆ ರಾಜ್ಯದಲ್ಲಿ 2838 ಪರೀಕ್ಷೆಗಳನ್ನಷ್ಟೇ ನಡೆಸಲಾಗಿದೆ. ಕ್ವಾರಂಟೈನ್​ಗೆ ಹೆಚ್ಚು ಪ್ರಾತಿನಿಧ್ಯ ನೀಡಲಾಗುತ್ತಿದೆ. ಒಮ್ಮೆ ದೊಡ್ಡ ಪ್ರಮಾಣದಲ್ಲಿ ಪರೀಕ್ಷಾ ಕಿಟ್ ಲಭ್ಯವಾದರೆ ಹೆಚ್ಚೆಚ್ಚು ಪರೀಕ್ಷೆ ನಡೆಸಿ ಸೋಂಕಿತರನ್ನು ಗುರುತಿಸಿ ಅವರಿಗೆ ಚಿಕಿತ್ಸೆ ನೀಡಿ, ಉಳಿದವರಿಗೆ ಹರಡದಂತೆ ಕ್ರಮಕೈಗೊಳ್ಳಬಹುದೆಂದು ಅಧಿಕಾರಿಗಳು ಹೇಳುತ್ತಾರೆ.

ಆಗಬೇಕಾದ ಕ್ರಮಗಳೇನು

  • ಅನಗತ್ಯವಾಗಿ ರಸ್ತೆಗಿಳಿಯುವ ಪರಿಪಾಠಕ್ಕೆ ಕೊನೆ ಹಾಡಲು ಪೊಲೀಸರಿಗೆ ಹೆಚ್ಚಿನ ಅಧಿಕಾರ, ದಂಡಿಸುವ ಅವಕಾಶ ಸಿಗಬೇಕು, ಜನರ ಮಾರುಕಟ್ಟೆ ವ್ಯಾಮೋಹ ನಿಯಂತ್ರಿಸಲು ಮಾರಾಟದ ಅವಧಿಯನ್ನು ಬೆಳಗಿನ ಒಂದೆರಡು ಗಂಟೆಗೆ ಸೀಮಿತಗೊಳಿಸುವುದು
  • ಮಾರುಕಟ್ಟೆಗೆ ತೆರಳುವ ನೆಪದಲ್ಲಿ ಜನರ ಓಡಾಟವನ್ನು ತಡೆಯಲು ಬಡಾವಣೆಯೊಳಗೆ ತಕ್ಷಣ ಪರಿಹಾರ ಕಂಡುಕೊಳ್ಳುವುದು, ಮಾರಾಟಗಾರರ ಮನವೊಲಿಸಿ ಮನೆ ಮನೆ ಮಾರಾಟಕ್ಕೆ ಕಾಲಮಿತಿ ನೀಡಿ ಅವಕಾಶ ನೀಡುವುದು.
  • ಅಗತ್ಯ ಸೇವೆಯಲ್ಲಿರುವವರು ಹೆಚ್ಚಾಗಿ ಸಾರ್ವಜನಿಕ ಸಾರಿಗೆ (ಬೆಂಗಳೂರಲ್ಲಿ ಬಿಎಂಟಿಸಿ)ಯನ್ನೇ ಬಳಸುವುದು. (ಕೆಲವಕ್ಕೆ ರಿಯಾಯಿತಿ), ರಾಜ್ಯ ಗಡಿಯಲ್ಲಿ ಭದ್ರ ಮಾಡಿದಂತೆ ವಾರ್ಡ್ ವಾರು ಅಥವಾ ಪ್ರಮುಖ ರಸ್ತೆವಾರು ಗಡಿ ನಿರ್ವಿುಸುವುದು.
  • ಅನಗತ್ಯ ಓಡಾಡುವವರ ವಾಹನವನ್ನು ವಶಕ್ಕೆ ಪಡೆಯುವ ಪ್ರಮಾಣ ಹೆಚ್ಚಿಸಿ ಬಿಸಿ ಮುಟ್ಟಿಸುವುದು, ಗಲ್ಲಿ, ಮೊಹಲ್ಲಾಗಳಲ್ಲಿ ಬೀಟ್ ಹೆಚ್ಚಿಸಿ, ಜಾಗೃತಿಗೆ ಕರೆಕೊಡುವುದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net