ಕೇರಳ ಲಾಬಿಗೆ ರಾಜ್ಯ ಸರ್ಕಾರ ಮಣಿಯದಿರಲಿ

Published on

ಗುಂಡ್ಲುಪೇಟೆ: ರೈತರು ಹಾಗೂ ಅರಣ್ಯ ಸಂರಕ್ಷಣೆ ಹಿತಾಸಕ್ತಿಯಿಂದ ಬಂಡೀಪುರದ ರಸ್ತೆಗಳಲ್ಲಿ ರಾತ್ರಿ ಸಂಚಾರ ತೆರವಿಗೆ ಕೇರಳ ಸರ್ಕಾರ ನಡೆಸುತ್ತಿರುವ ಲಾಬಿಗೆ ಕರ್ನಾಟಕ ಸರ್ಕಾರ ಮಣಿಯಬಾರದು ಎಂದು ಪರಿಸರವಾದಿ ಎಸ್.ಎಂ.ನಾಗಾರ್ಜುನಕುಮಾರ್ ಒತ್ತಾಯಿಸಿದರು.

ಪೂರ್ವ ಮತ್ತು ಪಶ್ಚಿಮಘಟ್ಟಗಳು ಸಂಗಮಿಸುವ ಬಂಡೀಪುರ ಅರಣ್ಯ ಅತೀ ಸೂಕ್ಷ್ಮ ಜೀವ ವೈವಿಧ್ಯದ ತಾಣವಾಗಿದ್ದು ಇದನ್ನು ಕಾಪಾಡಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. ರಾತ್ರಿ ಸಂಚರಿಸುವ ವಾಹನಗಳಿಗೆ ಸಿಲುಕಿ ವನ್ಯಜೀವಿಗಳು ಸಾವಿಗೀಡಾಗುತ್ತಿದ್ದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ರಾತ್ರಿ ವಾಹನ ಸಂಚಾರ ನಿರ್ಬಂಧಿಸಿತ್ತು. ಈ ಸಂಬಂಧ ಕೇರಳ ಸರ್ಕಾರ ನ್ಯಾಯಾಲಯದ ಮೆಟ್ಟಿಲೇರಿದ್ದು ಇನ್ನೂ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ರಾತ್ರಿ ಸಂಚಾರ ನಿರ್ಬಂಧಿಸಿದ ನಂತರ ಪರ್ಯಾಯ ರಸ್ತೆ ನಿರ್ಮಿಸಿ ಬಳಕೆಗೆ ತರಲಾಗಿದೆ. ಆದರೆ, ಕೇರಳ ಸರ್ಕಾರದ ಒತ್ತಾಯಕ್ಕೆ ಮಣಿದು ರಾಜ್ಯ ಸರ್ಕಾರ ಬಂಡೀಪುರ ರಸ್ತೆಯಲ್ಲಿ ರಾತ್ರಿ ಸಂಚಾರಕ್ಕೆ ಇರುವ ನಿರ್ಬಂಧ ಸಡಿಸಲು ಸಿದ್ದತೆ ನಡೆಸಲಾಗುತ್ತಿದೆ ಎಂಬ ಆತಂಕಕಾರಿ ಮಾಹಿತಿ ಸಿಕ್ಕಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ಕಾರಣ ಏ.6ರಂದು ಸ್ಥಳೀಯರು, ರೈತ ಮತ್ತು ಕನ್ನಡ ಸಂಘಟನೆಗಳ ಸಹಕಾರದಿಂದ ಸುಲ್ತಾನ್ ಭತ್ತೇರಿ ರಸ್ತೆಯ ಕಗ್ಗಳದಹುಂಡಿ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಮದ್ದೂರು ಚೆಕ್ ಪೋಸ್ಟ್‌ವರೆಗೆ ಪಾದಯಾತ್ರೆ ಆಯೋಜಿಸಲಾಗಿದೆ. ಚಾಮರಾಜನಗರ, ಮೈಸೂರು ಹಾಗೂ ರಾಜ್ಯಾದ್ಯಂತ ಇರುವ ಪರಿಸರ ಪ್ರೇಮಿಗಳು ಪಾಲ್ಗೊಳ್ಳುತ್ತಿದ್ದಾರೆ. ತಾಲೂಕು ಮತ್ತು ಜಿಲ್ಲೆಯ ಪರಿಸರ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಸೇವ್ ಬಂಡೀಪುರ ಹೋರಾಟ ಸಮಿತಿ ಸದಸ್ಯ ಮಡಹಳ್ಳಿ ಮಣಿ, ನಮ್ಮ ಬಂಡೀಪುರ ಸಂಘಟನೆಯ ತಾರಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net